Karwar| ರಾಜ್ಯದಲ್ಲಿ RSS ಕಾರ್ಯಚಟುವಟಿಕೆಗೆ ಕಡಿವಾಣ- ಅಧಿಕಾರ ಶಾಶ್ವತ ಅಲ್ಲ ಎಂದಿದ್ದೇಕೆ ಸಚಿವ ಲಕ್ಷ್ಮಣ್ ಸವದಿ?
ಕಾರವಾರ:-ಸಚಿವ ಜಮೀರ್ ಅಹ್ಮದ್ ಖಾನ್ ಅವರು ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಹೇಳಿ ಧ್ವಜಾರೋಹಣ ಕಾರ್ಯಕ್ರಮದಿಂದ ದೂರ ಉಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಈ ವಿಚಾರಕ್ಕೆ ರೆಕ್ಕೆ-ಪುಕ್ಕ ಕಟ್ಟುತ್ತಿದ್ದಾರೆ ಎಂದು ಆರೋಪಿಸಿರುವ ಸವದಿ, ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:-Karwar| ಕಾರವಾರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಡಿಪಾರು |ಕಾರಣವೇನು ಗೊತ್ತಾ?
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar)80 ನೇ ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗಿ ನಂತರ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಮಂದಿ ಸಚಿವರಿದ್ದಾರೆ. ಎಲ್ಲರಿಗೂ ಉಸ್ತುವಾರಿ ಜಿಲ್ಲೆ ನೀಡಲು ಸಾಧ್ಯವಿಲ್ಲ. ಮೂವರಿಗೆ ಉಸ್ತುವಾರಿ ಜಿಲ್ಲೆ ಸಿಗುವುದಿಲ್ಲ. ಜಮೀರ್ ಅಹ್ಮದ್ ಖಾನ್ ಅವರು ವಿಜಯನಗರ ಜಿಲ್ಲೆ ದೂರವಾಗುತ್ತದೆ ಎಂದು ಹೇಳಿದ್ದಾರೆ. ಸುದ್ದಿಯ ಮುಂದಿನ ಪ್ಯಾರಾಗಳು ಕೆಳಗಿವೆ ನೋಡಿ
ಮುಂದಿನ ಚುನಾವಣೆ ದೃಷ್ಟಿಯಿಂದ ಬೆಂಗಳೂರಿನ ಪಕ್ಕದ ಜಿಲ್ಲೆ ನೀಡುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.ಈ ವಿಚಾರವನ್ನು ಬಿಜೆಪಿ ಅನಗತ್ಯವಾಗಿ ದೊಡ್ಡದು ಮಾಡುತ್ತಿದೆ. ಬಿಜೆಪಿಯ ಸರ್ಕಾರ ಇದ್ದಾಗಲೂ ಮೂವರು ಸಚಿವರು ಉಸ್ತುವಾರಿ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರು. ಹಾಗಾದರೆ ಬಿಜೆಪಿಯವರಿಗೆ ದೇಶಪ್ರೇಮ ಇರಲಿಲ್ಲವೇ ಎಂದು ಸವದಿ ಪ್ರಶ್ನಿಸಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇದೆಯೇ? ನಾಗೇಂದ್ರ ಅವರ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕು ಬಿಜೆಪಿಗಿದೆಯೇ? ಬಿಜೆಪಿಗೆ ಆತ್ಮಸಾಕ್ಷಿ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:-Ankola| ರೈಲಿನಲ್ಲಿ ಯುವಕನಿಂದ ಲೈಂಗಿಕ ಕಿರುಕುಳ- ಲಿಪ್ ಸ್ಟಿಕ್ ಹಚ್ಚಿ ಬಳೆ ತೊಡಿಸಿ ವಿನೂತನ ಪ್ರತಿಭಟನೆ ಮಾಡಿದ ಯುವತಿ
ಆರ್ಎಸ್ಎಸ್ ಕಾರ್ಯಚಟುವಟಿಕೆಗೆ ಕಡಿವಾಣ ವಿಚಾರ ವಾಗಿ ಪ್ರತಿಕ್ರಿಯಿಸಿದ ಅವರು ಆರ್ಎಸ್ಎಸ್ ಸೇರಿದಂತೆ ಯಾವುದೇ ಸಂಘಟನೆಯನ್ನು ಗುರಿಯಾಗಿಸಿಕೊಂಡು ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಪ್ರತಿಯೊಂದು ಸಂಘಟನೆಗೂ ಅಕೌಂಟಿಬಿಲಿಟಿ ಇರಬೇಕು ಎಂಬುದು ಸರ್ಕಾರದ ಉದ್ದೇಶ. ಯಾವುದೇ ಸಂಘಟನೆ ತನ್ನದೇ ಆದ ದಾಖಲೆಗಳನ್ನು ಹೊಂದಿರಬೇಕು. ಯಾವುದೇ ಪಕ್ಷ, ಸಂಘಟನೆ ಅಥವಾ ಅದರ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.
ಯಾವುದೇ ಪಕ್ಷ ಮುಂದೊಂದು ದಿನ ಅಧಿಕಾರಕ್ಕೆ ಬರಬಹುದು ಅಥವಾ ಬರದೇ ಇರಬಹುದು. ಅಧಿಕಾರ ಶಾಶ್ವತವಲ್ಲ. ನಾವು ಒಂದು ಬೆರಳನ್ನು ಮತ್ತೊಬ್ಬರತ್ತ ತೋರಿಸಿದಾಗ, ಉಳಿದ ಬೆರಳುಗಳು ನಮ್ಮತ್ತಲೇ ತೋರಿಸುತ್ತವೆ ಎಂಬ ಪರಿಜ್ಞಾನ ನಮಗಿದೆ ಎಂದು ಹೇಳಿದರು.ನಾನು ಆರ್ಎಸ್ಎಸ್ನಿಂದ ಬಂದಿದ್ದೇನೆ ಎಂದು ಎಂದೂ ಹೇಳಿಲ್ಲ. ನಾನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಪ್ಪಟ ಶಿಷ್ಯ. ಜನತಾ ಪರಿವಾರದ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ. ಬಿಜೆಪಿಯಲ್ಲಿದ್ದಾಗ ಅಲ್ಲಿನ ಸಿದ್ಧಾಂತಕ್ಕೆ ಹೊಂದಿಕೊಂಡು ಕೆಲಸ ಮಾಡಿದ್ದೇನೆ. ಆದರೆ ಸೈದ್ಧಾಂತಿಕವಾಗಿ ವ್ಯತ್ಯಾಸವಾದಾಗ ಪಕ್ಷ ತೊರೆದಿದ್ದೇನೆ. ಈಗ ಕಾಂಗ್ರೆಸ್ನಲ್ಲಿದ್ದು, ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಮುಂದುವರಿಯುತ್ತಿದ್ದೇನೆ ಎಂದು ಸವದಿ ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸಚಿವ ಸ್ಥಾನ ಸಿಗದಬಗ್ಗೆ ಪ್ರತಿಕ್ರಿಯಿಸಿದ ಅವರು ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಈ ಹಿಂದೆ ಜಿಲ್ಲೆಗೆ ನಾಲ್ಕೈದು ಸಚಿವ ಸ್ಥಾನಗಳನ್ನು ನೀಡಿದ ಉದಾಹರಣೆಗಳಿವೆ. ಪ್ರಸ್ತುತ ಖಾಲಿ ಇರುವ ಸಚಿವ ಸ್ಥಾನವನ್ನು ಬೆಳಗಾವಿ ಜಿಲ್ಲೆಗೆ ನೀಡಿದರೆ ಅತ್ಯಂತ ಸಂತೋಷಪಡುವ ವ್ಯಕ್ತಿ ನಾನೇ. ಸಾಧ್ಯವಿದ್ದರೆ ಖಾಲಿ ಇರುವ ಸ್ಥಾನವನ್ನು ನಮ್ಮ ಜಿಲ್ಲೆಗೆ ನೀಡಬೇಕು ಎಂಬುದು ನನ್ನ ವಿನಂತಿಯೂ ಆಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.







