
Uttara kannada/ಕಾರವಾರ: ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಸ್ಥೆಗಳು ಸೈಬರ್ ವಂಚನೆ ಕುರಿತು ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುತ್ತಿದ್ದರೂ, ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ದಾಖಲಾಗಿರುವ 237 ಸೈಬರ್ ವಂಚನೆ ಪ್ರಕರಣಗಳಿಂದ ಸಾರ್ವಜನಿಕರು ಒಟ್ಟು ₹26.06 ಕೋಟಿ ಹಣ ಕಳೆದುಕೊಂಡಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ವಂಚನೆಗೊಳಗಾದ ಹಣದಲ್ಲಿ ಸುಮಾರು ₹1.85 ಕೋಟಿ ಮೊತ್ತವನ್ನು ಮಾತ್ರ ಪೊಲೀಸರು ಪತ್ತೆಹಚ್ಚಿ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅವಧಿಯಲ್ಲಿ ವಿವಿಧ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 14 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಗೃಹ ಸಚಿವಾಲಯದ ಮಾಹಿತಿ ತಿಳಿಸಿದೆ. ಇದನ್ನೂ ಓದಿ:-Cyber crime -ಡಿಜಿಟಲ್ ಅರೆಸ್ಟ್’ ನೆಪದಲ್ಲಿ 1.74 ಕೋಟಿ ವಂಚನೆ:ಇಬ್ಬರ ಬಂಧನ
ವಿವಿಧ ರೀತಿಯಲ್ಲಿ ವಂಚಿಸಿ ಬಲೆಗೆ.
ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ ಆಮಿಷವೊಡ್ಡುವುದು, ಷೇರು ಮಾರುಕಟ್ಟೆಯಲ್ಲಿ ಭಾರಿ ಲಾಭ ಕೊಡಿಸುವುದಾಗಿ ನಂಬಿಸುವುದು, ನಕಲಿ ಹೂಡಿಕೆ ಯೋಜನೆಗಳನ್ನು ಪರಿಚಯಿಸುವುದು ಸೇರಿದಂತೆ ಹಲವು ಮಾರ್ಗಗಳನ್ನು ಸೈಬರ್ ವಂಚಕರು ಬಳಸುತ್ತಿದ್ದಾರೆ.
ಇದರ ಜೊತೆಗೆ ಬ್ಯಾಂಕ್ ಅಧಿಕಾರಿಗಳು ಅಥವಾ ಸರ್ಕಾರಿ ಇಲಾಖೆಯ ಸಿಬ್ಬಂದಿಯಂತೆ ಕರೆ ಮಾಡಿ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆ ಮಾಹಿತಿಯನ್ನು ಪಡೆದುಕೊಳ್ಳುವುದು, ಕೆವೈಸಿ ಅಪ್‌ಡೇಟ್ ನೆಪದಲ್ಲಿ ವಿವರ ಕೇಳುವುದು, ಒಟಿಪಿ ಪಡೆದು ಖಾತೆಯಿಂದ ಹಣ ವರ್ಗಾಯಿಸುವಂತಹ ಪ್ರಕರಣಗಳೂ ನಡೆಯುತ್ತಿವೆ.
ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರನ್ನು ಸಂಪರ್ಕಿಸಿ ಹೂಡಿಕೆ ಅಥವಾ ಉದ್ಯೋಗದ ಆಮಿಷವೊಡ್ಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುವ ಪ್ರಕರಣಗಳೂ ಜಿಲ್ಲೆಯಲ್ಲಿ ವರದಿಯಾಗುತ್ತಿವೆ.ಇದನ್ನೂ ಓದಿ:-Cyber crime| ಕೊಠಡಿಯಲ್ಲಿ ಗಂಡ ಹೆಂಡತಿ Digital Arrest ಏನದು ಘಟನೆ?
ವಂಚನೆಗೊಳಗಾದರೂ ದೂರು ನೀಡುವುದರಲ್ಲಿ ವಿಳಂಬ -ಹಣ ಕಳೆದುಕೊಳ್ಳುತ್ತಿರವ ಸೈಬರ್ ವಂಚಿತರು
ಸೈಬರ್ ವಂಚನೆಗೆ ಒಳಗಾದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಮುಖ್ಯವಾಗಿದೆ. ವಂಚನೆ ನಡೆದ ತಕ್ಷಣ ದೂರು ದಾಖಲಿಸಿದರೆ ಹಣದ ವಹಿವಾಟನ್ನು ತಡೆಹಿಡಿಯುವ ಅಥವಾ ಹಣವನ್ನು ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಆದರೆ ಕೆಲವರು ವಂಚನೆ ನಡೆದ ಬಳಿಕ ತಕ್ಷಣ ಪೊಲೀಸರನ್ನು ಸಂಪರ್ಕಿಸದೆ ಹಲವು ದಿನಗಳ ನಂತರ ದೂರು ನೀಡುತ್ತಾರೆ. ಕೆಲವರು ಮುಜುಗರ ಅಥವಾ ಭಯದಿಂದಲೂ ವಿಷಯವನ್ನು ಮುಚ್ಚಿಡುತ್ತಾರೆ. ಇದರಿಂದ ಹಣ ಯಾವ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆಹಚ್ಚುವುದು ಹಾಗೂ ಹಣವನ್ನು ಮರಳಿ ಪಡೆಯುವುದು ಪೊಲೀಸರಿಗೆ ಮತ್ತಷ್ಟು ಸವಾಲಾಗುತ್ತದೆ.ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ದೂರಿನಲ್ಲಿ ಪ್ರಕರಣ ಇತ್ಯರ್ಥ ಪಡಿಸುವ ಅಥವಾ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಸೈಬರ್ ಠಾಣೆ ಪೊಲೀಸರಿಗೂ ಕಷ್ಟವಾಗುತ್ತಿದೆ.
ದೂರು ನೀಡಲು ಹಿಂಜರಿಕೆ.
ಕಳೆದ ವರ್ಷ ಅಂಕೋಲದ ವೈದ್ಯರೊಬ್ಬರು ಸೋಷಿಯಲ್ ಮೀಡಿಯಾ ಜಾಹಿರಾತು ನಂಬಿ ಕನ್ನಡಕದಲ್ಲೇ ಬಾಡಿ ಸ್ಕ್ಯಾನ್ ಮಾಡುವ ಕನ್ನಡಕಕ್ಕೆ ಆರ್ಡರ್ ಮಾಡಿದ್ದರು. ಹೀಗೆ ಆರ್ಡರ್ ಮಾಡಿದ್ದ ಅವರಿಗೆ ವಂಚಕರು ಹಂತ ಹಂತವಾಗಿ 20 ಲಕ್ಷಕ್ಕೂ ಹೆಚ್ಚು ಹಣ ಪಂಗನಾಮ ಹಾಕಿದ್ದರು.ಆದರೇ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ಮಾಹಿತಿಯನ್ನು ನೀಡದೇ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು.ಕೊನೆಗೆ ಮೂರು ತಿಂಗಳ ನಂತರ ದೂರು ನೀಡಿದರು.ಆದರೇ ವಂಚಕರನ್ನ ಹಿಡಿಯಲು ಸಾಧ್ಯವಾಗಿಲ್ಲ. ಇನ್ನು ಯಲ್ಲಾಪುರದ ನಿವೃತ್ತ ಸರ್ಕಾರಿ ನೌಕರರೊಬ್ಬರು ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಗೆ ಸಾಲ ಎಂದು ಲಕ್ಷ ಲಕ್ಷ ಹಣ ಚಲ್ಲಿದ್ದರು.ಎಲ್ಲಿ ಆ ನಖಲಿ ಖಾತೆಯ ಮಹಿಳೆ ಮತ್ತೆ ಸ್ಪಂದಿಸದೇ ಹೋದಾಗ ದೂರು ನೀಡಿದರು. ಇನ್ನು ಶಿರಸಿಯ ಶ್ರೀಮಂತ ವ್ಯಕ್ತಿಯೊಬ್ಬರು ಮಹಿಳೆಯ ಫೋಟೋ ನೋಡಿ ನಂತರ ಫೇಸ್ ಬುಕ್ ನಲ್ಲಿ ವಿಡಿಯೋ ಚಾಟ್ ಮಾಡಿ ಸಲುಗೆ ಪ್ರೀತಿ ಪ್ರೇಮಕ್ಕೆ ತಿರುಗೆ ಲಕ್ಷ ಲಕ್ಷ ಹಣ ಆಕೆಯ ಖಾತೆಗೆ ಹಾಕಿದ್ದರು. ಹೀಗೆ ಹಾಕಿದ ಹಣ 20 ಲಕ್ಷ ದಾಟಿತ್ತು. ನಂತರ ಆಕೆ ಇವರ ಸಂಪರ್ಕಕ್ಕೆ ಸಿಗದೆ ಹೋದಾಗ ವಿಚಲಿತರಾಗಿದ್ದ ಅವರು ಕೊನೆಗೆ ತಾನು ವಂಚನೆಗೊಳಗಾದ ಕುರಿತು ಅರಿತು ಮಾನ ಮರ್ಯಾದೆಗೆ ಅಂಜಿ ದೂರು ಕೊಡದೇ ಹಿಂದೆ ಸರಿದುಬಿಟ್ಟರು.ಹೀಗೆ ವಂಚಕರು ವ್ಯಕ್ತಿಗಳ ನ್ಯೂನ್ಯತೆ ಅರಿತು ಗಾಳ ಹಾಕುತಿದ್ದು ವಂಚಕರ ಬಲೆಗೆ ಜಿಲ್ಲೆಯ ಜನ ಬಲಿಯಾಗುತಿದ್ದಾರೆ.
ಸುಶಿಕ್ಷಿತರೇ ಹೆಚ್ಚು ಸೈಬರ್ ವಂಚನೆಗೆ ಬಲಿ

ಸೈಬರ್ ವಂಚನೆಗೆ ಅನಕ್ಷರಸ್ಥರಷ್ಟೇ ಬಲಿಯಾಗುತ್ತಾರೆ ಎಂಬ ಕಲ್ಪನೆ ತಪ್ಪಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಪಡೆದವರೂ ಆನ್‌ಲೈನ್ ವಂಚನೆಗೆ ಸಿಲುಕುತ್ತಿರುವುದು ಗಮನಾರ್ಹವಾಗಿದೆ.
ವಿಶೇಷವಾಗಿ ನಿವೃತ್ತ ನೌಕರರನ್ನು ಗುರಿಯಾಗಿಸಿಕೊಂಡು ಷೇರು ಮಾರುಕಟ್ಟೆ ಹಾಗೂ ಆನ್‌ಲೈನ್ ಹೂಡಿಕೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿ ನಂಬಿಸಿ ಹಣ ಹೂಡಿಸುವಂತೆ ಮಾಡಲಾಗುತ್ತಿದೆ. ನಿವೃತ್ತಿ ನಂತರ ದೊರೆತ ಹಣ ಹಾಗೂ ಜೀವನಪರ್ಯಂತ ಕೂಡಿಟ್ಟ ಉಳಿತಾಯವನ್ನು ಇಂತಹ ನಕಲಿ ಹೂಡಿಕೆ ವೇದಿಕೆಗಳಲ್ಲಿ ಹೂಡಿಕೆ ಮಾಡಿ ದೊಡ್ಡ ಮೊತ್ತ ಕಳೆದುಕೊಂಡ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಕೆಲವು ಪ್ರಕರಣಗಳಲ್ಲಿ ಆರಂಭದಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಿಸಿಕೊಂಡು ಲಾಭ ಬರುತ್ತಿರುವಂತೆ ತೋರಿಸಿ, ನಂತರ ಹೆಚ್ಚಿನ ಮೊತ್ತ ಹೂಡಿಕೆ ಮಾಡುವಂತೆ ವಂಚಕರು ಒತ್ತಡ ಹೇರುತ್ತಾರೆ. ಇದನ್ನು ನಂಬಿ ಸಾಲ ಮಾಡಿ ಹಣ ಹೂಡಿಕೆ ಮಾಡುವವರೂ ವಂಚನೆಗೆ ಒಳಗಾಗುತ್ತಿದ್ದಾರೆ.
ಜಾಗೃತಿಯೇ ಸೈಬರ್ ವಂಚನೆಗೆ ಪ್ರಮುಖ ತಡೆ
ಸೈಬರ್ ವಂಚನೆ ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿ ಜಾಗೃತಿ ವಿಡಿಯೋ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಆನ್‌ಲೈನ್ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಸಂದೇಶ ಅಥವಾ ಲಿಂಕ್‌ಗಳಿಗೆ ಪ್ರತಿಕ್ರಿಯಿಸುವ ಮುನ್ನ ಎಚ್ಚರಿಕೆ ವಹಿಸುವುದು, ಒಟಿಪಿ, ಪಾಸ್‌ವರ್ಡ್, ಬ್ಯಾಂಕ್ ವಿವರ ಹಾಗೂ ಇತರ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಅಗತ್ಯವಾಗಿದೆ.
ಸೈಬರ್ ವಂಚನೆ ನಡೆದಿರುವುದು ಗೊತ್ತಾದ ತಕ್ಷಣವೇ ವಿಳಂಬ ಮಾಡದೆ ಸಂಬಂಧಿಸಿದ ಸೈಬರ್ ಕ್ರೈಂ ವಿಭಾಗ ಅಥವಾ 1930 ಸೈಬರ್ ಸಹಾಯವಾಣಿ ಮೂಲಕ ದೂರು ನೀಡುವುದು ಹಣವನ್ನು ತಡೆಹಿಡಿಯುವ ಪ್ರಯತ್ನಕ್ಕೆ ನೆರವಾಗಬಹುದು. ಒಟ್ಟಿನಲ್ಲಿ ಪೊಲೀಸರು ಜಾಗೃತಿ ಮೂಡಿಸುತಿದ್ದರೂ ಜನ ಅದನ್ನ ಅರಿತುಕೊಳ್ಳದೇ ವಂಚನೆಗೊಳಗಾಗುತ್ತಿರುವುದು ಮಾತ್ರ ವಿಪರ್ಯಾಸ.


