Karwar | ಹಳಿಯಾಳ PSIಗಳ ಆಡಿಯೋ ವೈರಲ್ ಪ್ರಕರಣ: ಮೂವರು ಪಿಎಸ್ಐ ಅಮಾನತು
ಕಾರವಾರ: ಹಳಿಯಾಳ ಪೊಲೀಸ್ ಠಾಣೆಯ ಪೋಸ್ಟಿಂಗ್ ಹಾಗೂ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೂವರು ಪಿಎಸ್ಐಗಳು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಮೂವರು ಪಿಎಸ್ಐಗಳ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದಾರೆ.
ಹಳಿಯಾಳದ(haliyala) ಎಲ್.ಅಂಡ್.ಓ ಪಿಎಸ್ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳ ಪಿಎಸ್ಐ ಆಗಿದ್ದ ವಿನೋದ್ ರೆಡ್ಡಿ ಅವರು ಪೋಸ್ಟಿಂಗ್‌ಗೆ ಸಂಬಂಧಿಸಿದಂತೆ ಹಣದ ವಿಚಾರವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:-Haliyala| ಅಧಿಕಾರಕ್ಕಾಗಿ PSI ಗಳ ಹಣದ ಡೀಲ್ ಆರೋಪ ಆಡಿಯೋ ವೈರಲ್! ಏನಿದೆ ಆಡಿಯೋದಲ್ಲಿ?
ಜೆಡಿಎಸ್‌ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿಯೂ ಈ ಆಡಿಯೋ ಹಂಚಿಕೆಯಾಗಿತ್ತು. ಹಳಿಯಾಳ ಠಾಣೆಯ ಎಲ್.ಅಂಡ್.ಓ ಪಿಎಸ್ಐ ಹುದ್ದೆಗೆ ಸಂಬಂಧಿಸಿದ ಹಣದ ವ್ಯವಹಾರ ಹಾಗೂ ಇಲಾಖೆಯಲ್ಲಿ ಮೇಲಾಧಿಕಾರಿಗಳಿಗೆ ಮಾಸಿಕ ಹಣ ನೀಡುವ ಕುರಿತು ಮಾತುಕತೆ ನಡೆದಿದೆ ಎನ್ನುವ ಆರೋಪಗಳು ಆಡಿಯೋದಲ್ಲಿ ಕೇಳಿಬಂದಿದ್ದವು.
ಆಡಿಯೋ ವೈರಲ್ ಆದ ಬಳಿಕ ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.
ತನಿಖೆಯಿಂದ ಲಭ್ಯವಾದ ಮಾಹಿತಿ ಹಾಗೂ ವರದಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಮೂವರು ಪಿಎಸ್ಐಗಳನ್ನು ಅಮಾನತು ಮಾಡುವ ಕ್ರಮ ಕೈಗೊಂಡಿದ್ದಾರೆ.
ಈ ಪ್ರಕರಣ ಇದೀಗ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಆಡಿಯೋದಲ್ಲಿನ ಮಾತುಕತೆಗಳ ಸತ್ಯಾಸತ್ಯತೆ ಹಾಗೂ ಹಣದ ವ್ಯವಹಾರದ ಆರೋಪಗಳ ಕುರಿತು ಇಲಾಖಾ ತನಿಖೆಯ ಪ್ರಮುಖ ಅಂಶವಾಗಿದೆ.
