

ಜೋಯಿಡಾ: ಶಾಸ್ತ್ರದಲ್ಲಿ ಹೇಳಿದ ಮಾತುಗಳನ್ನು ನಂಬಿ, ನಿರಂತರ ಸಾವುಗಳ ಭಯದಿಂದ ಗೌಳಿ ಸಮುದಾಯದ ಕುಟುಂಬಗಳು ಗ್ರಾಮವನ್ನೇ ತೊರೆಯುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಬಾಡಗುಂದದಲ್ಲಿ ನಡೆದಿದೆ.
ಗ್ರಾಮದಲ್ಲಿದ್ದ 18 ಕುಟುಂಬಗಳ ಪೈಕಿ 13 ಕುಟುಂಬಗಳು ಈಗಾಗಲೇ ಬೇರೆಡೆಗೆ ವಲಸೆ ಹೋಗಿದ್ದು, ಉಳಿದ ಕುಟುಂಬಗಳೂ ಗ್ರಾಮ ತೊರೆಯಲು ಸಿದ್ಧತೆ ನಡೆಸಿವೆ ಎನ್ನಲಾಗಿದೆ.
ತಲೆತಲಾಂತರದಿಂದ ಗೌಳಿ ಸಮುದಾಯದವರು ವಾಸಿಸುತ್ತಿರುವ ಬಾಡಗುಂದ ಗ್ರಾಮದಲ್ಲಿ ಹೈನುಗಾರಿಕೆಯೇ ಪ್ರಮುಖ ಜೀವನಾಧಾರವಾಗಿದೆ. ಮಲೆನಾಡಿನ ಸುಂದರ ಪರಿಸರದಲ್ಲಿ ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ಇದೀಗ ಗ್ರಾಮವನ್ನು ಖಾಲಿ ಮಾಡುತ್ತಿರುವುದು ವಿಚಿತ್ರ ಎನಿಸಿದರು ಸತ್ಯವಾಗಿದೆ.
ನಿರಂತರ ಸಾವುಗಳಿಂದ ಆತಂಕ.

ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ಹಲವು ಮಂದಿ ಮೃತಪಟ್ಟಿದ್ದಾರೆ.ಒಂದಾದ ಮೇಲೊಂದರಂತೆ ಸಂಭವಿಸಿದ ಸಾವುಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಹಿರಿಯರೊಬ್ಬರ ಬಳಿ ಶಾಸ್ತ್ರ ಕೇಳಿಸಿದ್ದಾರೆ. ಈ ವೇಳೆ ಗ್ರಾಮದಲ್ಲಿ ವಾಸಿಸುವ ಜಾಗದ ಸಮಸ್ಯೆಯಿದ್ದು, ಇದೇ ಸ್ಥಳದಲ್ಲಿ ಮುಂದುವರಿದರೆ ಗ್ರಾಮದಲ್ಲಿ ಇನ್ನಷ್ಟು ಸಾವುಗಳು ಸಂಭವಿಸಲಿವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
ಇದರಿಂದ ಭಯಗೊಂಡ ಕುಟುಂಬಗಳು ತಮ್ಮ ಮನೆ, ಜಮೀನು ಹಾಗೂ ಜೀವನೋಪಾಯವನ್ನು ಬಿಟ್ಟು ಬೇರೆಡೆಗೆ ವಲಸೆ ಹೋಗುತಿದ್ದಾರೆ.
13 ಕುಟುಂಬಗಳ 74 ಮಂದಿ ಗ್ರಾಮ ತೊರೆದಿದ್ದಾರೆ.
ಬಾಡಗುಂದದಲ್ಲಿ ಒಟ್ಟು 18 ಕುಟುಂಬಗಳ 103 ಮಂದಿ ವಾಸಿಸುತ್ತಿದ್ದರು. ಆದರೆ ಇದೀಗ 13 ಕುಟುಂಬಗಳ 74 ಮಂದಿ ಗ್ರಾಮ ತೊರೆದಿದ್ದಾರೆ.
ಜಂಗಲೇ ವಂಶಕ್ಕೆ ಸೇರಿದ ಆರು ಕುಟುಂಬಗಳು ರಾಮನಗರದ ಗಾರ್ಲಿ ಗ್ರಾಮಕ್ಕೆ ವಲಸೆ ಹೋಗಿವೆ. ಶಿಂಧೆ ವಂಶದ ನಾಲ್ಕು ಕುಟುಂಬಗಳು ರಾಮನಗರದ ಅಡಾಳಿ ಗ್ರಾಮಕ್ಕೆ ತೆರಳಿವೆ. ಕರವತ್ತ ವಂಶದ ಒಂದು ಕುಟುಂಬ ಹಾಗೂ ರಾಮು ಪಾಟೀಲರ ಎರಡು ಕುಟುಂಬಗಳು ಯಲ್ಲಾಪುರಕ್ಕೆ ವಲಸೆ ಹೋಗಿವೆ. ರಾಮು ಶಿಂಗಾಡಿ ಕುಟುಂಬ ಜೋಯಿಡಾದ ಪನಸೋಲಿ ಗ್ರಾಮಕ್ಕೆ ತೆರಳಿದೆ.
ಉಳಿದ ಕುಟುಂಬಗಳೂ ಗ್ರಾಮ ತೊರೆಯುವ ಸಿದ್ಧತೆಯಲ್ಲಿದ್ದು, ಭಯದ ವಾತಾವರಣದಲ್ಲಿ ದಿನ ಕಳೆಯುತ್ತಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿರುವ ಪ್ರದೇಶ.
ಬಾಡಗುಂದ ಗ್ರಾಮವು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಗೌಳಿ ಸಮುದಾಯದವರು ಹಲವು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿದ್ದು, ಸುತ್ತಮುತ್ತ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳು ನಿರ್ಮಾಣಗೊಂಡಿವೆ.
ಈ ನಡುವೆ, ಶಾಸ್ತ್ರದ ಮಾತುಗಳನ್ನು ನಂಬಿ ಇಡೀ ಗ್ರಾಮದ ಜನರು ತಮ್ಮ ವಾಸಸ್ಥಳವನ್ನೇ ತೊರೆಯುತ್ತಿರುವುದು ಮೂಢನಂಬಿಕೆ ಹಾಗೂ ಗ್ರಾಮಸ್ಥರ ಮುಗ್ಧತೆಯ ದುರ್ಬಳಕೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಿಯಲ್ ಎಸ್ಟೇಟ್ ವ್ಯವಹಾರದ ಅನುಮಾನ?
ಗ್ರಾಮಸ್ಥರು ಊರು ತೊರೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಈ ಕುರಿತು ಜಿಲ್ಲಾಡಳಿತಕ್ಕೆ ಸಮರ್ಪಕ ಮಾಹಿತಿ ನೀಡಲಾಗಿದೆಯೇ ಎಂಬುದರ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.
ಗ್ರಾಮಸ್ಥರ ಆತಂಕದ ಹಿಂದೆ ಕೇವಲ ಮೂಢನಂಬಿಕೆಯೇ ಕಾರಣವೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ವಿಶೇಷವಾಗಿ ಗ್ರಾಮದಲ್ಲಿ ಪ್ರವಾಸೋದ್ಯಮ ಮತ್ತು ಭೂ ವ್ಯವಹಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಪಾತ್ರವಿದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಆದರೆ ಈ ಆರೋಪಗಳು ಅಥವಾ ಅನುಮಾನಗಳು ಇನ್ನೂ ತನಿಖೆಯಿಂದ ದೃಢಪಟ್ಟಿಲ್ಲ.ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದು, ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಮೂರು ತಲೆಮಾರುಗಳ ಬದುಕು ಬಿಟ್ಟು ವಲಸೆ.

ಮೂಢನಂಬಿಕೆ, ಭಯ ಹಾಗೂ ನಿರಂತರ ಸಾವುಗಳ ಆತಂಕದಿಂದಾಗಿ ಮೂರು ತಲೆಮಾರುಗಳಿಂದ ಬದುಕು ಕಟ್ಟಿಕೊಂಡಿದ್ದ ಗ್ರಾಮವನ್ನೇ ಗೌಳಿ ಸಮುದಾಯದ ಕುಟುಂಬಗಳು ತೊರೆದಿರುವುದು ವಿಷಾದನೀಯವಾಗಿದೆ.
ಗ್ರಾಮಸ್ಥರ ಆತಂಕಕ್ಕೆ ನಿಜವಾದ ಕಾರಣವೇನು? ನಿರಂತರ ಸಾವುಗಳಿಗೆ ಯಾವುದೇ ವೈಜ್ಞಾನಿಕ ಅಥವಾ ವಾಸ್ತವಿಕ ಕಾರಣವಿದೆಯೇ? ಶಾಸ್ತ್ರದ ಹೆಸರಿನಲ್ಲಿ ಜನರಲ್ಲಿ ಭಯ ಮೂಡಿಸಲಾಗಿದೆಯೇ? ಅಥವಾ ಇದರ ಹಿಂದೆ ಬೇರೆ ಯಾವುದೇ ಹಿತಾಸಕ್ತಿಗಳಿವೆಯೇ ಎಂಬುದನ್ನು ಆಡಳಿತ ನಡೆಸುವ ತನಿಖೆಯಿಂದ ಸ್ಪಷ್ಟಪಡಿಸಬೇಕಿದೆ.ಇದನ್ನೂ ಓದಿ:-Joida| ಜೋಯಿಡಾದಲ್ಲಿ ಬೀಡುಬಿಟ್ಟ ಆನೆ ಹಿಂಡು ವಿಡಿಯೋ ನೋಡಿ
ಜನರ ಭಯವನ್ನು ನಿವಾರಿಸಿ, ವಾಸ್ತವಾಂಶಗಳನ್ನು ಬಹಿರಂಗಪಡಿಸುವ ಮೂಲಕ ಬಾಡಗುಂದದ ಜನರಿಗೆ ಮತ್ತೆ ತಮ್ಮ ಊರಿನಲ್ಲಿ ಸುರಕ್ಷಿತವಾಗಿ ಬದುಕುವ ವಿಶ್ವಾಸ ಮೂಡಿಸುವ ಅಗತ್ಯವಿದೆ.
