BREAKING NEWS
Search

ಅಬ್ಬರದ ಮಳೆ ಮುಳಿಗಿ ಎದ್ದ ಕರಾವಳಿ!ಮಳೆಗೆ ಒಂದು ಸಾವು.

225

ಕಾರವಾರ: ಉತ್ತರ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲ್ಬಾಗದ ಕೆಲ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಯಾದ(Rain) ಪರಿಣಾಮ‌ ಕರಾವಳಿಯಲ್ಲಿ ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.

ಕಾರವಾರದಲ್ಲಿ(Karwar) ಸಂಜೆ ಬಳಿಕ ಬುಧವಾರ ಮುಂಜಾನೆವರೆಗೂ ಸುರಿದ ಭಾರಿ ಮಳೆಗೆ ನಗರದ ಗ್ರೀನ್ ಸ್ಟ್ರೀಟ್ ರಸ್ತೆ, ಹೈಚರ್ಚ್ ಬಳಿ, ಹಬ್ಬುವಾಡ ರಸ್ತೆ, ಪದ್ಮನಾಭನಗರಗಳಲ್ಲಿ ಜಲಾವೃತಗೊಂಡಿದೆ. ಹಬ್ಬುವಾಡದ ಬಳಿ ಬಸ್ ಡಿಪೋಗೆ ನೀರು‌ ನುಗ್ಗಿ ಸಾಕಷ್ಟು ಅನಾಹುತ ತಂದೊಡ್ಡಿದೆ. ಅಲ್ಲದೆ ಅರಗಾದ ಬಳಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡ ಕಾರಣ ಪ್ರಯಾಣಿಕರು ಸಂಚಾರಕ್ಕೆ ಪರದಾಡುವಂತಾಯಿತು.

ಭಟ್ಕಳದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ನಗರದ ರಂಗೀಕಟ್ಟೆ, ಶಂಶುದ್ಧೀನ ಸರ್ಕಲ್, ಮಣ್ಕುಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡ ಬೇಕಾದ ಪ್ರಸಂಗ ಎದುರಾಯಿತು. ಅನೇಕ ದ್ವಿಚಕ್ರ ವಾಹನಗಳು, ಲಘುವಾಹನಗಳು ಸೈಲೆನ್ಸರ್ ಒಳಗೆ ನೀರು ಹೋದ ಕಾರಣ ನಡುನೀರಿನಲ್ಲಿಯೇ ಬಂದ್ ಬಿದ್ದು ಅಧ್ವಾನವಾದ ಪ್ರಸಂಗ ಕೂಡಾ ನಡೆಯಿತು.

ಕಳೆದ ವರ್ಷವೇ ತೀವ್ರ ತೊಂದರೆಯಾಗಿದ್ದು ರಂಗೀಕಟ್ಟೆಯ ಬಳಿಯಲ್ಲಿ ನಿಂತ ನೀರು ಕೋಗ್ತಿ ಬೈಲಿನಲ್ಲಿರುವ ಅನೇಕ ಮನೆಗಳಿಗೆ ನುಗ್ಗಿ ಹಾನಿಯಾಗಿದೆ.

ಸ್ವತಹ ಸಹಾಯಕ ಆಯುಕ್ತರು ಪರಿಶೀಲಿಸಿ ಐ.ಆರ್.ಬಿ. ಇಂಜಿನಿಯರ್‌ಗಳನ್ನು ಕರೆಯಿಸಿ ರಂಗೀಕಟ್ಟೆಯಲ್ಲಿರುವ ಮೋರಿಯನ್ನು ಸ್ವಚ್ಚ ಗೊಳಿಸುವುದು ಇಲ್ಲವೇ ಬದಲಾಯಿಸುವುದಕ್ಕೆ ಸೂಚಿಸಿದ್ದರು. ಎಲ್ಲದಕ್ಕೂ ತಲೆಯಾಡಿಸಿಕೊಂಡು ಹೋಗಿದ್ದ ಐ.ಆರ್.ಬಿ. ಅಧಿಕಾರಿಗಳು ನಂತರ ಈ ಕಡೆ ಸುಳಿದೇ ಇಲ್ಲ.

ಈ ಬಾರಿ ಮತ್ತೆ ನೀರು ನುಗ್ಗಿದೆ. ಅನೇಕ ಕಡೆಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆ ಇದ್ದು ಅಧಿಕಾರಿಗಳು ಕಾಳಜಿ ಕೇಂದ್ರವನ್ನು ತೆರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇನ್ನು ಹೊನ್ನಾವರ ತಾಲೂಕಿನ ಗುಣವಂತೆ ನಾಜಗಾರ, ಮಂಕಿ ಕಾಸರಕೋಡ ಭಾಗದಲ್ಲಿ ಹೆದ್ದಾರಿ ಪಕ್ಕದ ಚರಂಡಿಯಿಂದ ಉಕ್ಕಿ ನೀರು ರಸ್ತೆಗೆ ಬಂದಿದ್ದರಿಂದ ಲಘು ವಾಹನಗಳು ಪರದಾಡಬೇಕಾಯಿತು.

ಮೊಲ್ಕೋಡ ಗ್ರಾಮದ ಮಣಿಕಂಠ ಇವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದು ಭಾಗಶಃ ಹಾನಿ ಆಗಿದ್ದು ಸರಿಸುಮಾರು ರೂ. 35,000 ಕ್ಕೂ ಮೇಲ್ಪಟ್ಟು ಹಾನಿ ಉಂಟಾಗಿದೆ ಎಂದು ಕಂದಾಯ ಅಧಿಕಾರಿಗಳು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ.

ಪ್ರಭಾತನಗರದ ಪ್ರಕಾಶ ಮೇಸ್ತ ಎನ್ನುವವರ ಮನೆಯ ಮುಂದಿನ ಮಾವಿನ ಮರ ಮನೆಯ ಮೇಲೆ ಬಿದ್ದು ಮನೆಯ ಹಂಚು, ಗೋಡೆಗೆ ಭಾಗಶಃ ಹಾನಿ ಉಂಟಾಗಿದೆ. ಹಾನಿಯನ್ನು ಸುಮಾರು 15,000 ಎಂದು ಅಂದಾಜಿಸಲಾಗಿದೆ. ಮಂಕಿ ಬಣಸಾಲೆಯ ನಿವಾಸಿಯಾದ ಗಣಪತಿ ಸೋಮಯ್ಯ ನಾಯ್ಕ ಇವರ ಮನೆಯ ಮೇಲೆ ಅಶ್ವತ್ಥ ಮರ ಬಿದ್ದು ಹಾನಿ ಸುಮಾರು 1,02,000 ಕ್ಕೆ ಮೇಲ್ಪಟ್ಟು ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕಂದಾಯ ಅಧಿಕಾರಿಗಳು ಹಾಗೂ ತಹಶೀಲ್ದಾರ ರವಿರಾಜ ದಿಕ್ಷೀತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.ಇನ್ನು ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರರದಲ್ಲಿ ವ್ಯಾಪಕ ಮಳೆಯಾಗಿದೆ.

ಸಿದ್ದಾಪುರದಲ್ಲಿ ಬೆಳಿಗ್ಗೆಯಿಂಲೇ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.

ಇಂದಿನಿಂದ ಎರಡು ದಿನ ಆರಂಜ್ ಅಲರ್ಟ್:

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆ 8:30 ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಅತ್ಯಂತ ಭಾರಿ ಮಳೆ ಬೀಳುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜು.05 ರ ಬೆಳಿಗ್ಗೆ 8:30 ರಿಂದ ಜು 07 ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಭಾರಿ ಮಳೆ ಬೀಳುವ ಸೂಚನೆಯನ್ನು ಬೆಂಗೂರಿನ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ.

ಈ ಸಮಯದಲ್ಲಿ ಅಪಾಯಕಾರಿ ಸ್ಥಳಗಳಲ್ಲಿರುವಂತಹ ಜನರಿಗೆ ಸೂಕ್ತ ತಿಳುವಳಿಕೆ ನೀಡಿ, ಅಲ್ಲಿನ ಜನ ಹಾಗೂ ಜಾನುವಾರುಗಳನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಬಗ್ಗೆ ತಾಲೂಕಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕಿನ ನೋಡಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ದಿನಭವಿಷ್ಯ ನೋಡಲು photo ದ ಮೇಲೆ ಕ್ಲಿಕ್ ಮಾಡಿ.

ಸಾರ್ವಜನಿಕರು, ಮೀನುಗಾರರು ಹಾಗೂ ಪ್ರವಾಸಿಗರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಮೀನುಗಾರರು ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಲು ಮೀನುಗಾರಿಕೆ ಇಲಾಖೆಗೆ ತಿಳಿಸಿದೆ. ಮಳೆ-ಗಾಳಿ ಬೀಸುವ ಸಂದರ್ಭದಲ್ಲಿ ಮಕ್ಕಳು ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಹಾಗೂ ಕೆಳಗೆ ನಿಲ್ಲದೇ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಆಯಾ ತಾಲೂಕು ಆಡಳಿತವನ್ನು ಇಲ್ಲವೇ ಹೆಲ್ಪ್ ಲೈನ್ 1077, 08284-282723, 7483628982. 8867839350, 08284-295959, 08382-229857 ಸಂಪರ್ಕಿಸುವಂತೆ ಜಿಲ್ಲಾಡಳಿತ ತಿಳಿಸಿದೆ.

ಮಳೆಗೆ ವೃದ್ಧೆ ಸಾವು.

ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಓರ್ವ ವೃದ್ಧ ಮಹಿಳೆ ಮನೆಯಂಗಳದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಅರಗಾ ಗ್ರಾಮದಲ್ಲಿ ನಡೆದಿದೆ.

ತಾರಾಮತಿ ನಾಯ್ಕ (85) ಎಂದು ಗುರುತಿಸಲಾಗಿದ್ದು, ಮಳೆಯ ನೀರು ಮೃತ ತಾರಾಮತಿ ಅವರ ಮನೆಗೆ ನುಗ್ಗಿದ್ದು ವೃದ್ಧ ಮಹಿಳೆ ಮನೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಸುದ್ದಿ ಓದಲು photo ದ ಮೇಲೆ ಕ್ಲಿಕ್ ಮಾಡಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!