





Ankola |ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಡೀಸೆಲ್ ತೆಗೆದು, ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಅಂಕೋಲಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಅಂಕೋಲಾ ತಾಲೂಕಿನ ರಾಮನಗುಳಿ ದುಗ್ಗನಬೈಲ್ ನಿವಾಸಿ ಹಾಗೂ ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸುತ್ತಿರುವ ಚಂದ್ರಶೇಖರ ಪಾಂಡುರಂಗ ನಾಯ್ಕ (37) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 14ರ ಮುಂಜಾನೆ ಸುಮಾರು 1.45ರ ವೇಳೆಗೆ ರಾಮನಗುಳಿ ದುಗ್ಗನಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡೀಸೆಲ್ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಡೀಸೆಲ್ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನಗಳಿಂದ ಸಂಗ್ರಹಿಸಿದ ಡೀಸೆಲ್ ಅನ್ನು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುವ ದಹ್ಯ ವಸ್ತು ಎಂಬುದು ತಿಳಿದಿದ್ದರೂ, ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಹೆದ್ದಾರಿ ಬದಿಯಲ್ಲಿ ಇಡಲಾಗಿತ್ತು ಎಂಬ ಆರೋಪವಿದೆ. ಅಲ್ಲದೆ, ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೆ ಡೀಸೆಲ್ ಸಂಗ್ರಹಿಸಿರುವ ಆರೋಪವೂ ವ್ಯಕ್ತವಾಗಿದೆ. ಇದನ್ನೂ ಓದಿ:-Ankola| ಗ್ಯಾಸ್ ಟ್ಯಾಂಕರ್ ಪಲ್ಟಿ -ಪೊಲೀಸರ ಮುಂಜಾಗ್ರತಾ ಕ್ರಮದಿಂದ ತಪ್ಪಿದ ಅನಾಹುತ
ದಾಳಿಯಲ್ಲಿ ಡೀಸೆಲ್ ಸೇರಿದಂತೆ ಪರಿಕರ ವಶ
ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 20 ಲೀಟರ್ ಡೀಸೆಲ್ ಇದ್ದ ಒಂದು ಕ್ಯಾನ್ ಹಾಗೂ 10 ಲೀಟರ್ ಡೀಸೆಲ್ ಹೊಂದಿದ್ದ ಮತ್ತೊಂದು ಕ್ಯಾನ್ ಪತ್ತೆಯಾಗಿದೆ. ಒಟ್ಟು ಸುಮಾರು 30 ಲೀಟರ್ ಡೀಸೆಲ್‌ನ್ನು ವಶಕ್ಕೆ ಪಡೆಯಲಾಗಿದೆ.
ಇದರ ಜತೆಗೆ ಡೀಸೆಲ್ ಹೊರತೆಗೆಯಲು ಬಳಸುತ್ತಿದ್ದ ಹಸಿರು ಬಣ್ಣದ ಪ್ಲಾಸ್ಟಿಕ್ ಪೈಪ್, ಡೀಸೆಲ್ ತುಂಬಲು ಬಳಸಲಾಗುತ್ತಿದ್ದ ಕತ್ತರಿಸಿದ ಪ್ಲಾಸ್ಟಿಕ್ ಕ್ಯಾನ್ ಹಾಗೂ ಮೋಟರ್ ಸೇರಿದಂತೆ ಹಲವು ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಹಾದಿಮನಿ (ಕಾ&ಸೂ) ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
