Siddapur |ಕಾಡುಪ್ರಾಣಿಗಳ ಬೇಟೆ-ಮಸಾಲೆ ಅರೆದವರು ಜೈಲುಪಾಲು.
ವನ್ಯಜೀವಿ ಬೇಟೆ: ಮೂವರು ಅರಣ್ಯ ಇಲಾಖೆ ಬಲೆಗೆ
Siddapur:-ಸಿದ್ದಾಪುರ(siddapur) ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಗಸ್ತಿನ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂದೂಕಿನಿಂದ ವನ್ಯಜೀವಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:-Siddapur| ಅಕ್ರಮ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ – ₹3,30694 ನಗದು ವಶ
ಆರೋಪಿತರು ಕಡವೆ ಹಾಗೂ ಬರ್ಕ ಪ್ರಾಣಿಗಳನ್ನು ಗುಂಡಿಕ್ಕಿ ಕೊಂದು ಮಹೇಂದ್ರ ಪಿಕಪ್ ವಾಹನ (ಕೆಎ-17 ಬಿ-4291)ದಲ್ಲಿ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹುಸೂರು ಗ್ರಾಮದ ಅರಣ್ಯ ಸರ್ವೆ ನಂ.210ರ ಗದ್ದೆಗಳಿಗೆ ತೆರಳುವ ಕಚ್ಚಾ ರಸ್ತೆಯಲ್ಲಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದರು.
ಈ ವೇಳೆ ವಾಹನದಲ್ಲಿ ಮೃತಪಟ್ಟ ಹೆಣ್ಣು ಕಡವೆ ಹಾಗೂ ಗಂಡು ಬರ್ಕ ಪತ್ತೆಯಾಗಿದ್ದು, ಬಳಸಿದ ಬಂದೂಕು, ವಾಹನ ಹಾಗೂ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರು ಯಾರು?
ಬಂಧಿತರನ್ನು ವಿರೇಂದ್ರ ಮಾರುತಿ ನಾಯ್ಕ (ಹುಸೂರು), ಶಿವಾನಂದ ಮಹಾಬಲೇಶ್ವರ ನಾಯ್ಕ (ಕುಂಬಾರಕುಳಿ) ಹಾಗೂ ವಾಸುದೇವ ಈರ ನಾಯ್ಕ (ಸುಂಕತ್ತಿ) ಎಂದು ಗುರುತಿಸಲಾಗಿದೆ.
ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದಾಂಡೇಲಿಯ ವನ್ಯಜೀವಿ ವಿಧಿವಿಜ್ಞಾನ ತಜ್ಞ ಮಧುಸೂದನ ಎಸ್. ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:-Siddapur |ಸಿದ್ದಾಪುರದಲ್ಲಿ ಚಿರತೆ ದಾಳಿ-ಕರು ಸಾವು
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಯು.ಜೆ. ಅವರ ಮಾರ್ಗದರ್ಶನದಲ್ಲಿ, ಸಿದ್ದಾಪುರ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಮ್.ಎಸ್. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
