Uttara kannada | ಅಪ್ರಾಪ್ತರ ವಾಹನ ಚಾಲನೆ:ಒಂದು ವರ್ಷದಲ್ಲಿ 131 ಪ್ರಕರಣ13 ಲಕ್ಷಕ್ಕೂ ಅಧಿಕ ದಂಡ
ಕಾರವಾರ: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದನ್ನು ತಡೆಯುವ ನಿಟ್ಟಿನಲ್ಲಿ ಉತ್ತರ ಕನ್ನಡ (uttara Kannada) ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪೋಷಕರು ಹಾಗೂ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು ಕೇವಲ ಒಂದೇ ವರ್ಷದಲ್ಲಿ 131 ಪ್ರಕರಣ ದಾಖಲಿಸಲಾಗಿದೆ.
ಜನವರಿ 2026ರಿಂದ ಸೆಪ್ಟೆಂಬರ್ 2026ರವರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ ಹಾಗೂ ಅವರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ 1988ರ ಕಲಂ 199(ಎ) ಅಡಿಯಲ್ಲಿ ಒಟ್ಟು 131 ಪ್ರಕರಣಗಳು ದಾಖಲಾಗಿವೆ.ಇದನ್ನೂ ಓದಿ:-Uttara Kannada | ಆಟೋಗಳಿಗೆ CNG ಸಂಕಷ್ಟ 35 ಚಾಲಕರಿಂದ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು
ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತ ವಯಸ್ಕರ ಪೋಷಕರು ಹಾಗೂ ವಾಹನ ಮಾಲೀಕರಿಗೆ ಒಟ್ಟು ರೂ.13,09,000 ದಂಡ ವಿಧಿಸಿದೆ.
ದಾಖಲಾದ ಪ್ರಕರಣಗಳ ಪೈಕಿ ಭಟ್ಕಳ ಶಹರ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು 45 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ನ್ಯಾಯಾಲಯವು ಒಟ್ಟು ರೂ.5,38,500 ದಂಡ ವಿಧಿಸಿದೆ.
ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದರಿಂದ ಅವರ ಜೀವಕ್ಕೆ ಮಾತ್ರವಲ್ಲದೆ, ಇತರ ರಸ್ತೆ ಬಳಕೆದಾರರ ಸುರಕ್ಷತೆಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇಂತಹ ಉಲ್ಲಂಘನೆಗಳಿಗೆ ವಾಹನದ ಮಾಲೀಕರು ಹಾಗೂ ಪೋಷಕರು ಕಾನೂನು ಕ್ರಮ ಮತ್ತು ದಂಡಕ್ಕೆ ಒಳಪಡಬೇಕಾಗುತ್ತದೆ.
ಹೀಗಾಗಿ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ, ಕಾರು ಸೇರಿದಂತೆ ಯಾವುದೇ ಮೋಟಾರು ವಾಹನವನ್ನು ಚಾಲನೆ ಮಾಡಲು ನೀಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ವಾಹನ ಮಾಲೀಕರು ಸಹ ಅಪ್ರಾಪ್ತರಿಗೆ ವಾಹನ ನೀಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
