


ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಜಿಲ್ಲೆಗಳಿಗೆ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಜಿಲ್ಲೆಗೆ ಘೋಷಣೆಯಾಗಿದ್ದೇನು ವಿವರ ಇಲ್ಲಿದೆ.
ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲ್ಲೂಕುಗಳ ಏಳು ದ್ವೀಪಗಳ ಅಭಿವೃದ್ಧಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಭಾಗದ ಮಧ್ಯಲಿಂಗಡ್, ದೇವಗಡ, ಹಾಗ್, ಮೊಂಗೆರಗುಡ್ಡ, ಕಿರಿಕುಂದ, ಅಂಕನಿ ಚೆಗ್ಗುಡು ಮತ್ತು ಕುರುಮಗಡ ದ್ವೀಪಗಳ ಒಟ್ಟು 59 ಎಕರೆ 31 ಗುಂಟೆ ಪ್ರದೇಶದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
307.71 ಕೋಟಿ ರೂ.ಆದಾಯ ಹಂಚಿಕೆಯಿಂದ 145.87 ಕೋಟಿ ರೂ.ವಾರ್ಷಿಕ ಗುತ್ತಿಗೆ ಶುಲ್ಕ 8.7 ಕೋಟಿ ರೂ. (ಪ್ರತಿ ವರ್ಷ ಶೇ. 5 ರ ಹೆಚ್ಚಳ) ಗಳಿಸುವ ನಿರೀಕ್ಷೆ ಹೊಂದಲಾಗಿದೆ.
ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) 2019 ರ ಪರಿಷ್ಕರಣೆ

Uttarakannada :-ಕರಾವಳಿ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಕರಾವಳಿ ನಿಯಂತ್ರಣ ವಲಯ (CRZ) ಚೌಕಟ್ಟಿನನ್ವಯ ಅನುಮತಿಸಬಹುದಾದ ಅಭಿವೃದ್ಧಿಗೆ ಅವಕಾಶ ಕಲ್ಪಿಸಲು ಹಾಗೂ ಕರಾವಳಿ ಭಾಗದ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) 2019 ಜಾರಿಯಲ್ಲಿದೆ.
2022 ರಲ್ಲಿ CZMP ಗೆ ಅನುಮೋದನೆ ದೊರೆತ ನಂತರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರರು, ಪ್ರವಾಸೋದ್ಯಮದ ಭಾಗೀದಾರರು, ಭೂಮಾಲೀಕರು, ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾ ಆಡಳಿತಗಳಿಂದ ಈ ನಕ್ಷೆಗಳು ಮತ್ತು ವಸ್ತುಸ್ಥಿತಿಯಲ್ಲಿ ವ್ಯತ್ಯಾಸವಿದ್ದು, ತಿದ್ದುಪಡಿ/ ಪರಿಷ್ಕರಣೆ ಮಾಡುವಂತೆ ಮನವಿಗಳು ಸ್ವೀಕಾರವಾಗಿವೆ.
ಈ ಹಿನ್ನೆಲೆಯಲ್ಲಿ CRZ ಅಧಿಸೂಚನೆ 2019 ರ ನಿಬಂಧನೆಗಳ ಪ್ರಕಾರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) 2019 ನ್ನು ನಿಯಮಾನುಸಾರ ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ.
ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು 98.24 ಕೋಟಿಗಳಿಂದ 250.05 ಕೋಟಿ ರೂ. ಗಳಿಗೆ ಹೆಚ್ಚಿಸಲು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ.
ಈ ಯೋಜನೆಯಿಂದ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಇದನ್ನೂ ಓದಿ:-Karwar | ₹26 ಲಕ್ಷ ಪಾವತಿಸಿದರೂ ಮತ್ತಷ್ಟು ಬಡ್ಡಿ ಬೇಡಿಕೆ ಆರೋಪ: ರಿವಾಲ್ವರ್‌ನಿಂದ ಗುಂಡಿಕ್ಕುವುದಾಗಿ ಬೆದರಿಕೆ; ದೂರು ದಾಖಲು
ಪ್ರಸ್ತುತ 2000 ಮೀಟರ್ ರನ್‌ವೇಯನ್ನು A-320 ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3250 ಮೀಟರ್‌ಗೆ ವಿಸ್ತರಿಸಲು ಉದ್ದೇಶಿಸಿದೆ.
ಇದರೊಂದಿಗೆ ಭೂಸ್ವಾಧೀನ ಮತ್ತು ಸಿವಿಲ್ ಎನ್‌ಕ್ಲೇವ್ ಅಭಿವೃದ್ಧಿಗೆ ಬಾಧಿತರ ಪುನರ್ವಸತಿಗೆ, ಸಂಪರ್ಕ ರಸ್ತೆ, ಸಿವಿಲ್ ಎನ್‌ಕ್ಲೇವ್ ನಿರ್ಮಾಣ ಮತ್ತಿತರ ವೆಚ್ಚಗಳಿಗಾಗಿ ಯೋಜನಾ ವೆಚ್ಚ ಹೆಚ್ಚಳವಾಗಿದೆ.
ಈ ವರೆಗೆ 93 ಎಕರೆ 22 ಗುಂಟೆ ಜಮೀನ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. 59 ಎಕರೆ 14 ಗುಂಟೆ ರನ್‌ವೇ ಮತ್ತು 32 ಎಕರೆ 20 ಗುಂಟೆ ಸಿವಿಲ್ ಎನ್‌ಕ್ಲೇವ್ ನಿರ್ಮಾಣಕ್ಕೆ ಅಗತ್ಯವಿದ್ದು ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಯನ್ನು 20 ಕೋಟಿ ರೂ. ವೆಚ್ಚದಲ್ಲಿ ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ವಿಶೇಷ ಸಮುದ್ರ ವಲಯ (SMZ)
ಕರ್ನಾಟಕದ ಕರಾವಳಿಯ ಮೀನುಗಾರಿಕೆಯ ಆರ್ಥಿಕ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ (uttarakannada ಜಿಲ್ಲೆಗಳ ಕರಾವಳಿಯನ್ನು ವಿಶೇಷ ಸಮುದ್ರ ವಲಯಗಳು (Special Marine Zone- SMZ) ಎಂದು ಅಧಿಸೂಚಿಸಲು ತೀರ್ಮಾನ ಮಾಡಲಾಗಿದೆ.ಇದರೊಂದಿಗೆ ಹೂಡಿಕೆ, ಉತ್ಪಾದನೆ, ಮೌಲ್ಯವರ್ಧನೆ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಗೆ ಅನುಕೂಲಕರ ವಾತಾವರಣ ನಿರ್ಮಿಸಲು ಮುಲ್ಕಿ ತಾಲ್ಲೂಕಿನ ಬಳ್ಕುಂಜೆಯಲ್ಲಿ ಮೀನುಗಾರಿಕಾ ಪಾರ್ಕ್‌ಗೆ ಮೀಸಲಿರಿಸಿರುವ 150 ಎಕರೆ ಪ್ರದೇಶದಲ್ಲಿ ವಿಶೇಷ ಸಂಸ್ಕರಣಾ ವಲಯವನ್ನು (Special Processing Zone- SPZ) 30 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಈ ಭಾಗದ ಮೀನುಗಾರಿಕಾ ಉತ್ಪನ್ನಗಳು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಪೂರೈಸುವಂತೆ ಮಾಡಲು ಸಾಮಾನ್ಯ ಮೀನುಗಾರಿಕಾ ಮೂಲಸೌಕರ್ಯ ಸೌಲಭ್ಯಗಳನ್ನು ಈ SPZ ನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.
ಮಂಕಿ ಬಂದರಿನ ಬಹು ಉಪಯೋಗಿ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿ.

ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ ಪಿಪಿಪಿ ಮಾದರಿಯಲ್ಲಿ Design-Build-Finance- Operate- Transfer (DBFOT) ಆಧಾರದ ಮೇಲೆ 15 MTPA ಸಾಮರ್ಥ್ಯದ ಬಹೂಪಯೋಗಿ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರದ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ.ಇದರ ಒಟ್ಟು ಯೋಜನಾ ವೆಚ್ಚ 6925 ಕೋಟಿ ರೂ. ಒಟ್ಟು 2902.69 ಕೋಟಿ ಖಚಿತ ಆದಾಯದ ನಿರೀಕ್ಷೆ ಹೊಂದಲಾಗಿದೆ.ಜೊತೆಗೆ ರಾಜ್ಯದ ಆರ್ಥಿಕತೆಗೆ 28,000 ಕೋಟಿ ರೂ. ಉತ್ತೇಜನ ನೀಡುವ ಗುರಿ ಹೊಂದಲಾಗಿದ್ದು,ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 44,800 ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆ (ಸೇವೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2026- ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಗಳಿಗೆ ಅವಕಾಶ:
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ) ನಿಯಮಗಳಂತೆ ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕ ವೃಂದಗಳ ನೇರ ನೇಮಕಾತಿ ಅಧಿಸೂಚನೆಗಳಲ್ಲಿ ಹೆಚ್ಚುವರಿಯಾಗಿ ಪರಿಶಿಷ್ಟ ಪಂಗಡ- ಸ್ಥಳೀಯ ಅರಣ್ಯ ಬುಡಕಟ್ಟು ಜನಾಂಗದವರನ್ನು ಸೇರ್ಪಡೆಗೊಳಿಸಲು ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಅನುಮೋದನೆ ನೀಡಿದೆ.
ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸ ಮಾಡುವ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:-CM ಸಂಪುಟ ಸಭೆ-ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಪುಟ ಅನುಮೋದನೆ
ಪರಿಶಿಷ್ಟ ಪಂಗಡದ 13 ಬುಡಕಟ್ಟು ಜನಾಂಗಗಳಿಗೆ ಈಗಾಗಲೇ ವಿಶೇಷ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚಿರುವ ಹಲಸರು, ಸಿದ್ದಿ, ಕುಡಿಯ, ಬೆಟ್ಟಕುರುಬ ಮತ್ತು ಪಣಿಯನ್ ಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡಗಳಿಗೆ ಈ ವಿಶೇಷ ಪ್ರಾತಿನಿಧ್ಯ ವಿಸ್ತರಿಸಲು ಈ ತಿದ್ದುಪಡಿ ಮಾಡಲಾಗಿದೆ.
ಜೊತೆಗೆ ಈ ವಿಶೇಷ ಪ್ರಾತಿನಿಧ್ಯತೆಗೆ ಈಗಾಗಲೇ ಇರುವ 11 ವನ್ಯಜೀವಿ ವಿಭಾಗಗಳೊಂದಿಗೆ ಹೊಸದಾಗಿ ಸೃಜಿಸಿದ ಕನಕಪುರ ವನ್ಯಜೀವಿ ವಿಭಾಗವನ್ನು ಸಹ ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ.
ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಒತ್ತು.
ರಾಜ್ಯದಲ್ಲಿ 1000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಅಭಿವೃದ್ಧಿಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 20, ಉಡುಪಿ ಜಿಲ್ಲೆಯ 12, ಉತ್ತರ ಕನ್ನಡ ಜಿಲ್ಲೆಯ 17 ಸೇರಿದಂತೆ ಈ ಭಾಗದ 49 ಶಾಲೆಗಳನ್ನು 245 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ADB ನೆರವಿನ ಯೋಜನೆಗಳಿಗೆ ಜಿಲ್ಲಾಮಟ್ಟದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್, KKRDB ಮತ್ತು CEPMIZ ಅನುದಾನದ ಯೋಜನೆಗಳಿಗೆ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುವ ಅಧಿಕಾರ ನೀಡಲು ನಿರ್ಧರಿಸಲಾಯಿತು.ಈ ಕಾಮಗಾರಿಗಳನ್ನು ಚುರುಕಾಗಿ ನಡೆಸಲು ಪೂರಕವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
