
ಸ್ವಾಮೀಜಿ ಹೇಳಿದ್ದೇನು? ವಿಡಿಯೋ ಇಲ್ಲಿದೆ.
Sirsi |ಬ್ರಾಹ್ಮಣರ ತೇಜೋವಧೆ ! ಆ ವ್ಯಕ್ತಿಯನ್ನ ಕತ್ತರಿಸಿ ಕೋರ್ಟಗೆ ಶರಣಾಗುತ್ತೇನೆ ಎಂದ ಬನವಾಸಿ ಶ್ರೀ ನಾಗಭೂಷಣ ಸ್ವಾಮೀಜಿ !
ಶಿರಸಿ: ಈ ದೇಶದಲ್ಲಿ ವಾಸಿಸುವ ದೃಷ್ಟಿಯಿಂದ ಮುಸಲ್ಮಾನರು, ಕ್ರೈಸ್ತರು, ಲಿಂಗಾಯತರು ಸೇರಿದಂತೆ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬಹುದು ಆದರೆ ಧಾರ್ಮಿಕವಾಗಿ ನಾವು ಹಿಂದೂಗಳಲ್ಲ. ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮವಾಗಿದೆ. ನಾವು ಚಾತುರ್ವರ್ಣ ವ್ಯವಸ್ಥೆ ಅಥವಾ ಮನುಸ್ಮೃತಿಯ ವ್ಯಾಪ್ತಿಗೆ ಬರುವುದಿಲ್ಲ, ಎಂದು ಬನವಾಸಿ ಹೊಳೆಮಠದ ಶ್ರೀ ನಾಗಭೂಷಣ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.ಶಿರಸಿಯಲ್ಲಿ (sirsi) ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ನಾಶಮಾಡುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಸವ ತತ್ವ ಮತ್ತು ಮಹಿಳಾ ಸಮಾನತೆ:
“ಬಸವ ತತ್ವ ಹಾಗೂ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಮಾಡಿ ಮನುಸ್ಮೃತಿಯನ್ನು ಜಾರಿಗೆ ತರಲು ಪುರೋಹಿತಶಾಹಿಗಳು ಹುನ್ನಾರ ನಡೆಸುತ್ತಿದ್ದಾರೆ. ಪುರುಷರಷ್ಟೇ ಸಮಾನವಾಗಿ ಮಹಿಳೆಯರಿಗೂ ಸಂಸ್ಕಾರ ದೊರಕುವಂತೆ ಮಾಡಿದ್ದು ಮತ್ತು ಮಹಿಳೆಯರು ಸ್ವತಂತ್ರವಾಗಿ ಬದುಕುವಂತಾಗಲು ಕಾರಣರಾದವರು ಬಸವಣ್ಣನವರು. ಹಿಂದೆ ಬ್ರಾಹ್ಮಣಶಾಹಿಯಲ್ಲಿ ಹೆಣ್ಣುಮಕ್ಕಳು, ಹೆಂಡತಿ ಮತ್ತು ತಾಯಿಯನ್ನು ಶೂದ್ರರೆಂದು ಪರಿಗಣಿಸಲಾಗುತ್ತಿತ್ತು. ಎಂಟನೇ ವಯಸ್ಸಿನಲ್ಲಿ ಜನಿವಾರ ಹಾಕಿ ಬ್ರಾಹ್ಮಣತ್ವ ಪ್ರಾಪ್ತಿಯಾಗುತ್ತದೆ ಎಂದು ಬಂದಾಗ, ‘ನನ್ನ ಹೆತ್ತ ತಾಯಿಯೇ ಶೂದ್ರಳಾದರೆ ನಾನು ಹೇಗೆ ಬ್ರಾಹ್ಮಣನಾಗುತ್ತೇನೆ? ಆ ಸಂಸ್ಕಾರವನ್ನು ನನ್ನ ತಾಯಿ ಮತ್ತು ಅಕ್ಕನಿಗೆ ಕೊಡಿ’ ಎಂದು ಬಸವಣ್ಣನವರು ದೃಢವಾಗಿ ಹೇಳಿದ್ದರು,” ಎಂದು ಸ್ವಾಮೀಜಿ ಸ್ಮರಿಸಿದರು.
ಹೆಸರುಗಳನ್ನು ಉಲ್ಲೇಖಿಸಿ ಆರೋಪ ಹಾಗೂ ಕನ್ನೇರಿ ಶ್ರೀಗಳಿಗೆ ಆಕ್ಷೇಪ
ಕರ್ನಾಟಕ ಮತ್ತು ದೇಶದಲ್ಲಿ ಲಿಂಗಾಯತ ಧರ್ಮವನ್ನು ನಾಶ ಮಾಡಲು ಸಂಚು ನಡೆಯುತ್ತಿದೆ ಎಂದು ದೂರಿದ ಶ್ರೀಗಳು, ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತು ದಾವಣಗೆರೆಯ ಜಂಗಮ ಸಮುದಾಯಕ್ಕೆ ಸೇರಿದ ‘ರವಿ ಹಂದಿಗೆ ಮಠ’ (ರವಿ ಹಂದ) ಎಂಬುವವರ ಹೆಸರನ್ನು ಪ್ರಸ್ತಾಪಿಸಿ, “ಇವರೆಲ್ಲರೂ ಸೇರಿ ಈ ಕಥೆಯನ್ನು ಹೆಣೆಯುತ್ತಿದ್ದಾರೆ. ಲಿಂಗಾಯತ ಸಮುದಾಯದವರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಚಾತುರ್ವರ್ಣ ವ್ಯವಸ್ಥೆಯೊಳಗೆ ತಂದು ನಿಲ್ಲಿಸುವ ಅಪಾಯವಿದೆ,” ಎಂದು ಎಚ್ಚರಿಸಿದರು. ಅಲ್ಲದೆ, ಕನ್ನೇರಿ ಸ್ವಾಮೀಜಿ ಆಯೋಜಿಸುತ್ತಿರುವ ‘ಬಸವಾದಿ ಹಿಂದೂ ಸಮಾವೇಶ’ಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಅವರು, “ಹಿಂದೂ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ,” ಎಂದರು.
ವಚನ ಸಾಹಿತ್ಯಕ್ಕೆ ಅಪಮಾನ; ಕೈ ಕತ್ತರಿಸಿ, ಶೂಟ್ ಮಾಡಿ ಶರಣಾಗುವೆ ಎಂದ ಶ್ರೀಗಳು
“ದೇಹವನ್ನೇ ದೇವಾಲಯ, ಆತ್ಮವೇ ಲಿಂಗ ಎಂದು ಹೇಳಿ ಇಷ್ಟಲಿಂಗವನ್ನು ಕೊಟ್ಟು, ಮೇಲು-ಕೀಳಿಲ್ಲದ ಶರಣ ಧರ್ಮವನ್ನು ಬಸವಣ್ಣನವರು ಕಟ್ಟಿದರು. ಅಂದು ಪುರೋಹಿತಶಾಹಿಗಳು ಕೋಟ್ಯಂತರ ವಚನಗಳನ್ನು ಸುಟ್ಟರೂ, ಅಳಿದುಳಿದ ವಚನಗಳನ್ನು ಉಳುವಿ ಗವಿಗಳಲ್ಲಿ ಇಟ್ಟು ಶರಣರು ರಕ್ಷಿಸಿದರು. ಅಂತಹ ವಿಶ್ವ ಸಾಹಿತ್ಯದಲ್ಲಿ ಅಪೂರ್ವವಾದ ವಚನ ಸಾಹಿತ್ಯವನ್ನು ಹೀಯಾಳಿಸಲಾಗುತ್ತಿದೆ. ಲಿಂಗಾಯತರು ಕೊಲೆಗಡುಕರು ಎಂಬರ್ಥದಲ್ಲಿ ಮತ್ತು ಬಸವಣ್ಣನವರನ್ನು ಕೊಲೆಗಡುಕ, ಕಳ್ಳ, ಚೋರ ಎಂದೆಲ್ಲಾ ಮಾತನಾಡಿದ್ದಾರೆ,” ಎಂದು ಕಿಡಿಕಾರಿದರು.
Sirsi | ವಿದ್ಯುತ್ ಶಾಕ್ ನೀಡಿ ಕಾಡಾನೆ ಹತ್ಯೆ- ತಂದೆ-ಮಗನ ಬಂಧನ
ಮುಂದುವರಿದು ತೀವ್ರ ಆಕ್ರೋಶದಿಂದ ಮಾತನಾಡಿದ ಸ್ವಾಮೀಜಿ, “ಎಲ್ಲಿಯವರೆಗೆ ನಮ್ಮ ತಂದೆ-ತಾಯಿ ಮೇಲೆ ಅತ್ಯಾಚಾರ ಮಾಡಲು ಬರುವವರನ್ನು ನೀವು ಕತ್ತರಿಸಿ ಹಾಕುವುದಿಲ್ಲವೋ, ಅಲ್ಲಿಯವರೆಗೆ ಸಮಾಜದಲ್ಲಿ ಇವು ನಡೆಯುತ್ತಲೇ ಇರುತ್ತವೆ. ಅದನ್ನು ಬರೆದವನ ಎರಡು ಕೈಗಳನ್ನು ಕತ್ತರಿಸಬೇಕು. ಸಮಾಜ ನನಗೆ ಅಧಿಕಾರ ಕೊಡಲಿ, ನಾನು ಅವನನ್ನು ಕತ್ತರಿಸಿ ಕೋರ್ಟಿಗೆ ಶರಣಾಗುತ್ತೇನೆ. ನನಗೆ ಇಷ್ಟು ಅಧಿಕಾರ ಕೊಡಿ, ಅವನನ್ನು ಶೂಟ್ ಮಾಡಿ ನಾನು ಕೋರ್ಟಿಗೆ ಶರಣಾಗುತ್ತೇನೆ. ನಮ್ಮ ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಕದ್ದು ಶೂಟ್ ಮಾಡಿದ್ರಲ್ಲೋ ಭಂಡರೇ, ಕದ್ದು ಶೂಟ್ ಮಾಡಿ ತಲೆಮರೆಸಿಕೊಂಡು ಓಡಾಡುತ್ತೀರಾ. ನಾವು ನಿಮ್ಮಂತಹ ದ್ರೋಹಿಗಳನ್ನು ಹೋಗಿ ಶೂಟ್ ಮಾಡಿ ಕಾನೂನಿಗೆ ಶರಣಾಗುತ್ತೇವೆ,” ಎಂದು ಹೇಳಿದರು.
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ವಾಗ್ದಾಳಿ
“ಪುರೋಹಿತಶಾಹಿಗಳೇ, ಸನಾತನಿಗಳೇ ನೆನಪಿಟ್ಟುಕೊಳ್ಳಿ; ನಾವು ಯಾರೂ ಸುಮ್ಮನೆ ಕೂತಿಲ್ಲ, ಹೆದರಿಲ್ಲ. ರವಿ ಹಂದ ಅವರ ಹಿಂದೆ ನಿಂತುಕೊಂಡು ನಾಟಕ ಆಡುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಹೊರಗೆ ಬನ್ನಿ. ಬಿಜೆಪಿ ಸಂಘದ ರಾಜಕಾರಣಿಗಳೇ ಬಾಯಿ ಬಿಡಿ. ಲಿಂಗಾಯತರೇ, ವೋಟಿಗಾಗಿ ಇವರು ಈಗ ಬಾಯಿ ತೆಗೆಯುತ್ತಿದ್ದಾರೆ. ಇವರ ನಾಟಕ ಇವತ್ತು ಸಮಾಜಕ್ಕೆ ಗೊತ್ತಾಗಿದೆ. ದಯವಿಟ್ಟು ಲಿಂಗಾಯತರು ಬಿಜೆಪಿಯ ಯಾವ ಸದಸ್ಯರಿಗೂ ವೋಟ್ ಹಾಕಬಾರದು. ಆ ದೃಷ್ಟಿಯಿಂದ ಬಿಜೆಪಿಯೇ ನಮಗೆ ಶತ್ರು,” ಎಂದು ನಾಗಭೂಷಣ ಸ್ವಾಮೀಜಿ ಕರೆ ನೀಡಿದರು.
ವಿಡಿಯೋ ನೋಡಿ:-






