ಶಿರಸಿ ಸೋಂದಾ,ಬಿಳಗಿ ಅರಸರ ಸ್ವಾತಂತ್ರ್ಯ ಹೋರಾಟದ ಕಥೆ!

1433

ಸ್ವಾತಂತ್ರ ಹೋರಾಟದಲ್ಲಿ ಉತ್ತರ ಕನ್ನಡ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ಅದ್ರಲ್ಲೂ,ಕ್ರಿ.ಶ 1800 ರ ಅವಧಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಶಿರಸಿ ಭಾಗದ ಸೋಂದಾ ಹಾಗೂ ಬಿಳಗಿ ಅರಸರ ಬಗ್ಗೆ ಇತಿಹಾಸ ಪುಟಗಳಲ್ಲಿ ಹೆಚ್ಚು ಉಲ್ಲೇಕವೇ ಇಲ್ಲ.

ಈ ಕುರಿತು ಇಂದು ನಮ್ಮ ನೆಲದ ಕಥೆಯಲ್ಲಿ ಇತಿಹಾಸ ತಜ್ಞ ಲಕ್ಷ್ಮೀಶ್ ಸೋಂದಾ ರವರು ಒಂದಿಷ್ಟು ಬೆಳಕು ಚಲ್ಲಿದ್ದಾರೆ. ಹಾಗಿದ್ರೆ ಸೋಂದಾ,ಬಿಳಗಿ ಅರಸರ ಸ್ವತಂತ್ರ ಹೋರಾಟದ ಬಗ್ಗೆ ಇಂದು ತಿಳಿಯೋಣ.

ಅದು ಕ್ರಿ.ಶ ೧೮೦೦ ರ ಸಮಯ,ಕರ್ನಾಟಕವನ್ನೊಳಗೊಂಡು ಭಾರತದಲ್ಲಿ ಬ್ರಿಟಿಶ್ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದ ಕಾಲ.

ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದು ಸ್ವಲ್ಪ ತೀವ್ರವೇ ಆಗಿತ್ತು,ಇದನ್ನು ಕೆಲವರು ” ದಕ್ಷಿಣ ಭಾರತದ ದಂಗೆ ” ಎಂದೂ ಕರೆದರು,ದಕ್ಷಿಣ ಭಾರತದಲ್ಲೂ ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಾವು ಸ್ವಲ್ಪ ಹೆಚ್ಚೇ ಇತ್ತು.

ಕರ್ನಾಟಕದಲ್ಲಿ ಆ ಸಂದರ್ಭದಲ್ಲಿ ಈ ಚಟುವಟಿಕೆಯ ನಾಯಕತ್ವ ವಹಿಸಿದ್ದು ಚನ್ನಗಿರಿಯ ದೋಂಡಿಯಾ ವಾಘ್,ಶಿಕಾರಿಪುರದಿಂದ ವಿದ್ಯುಕ್ತವಾಗಿ ಹೋರಾಟಕ್ಕೆ ಆರಂಭ ಸಿಕ್ಕಿತ್ತು.

ಅದೇ ಸಂದರ್ಭದಲ್ಲಿ, ಅಂದರೆ 1800-1810 ರಲ್ಲಿ ನಮ್ಮ ಈಗಿನ ಉತ್ತರ ಕನ್ನಡದ ಬನವಾಸಿ,ಸೋಂದಾ,ಬಿಳಗಿ,ಬದನಗೋಡ್,ಅಂಕೋಲಾಗಳಲ್ಲಿ ಇದರ ಕಾವು ಹೆಚ್ಚಾಗಿತ್ತು.

ಅಂದು ಮಂಗಳೂರು ಮತ್ತು ಶಿಕಾರಿಪುರಗಳಿಂದ ಒಂದಿಷ್ಟು ಕ್ರಾಂತಿಕಾರಿಗಳು ಬನವಾಸಿಗೆ ಬಂದು ಸ್ಥಳೀಯರ ಹೋರಾಟದಲ್ಲಿ ಕೈಸೇರಿಸಿದರು.

ಬನವಾಸಿಯನ್ನು ಬ್ರಿಟಿಷರಿಂದ ವಶಪಡಿಸಿಕೊಂಡು,ಬ್ರಿಟಿಷರ ಅಂಗಡಿಗಳನ್ನ ಮುತ್ತಿ ಅಲ್ಲಿ ಸಂಗ್ರಹಿಸಿದ್ದ ಕಾಳುಮೆಣಸನ್ನ ವಶಪಡಿಸಿಕೊಂಡರು.

ಅಂಕೋಲಾದಿಂದ ಬಂದ ಮತ್ತೊಂದು ಗುಂಪು ಬಿಳಗಿಗೆ ಹೋಗಿ ಅಲ್ಲಿನ ಸ್ಥಳೀಯರ ಜೊತೆ ಸೇರಿ ಬ್ರಿಟಿಷರನ್ನು ವಿರೋಧಿಸತೊಡಗಿದ್ದರು.

ಆ ಸಂದರ್ಭದಲ್ಲಿ ಬಿಳಗಿ ಅರಸುಮನೆತನ ಪತನವಾಗಿದ್ದರೂ, ಆ ವಂಶದ ರಾಜಕುಮಾರ ಬಿಳಗಿಯ ಹೋರಾಟದ ನೇತೃತ್ವವಹಿಸಿದ್ದ.

ಅಷ್ಟೇ ಅಲ್ಲ ಆತ ಸ್ವಾತಂತ್ರ್ಯವನ್ನೂ ಘೋಷಿಸಿಕೊಂಡಿದ್ದ. ಅದೇ ರೀತಿ ಸೋಂದಾದಲ್ಲೂ ಅರಸುವಂಶದ ರಾಜಕುಮಾರನ ನೇತೃತ್ವದಲ್ಲಿ ಹೋರಾಟ ನಡೆದಿತ್ತು, ಆದರೆ ಈ ಹೊತ್ತಿಗೆ ಕರ್ನಾಟಕದ ದಂಗೆಯ ನೇತೃತ್ವ ವಹಿಸಿದ್ದ ದೋಂಡಿಯಾ ವಾಘ್ ನ ಮರಣ, ಹೋರಾಟದ ಕಾವನ್ನು ತಣ್ಣಗಾಗಿಸಿಬಿಟ್ಟಿತು.

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಅರಸು ಮನೆತನಗಳಾದ ಸೋಂದಾ ಅರಸರು ಮತ್ತು ಬಿಳಗಿ ಅರಸರು, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಾಗಿ ಹೋರಾಡಿದರು.

ಆದರೇ ಈ ವಿಷಯವೀಗ ಇತಿಹಾಸದ ಹರಿದ ಪುಟದಲ್ಲಿ ಸೇರಿಹೋಗಿದೆ.

ಈ ಅಪರೂಪದ ಸಂಗತಿ ಪಠ್ಯದಲ್ಲಿ ಬರದೇ ಹೋದದ್ದು ದುರದೃಷ್ಟಕರ. ನಮ್ಮ ಅರಸರು ನಮ್ಮ ಹೆಮ್ಮೆ.

ಲೇಖನ:- ಲಕ್ಷ್ಮೀಶ್ ಸೋಂದಾ. ಇತಿಹಾಸ ತಜ್ಞ.

https://kannadavani.news/sirsi-district-protest-uttara-kannada-district-kannadanews-divide-district-controversy/



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!