Uttra Kannada news

Uttarakannada: ಇಂದಿನ ಫಟಾ ಫಟ್ ಸುದ್ದಿ-ಎಲ್ಲಿ ಏನು ವಿವರ ನೋಡಿ.

122

Uttrakannada:ಅಕ್ರಮ ಮರಳು ಸಾಗಾಟಗಾರರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ

 ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಮರಳು ಸಾಗಾಟ ನಡೆಸುವವರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ನೇತೃತ್ವದ ಅಧಿಕಾರಿಗಳ ತಂಡ ಇಂದು ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡು , ಅಕ್ರಮದಲ್ಲಿ ತೊಡಗಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಇಂದು ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗೆ ಯಾವುದೇ ಮುನ್ಸೂಚನೆ ನೀಡದೇ, ಅಕ್ರಮದ ಕುರಿತು ತಮಗೆ ದೊರೆತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದರು.

ದಾಳಿ ಸಂದರ್ಭದಲ್ಲಿ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು (sand )ಸಂಗ್ರಹ, ಮರಳು ತುಂಬಿಕೊಂಡು ತೆರಳುತ್ತಿದ್ದ ವಾಹನ, ಮರಳು ತುಂಬಿದ್ದ ವಾಹನಗಳನ್ನು ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂದಪಟ್ಟ ತಾಲೂಕಿನ ತಹಸೀಲ್ದಾರ್‍ಗೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಅಕ್ರಮದಲ್ಲಿ ತೊಡಗಿರುವವನ್ನು ಬಂಧಿಸುವಂತೆ ಸೂಚನೆ ನೀಡಿದರು.

ಅಂಕೋಲಾ ಮತ್ತು ಕುಮುಟಾ ತಾಲೂಕಿನಲ್ಲಿ ದಾಳಿ ನಡೆಸಿದ ಜಿಲ್ಲಾಧಿಕಾರಿಗಳು, ಶಿರೂರು, ಕೊಡ್ಕಣಿ,ಮಿರ್ಜಾನ,ದಿವಗಿ,ತಾರೆಬಾಗಿಲು, ಹೆಗಡೆ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಗಳಿಗೆ ದಾಳಿ ನೆಡೆಸಿ, ಅಕ್ರಮದ ವಿರುದ್ದ ಕಾನೂನು ಕ್ರಮ ಕೈಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕುಮುಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ, ತಹಸೀಲ್ದಾರ್ ಸತೀಶ್ ಗೌಡ, ಅಂಕೊಲ ತಹಸೀಲ್ದಾರ್ ಅಶೋಕ್ ಭಟ್ ಮತ್ತು ಕಂದಾಯ ಇಲಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ ನೇತ್ವøತ್ವದ ಮತ್ತೊಂದು ಅಧಿಕಾರಿಗಳ ತಂಡ ಕೂಡಾ ಜಿಲ್ಲೆಯ ಇತರೆ ಭಾಗದಲ್ಲಿ ಕಾರ್ಯಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡರು.

ಇಂದು ನಡೆದ ದಾಳಿಯಲ್ಲಿ , ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ 60 ಕ್ಕೂ ಹೆಚ್ಚು ಕಂದಾಯ ಇಲಾಖೆಯ ಸಿಬ್ಬಂದಿಗಳು 16 ವಾಹನಗಳಲ್ಲಿ 4 ತಂಡಗಳಾಗಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದ್ದು, ಸುಮಾರು 200 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ ರೂ.2.5 ಲಕ್ಷಗಳಾಗಿರುತ್ತದೆ.

 ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಚಟುವಟಿಕೆಗಳ ಬಗ್ಗೆ ನಿರಂತವಾಗಿ ದೂರುಗಳು ಬರುತ್ತಿದ್ದು, ಈ ಕುರಿತಂತೆ ಇಂದು ಖುದ್ದು ತಾನೇ ಅಕ್ರಮ ನಡೆಯುವ ಸ್ಥಳಗಳಿಗೆ ಅನಿರೀಕ್ಷಿತ ದಾಳಿ ನಡೆಸಿ, ಮರಳು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇನ್ನು ಮುಂದೆ ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳಿಗೆ ಈ ರೀತಿಯ ದಾಳಿಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು, ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ, ದಾಸ್ತಾನು ಮಾಡುವವರಿಗೆ ಈ ದಾಳಿಯ ಮೂಲಕ , ಜಿಲ್ಲೆಯ ಅಕ್ರಮ ಮರಳು ಚಟುವಟಿಕೆ  ನಡೆಸಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತ ಗಂಭೀರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Kumta:ಉಚಿತ ಪಂಚಗವ್ಯ ಆಯುರ್ವೇದ ತಪಾಸಣಾ ಶಿಬಿರ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ಗತಿವಿಧಿಯಿಂದ ಕುಮಟಾದ ವನವಾಸಿ ಕಲ್ಯಾಣದ ರತ್ನಾಕರದಲ್ಲಿ ಆಯೋಜಿಸಿದ್ದ ಉಚಿತ ಪಂಚಗವ್ಯ ಆಯುರ್ವೇದ ತಪಾಸಣಾ ಶಿಬಿರವನ್ನು ಖ್ಯಾತ ಕೀರ್ತನಕಾರ ಶ್ರೀ ನಾರಾಯಣದಾಸ್ ಶಿರಸಿ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಎಂ.ಜಿ. ಭಟ್ ಕೂಜಳ್ಳಿಇವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋ ಸೇವಾ ಗತಿವಿಧಿಯ ಪ್ರಾಂತ ಪ್ರಶಿಕ್ಷಣ ಪ್ರಮುಖ ದತ್ತಾತ್ರೇಯ ಭಟ್ ಇವರು ವೇದಿಕೆಯಲ್ಲಿ ಇರುವ ಗಣ್ಯರನ್ನು ಪರಿಚಯಿಸುತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಅನಾದಿಕಾಲದಿಂದ ಪಂಚಗವ್ಯ ಔಷಧವೇ ಆರೋಗ್ಯ ಕಾಪಾಡಿಕೊಳ್ಳುವ ಮೂಲ ವೈದ್ಯಕೀಯ ಪದ್ಧತಿಯಾಗಿತ್ತು. ನಾವು ಮಾಡುವ ಕರ್ಮ ದೋಷಗಳ ಕಾರಣದಿಂದಾಗಿ ಬೇರೆ ಬೇರೆ ರೋಗಗಳು ಬರುತ್ತಿದ್ದು ಅವುಗಳ ನಿವಾರಣೆಗೆ ಪಂಚಗವ್ಯ ಔಷಧಿಗಳು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

ಜನಸಾಮಾನ್ಯರಲ್ಲಿ ಭಾರತೀಯ ಗೋವಿನ ಮಹತ್ವವನ್ನು ತಿಳಿಸಿ ಮನವರಿಕೆ ಮಾಡಿಕೊಡಲು ಗೋಸೇವಾ ಗತಿವಿಧಿಯು ಹಲವಾರು ಆಯಾಮಗಳನ್ನು ಹೊಂದಿದ್ದು ಅವುಗಳಲ್ಲಿ ಪಂಚಗವ್ಯ ಚಿಕಿತ್ಸಾ ವಿಧಾನವೂ ಒಂದಾಗಿದೆ ಎಂದು ತಿಳಿಸಿದರು. ತನ್ಮೂಲಕ ಜನಜಾಗ್ರತಿಗೊಳಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಈ ವಿಧಾನವನ್ನು ವ್ಯಾಪಕವಾಗಿ ಬೆಳೆಸುವ ಕಾರ್ಯವನ್ನು ಗತಿವಿಧಿ ಮಾಡುತ್ತಿದೆ ಎಂದು ಹೇಳಿದರು. ಡಾಕ್ಟರ್ ಡಿಪಿ ರಮೇಶ್ ರವರು ಮಾತನಾಡುತ್ತಾ ಬೇರೆ ಬೇರೆ ಔಷಧಗಳಿಂದ ಗುಣಪಡಿಸಲು ಅಸಾಧ್ಯವಾದ ಕಾಯಿಲೆಗಳನ್ನು ಪಂಚಗವ್ಯ ಪದ್ಧತಿಯಲ್ಲಿ ಗುಣಪಡಿಸಿದ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಈ ಪದ್ಧತಿಯನ್ನು ಮತ್ತೆ ಪುನಹ ಜಾಗೃತಿಗೊಳಿಸುವ ಕಾರ್ಯವು ಅವಶ್ಯವಾಗಿ ಆಗಬೇಕಿದೆ ಎಂದರು.

ವೇದಿಕೆಯಲ್ಲಿ ಪ್ರಸಿದ್ಧ ಕೀರ್ತನಕಾರ ನಾರಾಯಣ ದಾಸ ಶಿರಸಿ, ಹೊನ್ನಾವರ ತಾಲೂಕ ಸಹ ಸಂಘಚಾಲಕ ರಾಮಚಂದ್ರ ಕಾಮತ್ ,ರಾಷ್ಟ್ರೀಯ ಸ್ವಯಂಸೇವಕ ಸಂಘದ ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಣಿವಣ್ಣ, ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ. ಭಟ್ ಕೂಜಳ್ಳಿ, ಡಾಕ್ಟರ್ ಡಿ.ಪಿ. ರಮೇಶ, ದತ್ತಾತ್ರೇಯ ಭಟ್ಟ ಮುಂತಾದವರು ಇದ್ದರು.

Karwar: ಜಿಲ್ಲೆಯ ಗೃಹ ರಕ್ಷಕೀಯರಿಗೆ ಸನ್ಮಾನ

ಕಾರವಾರ : ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಬೇರೆ ಬೇರೆ ತಾಲೂಕಿನ ವಿವಿಧ ಘಟಕದ ಒಂಭತ್ತು ಮಹಿಳಾ ಗೃಹರಕ್ಷಕಿಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ಅಪರೂಪದ ಕಾರ್ಯಕ್ರಮ ಇಂದು ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಮಾನ್ಯ ಜಿಲ್ಲಾಧಕಾರಿಗಳಾದ ಶ್ರೀಮತಿ ಗಂಗೂಬಾಯಿ ಮಾನಕರ್ ಇವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಮಹಿಳೆ ಮನೆ ಕೆಲಸ ಹಾಗೂ ಕುಟುಂಬವನ್ನು ನಿಭಾಯಿಸುತ್ತಾ ಸಾಮಾಜಿಕ ಬದ್ಧತೆ ಕಳಕಳಿ ಮತ್ತು ಕಾಳಜಿಯಿಂದ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಾ ಸಮಾಜ ಸೇವೆಯನ್ನು ಮಾಡುವುದು ಅತ್ಯಂತ ಪ್ರಶಂಸನೀಯ ಹಾಗೆ ಅಂತವರನ್ನು ಸನ್ಮಾನಿಸಿ ಗೌರವಿಸುತ್ತಿರುವ ಕೆಲಸ ಅಭಿನಂದನೀಯ ಎಂದು ಜಿಲ್ಲಾಧಿಕಾರಿಗಳಾದ ಶ್ರೀಮತಿ ಗಂಗೂಬಾಯಿ ಮಾನಕರ ಅಭಿಪ್ರಾಯಪಟ್ಟರು.
ಒಂಭತ್ತು ಗೃಹರಕ್ಷಕಿಯರಾದ
ಶ್ರೀಮತಿ ಮಂಗಳಾ ಎನ್.ಜೋಗಳೇಕರ್,
ಶಿರಸಿ ,ಗಿರಿಜಾ ಜಿ.ನಾಯ್ಕ್
ಕುಮಟಾ ,ಸ್ಮಿತಾ ರಾಮಚಂದ್ರ ಗೌಡ, ಮಲ್ಲಾಪುರ,ಸವಿತಾ ರಘುನಾಥ್ ಗುನಗಿ ದಾಂಡೇಲಿ , ರೂಪಾ ಎಂ. ಬಾಂದಿ
ಯಲ್ಲಾಪುರ, ಸಂಗೀತಾ ಗಣಪತಿ ಗಾಂವಕರ ಅಂಕೋಲಾ, ಬೇಬಿ ಜ್ಞಾನೇಶ್ವರ ಗೌಡ, ಚೇಂಡಯಾ
ನಾಗರತ್ನ ವಿನೋದ್ ಹುಲಸ್ವಾರ ಅಂಕೋಲಾ, ಕವಿತಾ ಎಸ್. ಗುನಗಿ, ಕಾರವಾರ ಇವರುಗಳಿಗೆ ಸನ್ಮಾನ ಮಾಡಲಾಯಿತು.
ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ. ಸಂಜು ನಾಯಕರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ:-ತಪ್ಪು ಮಾಡಿದವರ್ಯಾರೋ ಶಿಕ್ಷೆ ಪೊಲೀಸರಿಗೆ? (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಗೃಹರಕ್ಷಕಿಯರನ್ನು ಗುರುತಿಸಿ ಗೌರವಿಸಿ ಮುನ್ನೆಲೆಗೆ ತರುವ ಕೆಲಸ ಸಮಾಜ ಮಾಡಬೇಕು, ಎಂದು ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಸಂಜು ನಾಯಕ ಕರೆ ನೀಡಿದರು.

ಈ ಸಂದರ್ಭದಲ್ಲಿ ಗೃಹರಕ್ಷಕದಳದ ಘಟಕಾಧಿಕಾರಿ ಗಳಾದ ರಾಘವೇಂದ್ರ ಗಾಂವ್ಕರ್, ಚಂಡಿಯಾ ಮತ್ತು ಪ್ರಭು ಮುದಕ್ಕಣ್ಣವರ , ಮಲ್ಲಾಪುರ ಹಾಗೂ ಗೃಹರಕ್ಷಕರಾದ ವಿನಾಯಕ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.

Siddapura news: ಸಿದ್ದಾಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿಪಂ ಸಿಇಒ ಈಶ್ವರ ಕಾಂದೂ ಭೇಟಿ, ಕಾಮಗಾರಿ ಪರಿಶೀಲನೆ.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ ಕಾಂದೂ ಅವರು ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯತಿಗಳಿಗೆ, ಎಸ್‌ಸಿ/ಎಸ್‌ಟಿ ವಸತಿ ನಿಲಯಕ್ಕೆ ಶುಕ್ರವಾರ ಭೇಟಿನೀಡಿ ನರೇಗಾ, (narega) ಜೆಜೆಎಂ, ಎಸ್‌ಬಿಎಂ, ವಸತಿ, ಎನ್‌ಆರ್‌ಎಲ್‌ಎಂ ಸೇರಿದಂತೆ ವಿವಿಧ ಯೋಜನೆಗಳಡಿ ಅಭಿವೃದ್ಧಿಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.

ಮೊದಲಿಗೆ ಶಿರಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯತಿಗೆ ಹಸ್ತಾಂತರಿಸುವಂತೆ ಸ್ಥಳದಲ್ಲಿದ್ದ ಆರ್‌ಡಬ್ಲ್ಯುಎಸ್‌ನ ಎಇಇ, ಗುತ್ತಿಗೆದಾರರಿಗೆ ಸೂಚಿಸಿದರು. ನಂತರ ಹೆರವಳ್ಳಿ ಗ್ರಾಮದ ಎನ್‌ಪಿಎಸ್‌ ಶಾಲೆಗೆ ತೆರಳಿ ಮಕ್ಕಳ ಕಲಿಕಾ ಕ್ರಮ, ಬಿಸಿಯೂಟಕ್ಕೆ ಸರಕಾರದಿಂದ ಒದಗಿಸಲಾದ ಅಕ್ಕಿ, ಬೇಳೆ, ಎಣ್ಣೆ ಮೊದಲಾದ ದವಸ ಧಾನ್ಯಗಳ ಸಂಗ್ರಹಣೆ, ಅಡುಗೆ ತಯಾರಿಕೆ ವಿಧಾನ, ಅಡುಗೆ ಕೋಣೆ ಸ್ವಚ್ಚತೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕುರಿತು ಪರಿಶೀಲಿಸಿದರು.
ಕಾನಗೋಡ ಗ್ರಾಮ ಪಂಚಾಯತಿಗೆ ಭೇಟಿನೀಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ನೇಮಕವಾಗಿ ಕೇನರಾ ಆರ್ ಸೇಟಿ ತರಬೇತಿ ಕೇಂದ್ರದಿಂದ ವಾಹನ ಚಾಲನೆಯ ತರಬೇತಿ ಪಡೆದ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ಮಹಿಳಾ ಚಾಲಕಿ ನೀಲಾವತಿ ಮಡಿವಾಳ ಅವರ ವಾಹನ ಚಾಲನೆಯ ಕೌಶಲ್ಯತೆ ಪರಿಶೀಲಿಸಿದರು.

ಇದನ್ನೂ ಓದಿ:-ಕಲ್ಲಾಗಿ ಬದಲಾದ ಏಡಿ-ಅಘನಾಶಿನಿ ನದಿಯಲ್ಲಿ ಸಿಕ್ತು ಅಪರೂಪದ ಏಡಿ ಕಲ್ಲು(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಜೊತೆಗೆ ತರಬೇತಿ ಪಡೆದ ಮಹಿಳಾ ಚಾಲಕಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಸ್ವತಃ ತಾವೇ ಕಸ ಸಂಗ್ರಹಣೆ ವಾಹನ ಓಡಿಸುವ ಮೂಲಕ ಚಾಲಕರಾದವರು ವಾಹನ ಚಾಲನೆ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು, ವಾಹನ ಸ್ಟಾರ್ಟ್, ಗೇರ್‌ಗಳ ಬದಲಾವಣೆ, ವಾಹನ ನಿಯಂತ್ರಣ, ಬ್ರೇಕ್ ಹಾಕುವ ವಿಧಾನ ಸೇರಿದಂತೆ ವಿವಿಧ ಚಾಲನಾ ಕೌಶಲ್ಯಗಳ ಕುರಿತು ತಿಳಿಸಿಕೊಟ್ಟು ಉತ್ತಮವಾಗಿ ವಾಹನ ಚಲಾಹಿಸುವಂತೆ ಪ್ರೇರೆಪಿಸಿದರು. ಹಾಗೇ ಗ್ರಾಪಂ ಪಕ್ಕದಲ್ಲಿನ ಗ್ರಂಥಾಲಯ ಕೇಂದ್ರ, ಕಸ ವಿಲೇವಾರಿ ಘಟಕಕ್ಕೆ ತೆರಳಿ ಪರಿಶೀಲಿಸಿ ಸೂಕ್ತ ಸಲಹೆ ನೀಡಿದರು. ನಂತರ ಎಸ್‌ಸಿ/ಎಸ್‌ಟಿ ಬಾಲಕರ ವಸತಿ ನಿಲಯಕ್ಕೆ ತೆರಳಿ ಮಕ್ಕಳ ಓದುವ ಕೊಠಡಿ, ಊಟದ ಹಾಲ್, ಶೌಚಾಲಯ, ದಾಸ್ತಾನು ಕೊಠಡಿಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:- ಜಿಲ್ಲೆಯ ಅಡಿಕೆ ಧಾರಣೆ ಇಂದು ಎಷ್ಟಿದೆ (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಜೊತೆಗೆ ಪಕ್ಕದಲ್ಲಿನ ಪ್ರೌಢ ಶಾಲೆಗೆ ತೆರಳಿ ನರೇಗಾದಡಿ ಅಭಿವೃದ್ಧಿಪಡಿಸಲಾದ ಬಾಸ್ಕೆಟ್‌ಬಾಲ್ ಆಟದ ಮೈದಾನ, ಪಿಂಕ್ ಶೌಚಾಲಯ ಕಾಮಗಾರಿ ವೀಕ್ಷಿಸಿದರು.
ಮಧ್ಯಾಹ್ನದ ನಂತರ ಹಾರ್ಸಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಘನಾಶಿನಿ ಸಂಬಾರು ಬೆಳೆಗಳ ಉತ್ಪಾದಕ ಕಂಪನಿಗೆ ಭೇಟಿನೀಡಿ ಕಂಪನಿ ಹಾಗೂ ಎನ್‌ಆರ್‌ಎಲ್‌ಎಂ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರ ಒಗ್ಗೂಡಿಸುವಿಕೆ ಅಡಿಯಲ್ಲಿ ಕೈಗೊಳ್ಳಬಹುದಾದ ಆದಾಯೋತ್ಪನ್ನ ಚಟುವಟಿಕೆಗಳ ಕುರಿತು ಚರ್ಚಿಸಿದರು. ಹಾಗೇ ಕವಲಕೊಪ್ಪ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತಿ ಅನುದಾನದಲ್ಲಿ ನಿರ್ಮಿತ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಭೇಟಿನೀಡಿ ಮಕ್ಕಳ ಕಲಿಕಾ ಕ್ರಮ, ಒದಗಿಸಲಾ ಸೌಕರ್ಯ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಕೊಳಗಿಜಡ್ಡಿ-ಮಾದ್ಲಮನೆ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಹಾಗೂ ಕೆಎಂಎಫ್ ಒಗ್ಗೂಡಿಸುವಿಕೆ ಅಡಿಯಲ್ಲಿ ಮಹಿಳೆಯರೇ ಒಟ್ಟುಗೂಡಿಕೊಂಡು ಪ್ರಾರಂಭಿಸಿರುವ ಮಹಿಳಾ ಹಾಲು ಉತ್ಪಾದಕ ಘಟಕ್ಕೆ ಭೇಟಿನೀಡಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೇವರಾಜ್ ಹಿತ್ತಲಕೊಪ್ಪ, ನರೇಗಾ ಪ್ರಭಾರ ಸಹಾಯಕ ನಿರ್ದೇಶಕರಾದ ವಿದ್ಯಾ ದೇಸಾಯಿ, ಜಿಲ್ಲಾ ಪಂಚಾಯತ್‌ನ ಜಿಲ್ಲಾ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಪಿಆರ್‌ಇಡಿ ಎಇಇ, ಆರ್‌ಡಬ್ಲ್ಯುಎಸ್ ಎಇಇ, ಬಿಇಒ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಟಿಸಿ, ಟಿಎಇ, ಬಿಎಫ್‌ಟಿ, ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!