Watermelon ಹಣ್ಣು ತಿನ್ನುವುದರಿಂದ ಸಾವು ಭವಿಸುತ್ತಾ?ಮುಂಬೈ ಕುಟುಂಬದ ಸಾವಿನ ಕಾರಣ ಬಿಚ್ಚಿಟ್ಟ ತಜ್ಞರು
ಮಂಬೈನಲ್ಲಿ ಬಿರಿಯಾನಿ ಮತ್ತು ಕಲ್ಲಂಗಡಿ (Watermelon) ಸೇವಿಸಿದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಂಶಯಾಸ್ಪಾದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಮೇಲ್ನೋಟಕ್ಕೆ ಫುಡ್ ಪಾಯ್ಸನಿಂಗ್ ಕಾರಣ ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಬಿರಿಯಾನಿ ಊಟ ಮಾಡಿದ ನಂತರ, ಕುಟುಂಬದವರು ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಅದರ ಬೆನ್ನಲ್ಲೇ ಎಲ್ಲರಿಗೂ ವಾಂತಿ ಮತ್ತು ಭೇದಿಯಂತಹ ಗಂಭೀರ ಲಕ್ಷಣಗಳು ಕಾಣಿಸಿಕೊಂಡು ಸಾವಿಗೀಡಾಗಿದ್ದಾರೆ.
ನಕಲಿ ಆಯುರ್ವೇದ ಆಸ್ಪತ್ರೆ ಮೇಲೆ ಆರೋಗ್ಯಾಧಿಕಾರಿ ದಾಳಿ: ಆಸ್ಪತ್ರೆಗೆ ಬೀಗ!
ಇದೀಗ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಸಾವು ಬರುತ್ತಾ ಎಂಬ ಪ್ರಶ್ನೆ ಎಲ್ಲರಿಗೂ ಸಹಜವಾಗಿ ಏಳುವಂತೆ ಮಾಡಿದೆ.
ಈ ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ನಿಖರ ಕಾರಣ ಏನು ಅನ್ನೋದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
ಮುಂಬೈನ (Mumbai) ಜೆ.ಜೆ ಮಾರ್ಗ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಸಾಮಾನ್ಯವಾಗಿ ಬೇಯಿಸಿದ ಆಹಾರ ಪದಾರ್ಥಗಳಲ್ಲಿ (ಬಿರಿಯಾನಿ) ಬ್ಯಾಕ್ಟೀರಿಯಾ ಸೋಂಕಿನಿಂದ ವಿಷಾಹಾರವಾಗುವ ಸಾಧ್ಯತೆಗಳಿರುತ್ತವೆ ಆದರೆ, ಇಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆಯೂ ಸಂಶಯಕ್ಕೆ ಕಾರಣವಾಗಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಹಣ್ಣುಗಳ ಮೇಲೆ ಸಿಂಪಡಿಸುವ ರಾಸಾಯನಿಕಗಳು ಅಥವಾ ಕೃತಕ ಬಣ್ಣಗಳು ಈ ದುರಂತಕ್ಕೆ ಕಾರಣವಾಗಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಈ ಒಂದು ಘಟನೆಯು ಕಲ್ಲಂಗಡಿ ಹಣ್ಣಿನಂತಹ ಸಾಮಾನ್ಯ ಅಂಶದಿಂದ ಆಹಾರ ವಿಷವಾಗಬಹುದೇ ಮತ್ತು ಅದು ಅಂತಹ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗಾದರೆ, ಕಲ್ಲಂಗಡಿ ಹಣ್ಣು ಆಹಾರ ವಿಷಕ್ಕೆ ಕಾರಣವಾಗಬಹುದೇ? ಇದಕ್ಕೆ ಉತ್ತರ ಹೌದು. ಕಲ್ಲಂಗಡಿ ಹಣ್ಣಿನ ಸೇವನೆಯು ಕೆಲವು ಸಂದರ್ಭಗಳಲ್ಲಿ ಆಹಾರ ವಿಷಾಹಾರಕ್ಕೆ ಕಾರಣವಾಗಬಹುದು.
ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಪರಿಸ್ಥಿತಿಯು ವಿಕೋಪಕ್ಕೆ ಹೋದರೆ ಸಾವಿಗೂ ದಾರಿ ಮಾಡಿಕೊಡಬಹುದು. ಆದ್ದರಿಂದ, ಈ ಹಣ್ಣನ್ನು ಸೇವಿಸುವಾಗ ಇರುವ ಸಂದರ್ಭ ಮತ್ತು ಮುನ್ನೆಚ್ಚರಿಕೆಗಳು ಬಹಳ ಮುಖ್ಯವಾಗುತ್ತವೆ ಎಂದು ಕನ್ಸಲ್ಟೆಂಟ್ ನ್ಯೂಟ್ರಿಷನಿಸ್ಟ್ ರೂಪಾಲಿ ದತ್ತಾ ಅವರು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಮತ್ತು ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಾಗಿರುವುದರಿಂದ, ಬ್ಯಾಕ್ಟೀರಿಯಾಗಳು ಸೇರಿದರೆ ಅತಿ ವೇಗವಾಗಿ ಬೆಳೆಯುತ್ತವೆ ಎಂದು ರೂಪಾಲಿ ವಿವರಿಸುತ್ತಾರೆ. ಇದರೊಂದಿಗೆ, ಹಣ್ಣಿನ ಸಿಹಿ ಮತ್ತು ಬಣ್ಣವನ್ನು ಹೆಚ್ಚಿಸಲು ಅದಕ್ಕೆ ಗ್ಲೂಕೋಸ್ ಅಥವಾ ಸಕ್ಕರೆ ನೀರನ್ನು ಇಂಜೆಕ್ಟ್ ಮಾಡಲಾಗುತ್ತಿದೆ ಎಂಬ ವರದಿಗಳು ಪದೇಪದೆ ಕೇಳಿಬರುತ್ತಿವೆ. ಒಂದು ವೇಳೆ ಕಲುಷಿತಗೊಂಡ ಕಲ್ಲಂಗಡಿ ಹಣ್ಣಿಗೆ ಇಂತಹ ದ್ರವಗಳನ್ನು ಇಂಜೆಕ್ಟ್ ಮಾಡಿದರೆ, ಅದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ರೂಪಾಲಿ ತಿಳಿಸಿದ್ದಾರೆ.

ಡಯೆಟಿಷಿಯನ್ ಮತ್ತು ಪ್ರಮಾಣೀಕೃತ ಮಧುಮೇಹ ತಜ್ಞರಾದ ಡಾ. ಅರ್ಚನಾ ಬಾತ್ರಾ ಅವರ ಪ್ರಕಾರ, ಹಣ್ಣುಗಳು ಸಾಲ್ಮೊನೆಲ್ಲಾ, ಲಿಸ್ಟೀರಿಯೊಸಿಸ್ ಅಥವಾ ಇ-ಕೋಲಿಯಂತಹ ಹಾನಿಕಾರಕ ರೋಗಕಾರಕಗಳಿಂದ ಕಲುಷಿತಗೊಂಡಾಗ ಆರೋಗ್ಯದ ಅಪಾಯ ಎದುರಾಗುತ್ತದೆ. ಇಂತಹ ಸೋಂಕುಗಳು ತೀವ್ರ ನಿರ್ಜಲೀಕರಣ, ರಕ್ತದ ವಿಷತ್ವ ಅಥವಾ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಒಂದು ವೇಳೆ ಇವುಗಳಿಗೆ ಸಕಾಲದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದಿದ್ದರೆ, ಅಂತಹ ತೊಂದರೆಗಳು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಇನ್ನು ಕಲ್ಲಂಗಡಿ ಸೇವನೆಯಿಂದ ಆಹಾರ ವಿಷಪ್ರಾಶನವಾಗುವುದು ಸಾಮಾನ್ಯ, ಇದು ಹೆಚ್ಚಾಗಿ ಅತಿಸಾರ, ವಾಂತಿ ಮತ್ತು ಹೊಟ್ಟೆ ಸೆಳೆತಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ತೀವ್ರತೆಯು ಈ ಕೆಳಗಿನವುಗಳನ್ನು ಅವಲಂಬಿಸಿರುತ್ತದೆ:
1 ಬ್ಯಾಕ್ಟೀರಿಯಾ ಅಥವಾ ಕಲುಷಿತ ಅಂಶದ ವಿಧ: ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾ ಅಥವಾ ಕಲುಷಿತಕಾರಕಗಳು ಎಂತಹವು ಎಂಬುದು ಮುಖ್ಯವಾಗುತ್ತದೆ.
2. ವ್ಯಕ್ತಿಯ ರೋಗನಿರೋಧಕ ಶಕ್ತಿ: ಸೋಂಕಿನ ವಿರುದ್ಧ ಹೋರಾಡುವ ವ್ಯಕ್ತಿಯ ದೈಹಿಕ ಸಾಮರ್ಥ್ಯ ಅಥವಾ ಇಮ್ಯೂನಿಟಿ ಮಟ್ಟ.
3. ವೈದ್ಯಕೀಯ ಚಿಕಿತ್ಸೆ ದೊರೆಯುವ ವೇಗ: ಬಾಧಿತ ವ್ಯಕ್ತಿಗೆ ಎಷ್ಟು ಬೇಗನೆ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಲಭ್ಯವಾಗುತ್ತದೆ ಎಂಬುದು.
ಇನ್ನೂ ತೀವ್ರತರವಾದ ಪ್ರಕರಣಗಳಲ್ಲಿ, ವಿಶೇಷವಾಗಿ ತೀವ್ರ ಅತಿಸಾರ ಮತ್ತು ಹೊಟ್ಟೆ ಸಮಸ್ಯೆಗಳಿರುವ ಮಕ್ಕಳಲ್ಲಿ, ಈ ಸ್ಥಿತಿಯು ಜೀವಕ್ಕೆ ಅಪಾಯಕಾರಿಯಾಗಬಹುದು.
ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಈ ವಿಷಯಗಳನ್ನ ಗಮದಲ್ಲಿ ಇಟ್ಟುಕೊಳ್ಳಬೇಕು.
ಕಲ್ಲಂಗಡಿ ಹಣ್ಣು ತಿನ್ನುವಾಗ ಬೆಳಗ್ಗೆ ಯಿಂದ ರಾತ್ರಿ ಎಂಟರ ಒಳಗೆ ತಿಂದರೆ ಸೂಕ್ತ ಎನ್ನುತ್ತಾರೆ ತಜ್ಞರು.
ರಾತ್ರಿ ವೇಳೆ ಮಲಗುವಾಗ ಸೇವಿಸಿದರೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಿ ಬ್ಯಾಕ್ಟೀರಿಯ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಗೆ ಕಾರಣವಾಗುತ್ತದೆ. ಇದು ಆರೋಗ್ಯ (health) ಮೇಲೆ ಪರಿಣಾಮ ಬೀರುತ್ತೆ ಎನ್ನುತ್ತಾರೆ ತಜ್ಞರು. ಹೀಗಾಗಿ ಮುಂದೆ ಹಣ್ಣನ್ನು ಸೇವಿಸುವಾಗ ಈ ವಿಷಯ ಗಮನದಲ್ಲಿ ಇಟ್ಟು ಸೇವಿಸಿದರೇ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವುದು ತಜ್ಞರ ಅಭಿಪ್ರಾಯ.







