BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಕೊನೆ ಗೌಡರಿಗೆ ಉಚಿತ 10 ಲಕ್ಷ ವಿಮೆ! ಕೊನೆ ಗೌಡರು, ಮಾಲೀಕರು ಏನು ಮಾಡಬೇಕು? ವಿವರ ನೋಡಿ.

259

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆ ವಾಣಿಜ್ಯ ದೃಷ್ಟಿಕೋನದಿಂದ ಬೆಳೆಯಲಾಗುತ್ತಿದೆ. ಆದ್ರೆ ಅಡಿಕೆ ಕೃಷಿ (Arecanut) ಎಷ್ಟು ಲಾಭವೋ ಅಷ್ಟೇ ಕಷ್ಟಕರವಾದ ಕೆಲಸ ಕಾರ್ಮಿಕರಿಗೆ.

ಅದ್ರಲ್ಲೂ ನೂರು ಅಡಿಯ ವರೆಗೂ ಬೆಳೆದು ನಿಲ್ಲುವ ಅಡಿಕೆ ಮರ ಏರಿ ಮಳೆಗಾಲದಲ್ಲಿ ಕೊಳೆ ಬಾರದಂತೆ ದ್ರಾವಣ ಸಿಂಪಡಣೆ,ಸುಗ್ಗಿ ಕಾಲದಲ್ಲಿ ಕೊನೆ ಯೊಯ್ಯುವುದು ಕೊನೆಗೌಡ (konegawda) ನಿಗೆ ತ್ರಾಸದಾಯಕ ಕೆಲಸ. ಕೆಲವು ಮರಗಳು ಲಡ್ಡಾಗುವುದರಿಂದ ಇದನ್ನು ಅರಿಯದೇ ಮರವೇರುವ ಕೊನೆಗೌಡನು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಅದೆಷ್ಟೋ ನಡೆದುಹೋಗಿದೆ. ಇನ್ನು ಕೆಲವರು ಮರದಿಂದ ಬಿದ್ದು ಮೂಳೆ ಮುರಿದುಕೊಂಡು ಶಾಶ್ವತ ಅಂಗವಿಕಲರಾದ ಘಟನೆಗಳಿದ್ದು ಈ ಹಿನ್ನಲೆಯಲ್ಲಿ ಶಿರಸಿಯ ಅನಂತ ಮೂರ್ತಿ ಹೆಗಡೆ ಯವರು ತಮ್ಮ ಟ್ರಸ್ಟ್ ಮೂಲಕ ಕೊನೆ ಗೌಡರಿಗೆ ಉಚಿತ ವಿಮೆ( free insurance )ಮಾಡಿಸುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ.

ಏನಿದು ವಿಮೆ? ನೀವೇನು ಮಾಡಬೇಕು?

ಅನಂತಮೂರ್ತಿ ಹೆಗಡೆ ಟ್ರಸ್ಟ್ ವತಿಯಿಂದ, “ಇಂಡಿಯನ್ ಪೋಸ್ಟ್ ಆಫೀಸ್” ನ ಯೋಜನೆಯಾದ “ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿ”ಯನ್ನು ಎಲ್ಲ ಕೊನೆಗೌಡರಿಗೂ ಮಾಡಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.

ಈ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯು, ಅಪಘಾತದಿಂದ ಮರಣ /ಶಾಶ್ವತ ಅಂಗವೈಕಲ್ಯ /ಭಾಗಶಃ ಅಂಗವೈಕಲ್ಯಕ್ಕೆ 10,00,000 ರೂಪಾಯಿಗಳ ಕವರೇಜ್ ಹೊಂದಿದೆ. ಮತ್ತು ಈ ಪಾಲಿಸಿಯಡಿಯಲ್ಲಿ ರೂ 60,000 ವರೆಗೆ ಒಳರೋಗಿ ವೆಚ್ಚ, ರೂ 30,000 ವರೆಗೆ ಹೊರರೋಗಿ ವೆಚ್ಚ, 10 ದಿನಗಳವರೆಗೆ ರೂ 1,000 ದೈನಂದಿನ ಆಸ್ಪತ್ರೆ ನಗದು ನೆರವು, ಮೃತರ 2 ಮಕ್ಕಳಿಗೆ 1 ಲಕ್ಷ ರೂಪಾಯಿ ಶೈಕ್ಷಣಿಕ ನೆರವು, ರೂ 25,000 ವರೆಗೆ ಕುಟುಂಬ ಸಾರಿಗೆ ಪ್ರಯೋಜನ ಮತ್ತು ರೂ 5000 ವರೆಗೆ ಅಂತಿಮ ಸಂಸ್ಕಾರದ ನೆರವಿನ ಸೌಲಭ್ಯವನ್ನು ಹೊಂದಿದೆ.

ಜಿಲ್ಲೆಯಾದ್ಯಂತ ಎಲ್ಲ ಕೊನೆಗೌಡರಿಗೆ ಈ ಪಾಲಿಸಿಯನ್ನು ಮಾಡಿಸುವ ಸಂಕಲ್ಪವನ್ನು ಅನಂತಮೂರ್ತಿ ಹೆಗಡೆ ಕೈಗೊಂಡಿದ್ದಾರೆ.

ನೀವು ಮಾಡಬೇಕಾದ್ದು ಇಷ್ಟು:-

ಜಿಲ್ಲೆಯಲ್ಲಿ ನಿಮಗೆ ಸಮೀಪವಿರುವ ಯಾವುದೇ ಸಹಕಾರಿ ಸೇವಾ ಸಂಘ ಮತ್ತು ಪಂಚಾಯತಿಗಳಿಗೆ ತಲುಪಿ,ನಿಮ್ಮ ಮಾಹಿತಿ ನೀಡಿ.

ಜಿಲ್ಲೆಯ ಅಡಿಕೆ ತೋಟದ ಮಾಲೀಕರು, ನಿಮ್ಮ ಮನೆಗೆ ಬರುವ ಕೊನೆಗೌಡರಿಗೆ ಈ ಸೌಲಭ್ಯದ ವಿಚಾರವನ್ನು ತಿಳಿಸಿ, ಅವರ ವಿವರಗಳನ್ನು ಸ್ಥಳೀಯ ಪಂಚಾಯತಿ ಅಥವಾ ಸೇವಾಸಹಕಾರಿ ಸಂಘಕ್ಕೆ ತಲುಪಿಸಲು ಸಹ ಕೋರಿಕೊಳ್ಳಲಾಗಿದೆ.

ನಂತರ ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಕರ್ತರು ಪೋಸ್ಟ್ ಆಫೀಸ್ ಸಿಬ್ಬಂದಿಗಳು ಅಲ್ಲಿಗೆ ಬಂದು, ಸಂಗ್ರಹಿಸಿದ ವಿವರಗಳನ್ನು ಸ್ವೀಕರಿಸಿ, ಪಾಲಿಸಿಯನ್ನು ಮಾಡಿಸುತ್ತಾರೆ. ಪಾಲಿಸಿ ಬಾಂಡ್ ಬಂದ ನಂತರ, ಎಲ್ಲ ಕೊನೆಗೌಡರಿಗೆ, ಔತಣಕೂಟ ಏರ್ಪಡಿಸಿ, ಗೌರವಿಸಿ, ಪಾಲಿಸಿ ಬಾಂಡನ್ನು ಹಸ್ತಾಂತರಿಸಲಾಗುತ್ತದೆ, ಮತ್ತು ದಶಕಗಳಿಂದ ಸೇವೆ ಸಲ್ಲಿಸಿರುವ, ಹಿರಿಯ ಕೊನೆಗೌಡರನ್ನು ಗುರುತಿಸಿ, ಅವರ ಜೀವಮಾನದ ಸಾಧನೆಗಾಗಿ, ಸನ್ಮಾನ ಕಾರ್ಯಕ್ರಮವನ್ನೂ ನಡೆಸಲಿದ್ದೇವೆ ಎಂದು ಅನಂತಮೂರ್ತಿ ಹೆಗಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
87623 27713
9448317709
9449995439
9482306468




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!