Cyber crime -ಡಿಜಿಟಲ್ ಅರೆಸ್ಟ್’ ನೆಪದಲ್ಲಿ 1.74 ಕೋಟಿ ವಂಚನೆ:ಇಬ್ಬರ ಬಂಧನ
ಕಾರವಾರ:ಮುಂಬೈ ಪೊಲೀಸರ ಸೋಗಿನಲ್ಲಿ ‘ಡಿಜಿಟಲ್ ಅರೆಸ್ಟ್’ (Digital Arrest) ಮಾಡುವುದಾಗಿ ಬೆದರಿಸಿ ಯಲ್ಲಾಪುರ (yallapur ) ತಾಲೂಕಿನ ವೃದ್ಧರೊಬ್ಬರಿಗೆ ಬರೋಬ್ಬರಿ 1.74 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲಾ ಸೈಬರ್ ಅಪರಾಧ (CEN) ಪೊಲೀಸರು ವಿಜಯಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Yallapur| ಅರೆಬೈಲ್ ಘಟ್ಟದಲ್ಲಿ ಕಾರು ಚಾಲಕನ ಸಮೇತ ಕಾರು ಸುಟ್ಟ ಪ್ರಕರಣ ಕ್ಕೆ ಬಿಗ್ ಟ್ವಿಸ್ಟ್ -ಮೂವರ ಬಂಧನ
ಯಲ್ಲಾಪುರ ತಾಲೂಕಿನ ಉಮ್ಮಚಗಿ ಮೂಲದ 69 ವರ್ಷದ ವೃದ್ಧ (ಎಲ್.ಐ.ಸಿ ಏಜೆಂಟ್ ಹಾಗೂ ರೈತ) ಈ ಭಾರೀ ವಂಚನೆಗೊಳಗಾದವರು. ಏಪ್ರಿಲ್ 21 ರಂದು ಇವರ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ವಿಡಿಯೋ ಕರೆ ಮಾಡಿದ್ದ ವಂಚಕರು, ತಾವು ಮುಂಬೈ ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. “ನಿಮ್ಮ ಆಧಾರ್ ಕಾರ್ಡ್ ಬಳಸಿ ಉಗ್ರರು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ” ಎಂದು ಬೆದರಿಸಿದ್ದರು.
“ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ರಿಸರ್ವ್ ಬ್ಯಾಂಕ್‌ಗೆ ಜಮಾ ಮಾಡಬೇಕು. ನಮ್ಮ ತನಿಖೆಯಲ್ಲಿ ನೀವು ನಿರ್ದೋಷಿ ಎಂದು ಸಾಬೀತಾದರೆ ಮಾತ್ರ ಹಣವನ್ನು ಮರಳಿಸುತ್ತೇವೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿಮ್ಮನ್ನು ಕೂಡಲೇ ಬಂಧಿಸುತ್ತೇವೆ” ಎಂದು ಹೆದರಿಸಿದ್ದರು. ಇದರಿಂದ ಭಯಭೀತರಾದ ವೃದ್ಧ, ಏಪ್ರಿಲ್ 21 ರಿಂದ 24ರ ನಡುವೆ ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 1,74,50,000 ರೂಪಾಯಿಗಳನ್ನು ವರ್ಗಾಯಿಸಿ ಮೋಸ ಹೋಗಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಅವರು, ಏಪ್ರಿಲ್ 28 ರಂದು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು.
ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಸಿಇಎನ್ ಡಿವೈಎಸ್‌ಪಿ ಬಿ. ಅಶ್ವಿನಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ಈ ತಂಡವು ಕಾರ್ಯಾಚರಣೆ ನಡೆಸಿ, ಮೇ 1 ರಂದು ವಿಜಯಪುರ ಮೂಲದ 23 ಹಾಗೂ 24 ವರ್ಷದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ.
ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ವಿಷಯ.
ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ದೇಶಾದ್ಯಂತ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ. ಯಲ್ಲಾಪುರದ ವೃದ್ಧನಿಂದ ಏಪ್ರಿಲ್ 23 ರಂದು ಒಂದೇ ದಿನ 65 ಲಕ್ಷ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದ ಈ ಆರೋಪಿಗಳ ಬ್ಯಾಂಕ್ ಖಾತೆಗೆ, ಅದೇ ದಿನ ಬೇರೆ ಬೇರೆ ಕಡೆಗಳಿಂದ ಒಟ್ಟು 1,02,35,200 ರೂ. ಜಮೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಡಿವೈಎಸ್‌ಪಿ ಬಿ. ಅಶ್ವಿನಿ, ದಾಂಡೇಲಿ ಪಿಎಸ್‌ಐ ಕಿರಣ ಪಾಟೀಲ್, ಕಾರವಾರ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿಯಾದ ಉದಯ ಗುನಗಾ, ಬಬನ್ ಕದಂ ಹಾಗೂ ಸೈಬರ್ ಅಪರಾಧ ಠಾಣೆ ಮತ್ತು ದಾಂಡೇಲಿ ಠಾಣೆಯ ಇತರ ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ದೀಪನ್ ಎಂ.ಎನ್. ಅಭಿನಂದಿಸಿದ್ದಾರೆ.
