ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿಯಿಂದ ಕರಾವಳಿಯ ಐದು ತಾಲೂಕಿನಲ್ಲೂ ಕೃತಕ ಪ್ರವಾಹ ಸೃಷ್ಟಿಯಾಗಿ ಹಲವು ಮನೆಗಳು ಜಲಾವೃತವಾದರೇ ಹೆದ್ದಾರಿಯ ಅಸಮರ್ಪಕ ನಿರ್ವಹಣೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಗುಡ್ಡ ಕುಸಿತ ಹಾಗೂ ಅಪಘಾತದಿಂದ ಸಾವುನೋವುಗಳು ಸಂಭವಿಸಿದ್ದವು.
ಈ ಕುರಿತು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರು ಸಭೆ ಕರೆದು ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಕಂಪನಿಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಈ ಮಧ್ಯೆ ಮಾಧ್ಯಮದ ವರದಿಯನ್ನು ಪ್ರಸ್ತಾಪಿಸಿದ ಅವರು ಕಾರವಾರದ ಟನಲ್ ನ ಫಿಟ್ ನೆಸ್ಸ್ ಸರ್ಟಿಫಿಕೇಟ್ ನನ್ನು ಕೇಳಿದಾಗ ಐ.ಆರ್.ಬಿ ಕಂಪನಿ ಅಧಿಕಾರಿ ಹರಿಕೃಷ್ಣ ರವರು ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದಿರುವ ಬಗ್ಗೆ ತಿಳಿಸಿದರು. ಇನ್ನು ಹೆದ್ದಾರಿ ಕಾಮಗಾರಿಯಲ್ಲೂ ಲೋಪವಾಗಿರುವ ಕುರಿತು ಸಭೆಯಲ್ಲಿ ಒಪ್ಪಿಕೊಂಡಿದ್ದು ಕಾರವಾರದ ಟನಲ್ ನ ದೃಡತೆ ಪ್ರಮಾಣ ಪತ್ರ ನೀಡುವ ವರೆಗೆ ಟನಲ್ ಬಂದ್ ಮಾಡಲು ಒಪ್ಪಿಕೊಂಡಿದ್ದಾರೆ. ಇದಲ್ಲದೇ ಹೆದ್ದಾರಿ ಉದ್ದಕ್ಕೂ ಕಳಪೆ ಕಾಮಗಾರಿ ಮಾಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ 66 ಮೂರು ಟೋಲ್ ಗೇಟ್ ಹಾಗೂ ಟನಲ್ ಬಂದ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚನೆ ನೀಡಿದರು.
ಎಲ್ಲಿ ಬಂದ್ ?

ಕಾರವಾರದ ಬೈತಕೋಲ್ ಮಾರ್ಗದಲ್ಲಿ ಇರುವ ಎರಡು ಸುರಂಗ ಮಾರ್ಗದ ದೃಡತೆ ಪ್ರಮಾಣ ಪತ್ರ ನೀಡುವ ವರೆಗೂ ನಾಳೆಯಿಂದ ಎರಡು ಟನಲ್ ಬಂದ್ ಇರಲಿದೆ.

ಇನ್ನು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಂಕೋಲದ ಹಟ್ಟಿಕೇರಿ ಟೋಲ್ ಗೇಟ್ , ಕುಮಟಾದ ಹೊಳೆಗದ್ದೆ,ಉಡುಪಿ ಜಿಲ್ಲೆಯ ಬೈಂದೂರಿನ ಶಿರೂರು ಟೋಲ್ ಗೇಟ್ ಹೆದ್ದಾರಿಯ ಫಿಟ್ ನೆಸ್ ( fitness certificate) ನೀಡುವ ವರೆಗೆ ನಾಳೆಯಿಂದಲೇ ಟೋಲ್ ಗೇಟ್ ಗಳು ಬಂದ್ ಇರಲಿದ್ದು ಸವಾರರು ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಒಂದುವೇಳೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡಿದಲ್ಲಿ ಟೋಲ್ ಗೇಟ್ ಶುಲ್ಕ ಸಂಗ್ರಹ ಮಾಡಬಹುದು ಎಂದು ಸಚಿವರು ತಿಳಿಸಿದರು. ಇನ್ನು ಸಭೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ,ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಇತರ ಅಧಿಕಾರಿಗಳು ಉಪಸ್ತಿತರಿದ್ದರು.






