ಉತ್ತರ ಕನ್ನಡ ಜಿಲ್ಲೆಯ (uttara kannada) 31 ಆಗಸ್ಟ್ 2026 ರ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.
ಕಾರವಾರ-ಮಲ್ಲಾಪುರ ರಸ್ತೆಯಲ್ಲಿ 30 ಟನ್‌ಗೂ ಹೆಚ್ಚು ಭಾರದ ವಾಹನಗಳ ಸಂಚಾರ ನಿಷೇಧ : ಜಿಲ್ಲಾಧಿಕಾರಿ

ಕಾರವಾರ:- ಕಾರವಾರ ತಾಲೂಕಿನ ರಾಜ್ಯ ಹೆದ್ದಾರಿ 6 ರ ಕಾರವಾರ-ದೇವಳಮಕ್ಕಿ-ಕೆರವಾಡಿ-ಬೋಳ್ವೆ-ಇರಪಾಗೆ-ಮಲ್ಲಾಪುರ ರಸ್ತೆಯಲ್ಲಿ 30 ಟನ್‌ಗಿಂತ ಹೆಚ್ಚಿನ ಭಾರವುಳ್ಳ ಸರಕು ಹಾಗೂ ಬೃಹತ್ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಬೃಹತ್ ಹಾಗೂ ಅಧಿಕ ಭಾರದ ವಾಹನಗಳ ನಿರಂತರ ಸಂಚಾರದಿoದಾಗಿ ಈ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಜೀವಾಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಳಾದ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಿ ಸಾರ್ವಜನಿಕರ ಲಘು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ NPCIL ಕೈಗಾದ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ:-Karwar|ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಕ್ಕೆ ನಿರ್ಬಂಧ – ಜಿಲ್ಲಾಧಿಕಾರಿ
ಲೋಕೋಪಯೋಗಿ ಇಲಾಖೆಯಿಂದ ವಾಹನ ನಿಷೇಧ ಕುರಿತು ಎಚ್ಚರಿಕಾ ಫಲಕಗಳನ್ನು ಅಳವಡಿಸುವಂತೆ ಮತ್ತು ರಸ್ತೆ ದುರಸ್ತಿಯಾದ ನಂತರ, ಬೃಹತ್ ವಾಹನಗಳ ಸಂಚಾರಕ್ಕೆ ರಸ್ತೆ ಯೋಗ್ಯವಾಗಿದೆ ಎಂಬ ಕುರಿತು ರಸ್ತೆ ಸುರಕ್ಷತಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಪೊಲೀಸ್ ಇಲಾಖೆಯಿಂದ ಅಗತ್ಯ ಸ್ಥಳಗಳಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಸಂಚಾರ ದಟ್ಟಣೆ ಉಂಟಾಗದoತೆ ಸೂಕ್ತ ಕ್ರಮ ವಹಿಸಬೇಕು ಹಾಗೂ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಯಾವುದೇ ಅಪಘಾತಗಳು ಸಂಭವಿಸದoತೆ ನಿಗಾ ವಹಿಸಬೇಕು ಎಂದು ಆದೇಶಿಸಿದ್ದಾರೆ.
ರೈತನ ಮೇಲೆ ಕರಡಿ ದಾಳಿ, ಎರಡೂ ಕೈ ಹಾಗೂ ಮುಖಕ್ಕೆ ಗಂಭೀರ ಗಾಯ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ(joida) ತಾಲೂಕಿನ ಬಾಮಣಗಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿದ ಘಟನೆ ನಡೆದಿದೆ.
ಕರಡಿ ದಾಳಿಯಲ್ಲಿ ದಾವಲ್ ಸಾಬ್ ಗೂಡು ಸಾಬ್ ದೊಡ್ಡಮನಿ (50) ಎಂಬ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ರೈತ ದಾವಲ್ ಸಾಬ್ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ನಡೆಸಿದೆ. ದಾಳಿಯಿಂದ ಅವರ ಎರಡೂ ಕೈ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗಾಯಗೊಂಡ ರೈತನನ್ನು ತಕ್ಷಣ ಚಿಕಿತ್ಸೆಗಾಗಿ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಬಳಿಕ ಬಾಮಣಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕರಡಿ ದಾಳಿಯಿಂದ ಭಯಭೀತರಾಗಿರುವ ಸ್ಥಳೀಯರು, ಅರಣ್ಯ ಇಲಾಖೆ ತಕ್ಷಣ ಅಗತ್ಯ ಕ್ರಮ ಕೈಗೊಂಡು ಗ್ರಾಮಸ್ಥರ ಸುರಕ್ಷತೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿರಸಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಹಂಚು ರಿಪೇರಿಗೆ ಮಕ್ಕಳ ಬಳಕೆಗೆ ವಿರೋಧ

ಶಿರಸಿ :- ಸೋರುತ್ತಿರುವ ಶಾಲೆಯ ಹಂಚಿನ ರಿಪೇರಿಗಾಗಿ ಶಾಲೆಯ ಪುಟ್ಟ ಮಕ್ಕಳನ್ನು ಬಳಸಿ ಮೇಚ್ಛಾವಣಿ ಏರಿಸಿ ಪುಟ್ಟ ಮಕ್ಕಳಿಂದಲೇ ಹಂಚನ್ನು ರಿಪೇರಿ ಮಾಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3 ರಲ್ಲಿ ನಡೆದಿದೆ.
ಮಳೆಯಿಂದಾಗಿ ಶಾಲೆಯ ಮೇಲ್ಛಾವಣಿ ಸೋರುತಿದ್ದು ಹಂಚುಗಳು ಮುರಿದಿದ್ದು ಇದನ್ನು ಕೆಲಸಗಾರರನ್ನು ಕರೆಯಿಸಿ ರಿಪೇರಿ ಮಾಡಿಸುವ ಬದಲು ಹಣ ಉಳಿಸುವ ಯೋಚನೆಯಲ್ಲಿ ಶಾಲೆಯ ಶಿಕ್ಷಕರು ಇಲ್ಲಿನ ಮಕ್ಕಳ ಪ್ರಾಣದ ಜೊತೆಯೇ ಚಲ್ಲಾಟವಾಡಿದ್ದು, ಮಕ್ಕಳನ್ನು ಕಟ್ಟಡದ ಮೇಲ್ಛಾವಣಿಗೆ ಏರಿಸಿ ಹಂಚು ರಿಪೇರಿ ಮಾಡಿಸಿದ್ದಾರೆ. ಇನ್ನು ಮಳೆಯಿಂದ ಮೇಲ್ಛಾವಣಿಯಲ್ಲಿ ಪಾಚಿ ಕಟ್ಟಿದ್ದು ,ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳು ಮೇಲಿನಿಂದ ಬೀಳುವ ಸಾಧ್ಯತೆಗಳಿತ್ತು.ಆದರೇ ಇವೆಲ್ಲವನ್ನೂ ನಿರ್ಲಕ್ಷ ಮಾಡಿ ಇಲ್ಲಿನ ಶಿಕ್ಷಕರು ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ,ಶಿಕ್ಷಣ ಇಲಾಖೆ ಇಲ್ಲಿನ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸೊಸೈಟಿ ಕಳ್ಳತನ ಪ್ರಕರಣ: ಆರೋಪಿತನಿಗೆ 2 ವರ್ಷ ಜೈಲು, ₹7 ಸಾವಿರ ದಂಡ.
ಕುಮಟಾ: ಕುಮಟಾ (kumta) ಹೊಸ ಬಸ್ ನಿಲ್ದಾಣದ ಸಮೀಪದ ಶ್ರೀ ಯಶೋಧರ ನಾಯ್ಕ ಕೋ-ಆಪರೇಟಿವ್ ಸೊಸೈಟಿಯ ಬೀಗ ಮುರಿದು ₹1,58,994 ಹಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:-Kumta | ಬಸ್ ಹತ್ತುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವು – ಇಬ್ಬರು ಆರೋಪಿಗಳ ಬಂಧನ
ದಾಂಡೇಲಿಯ ಸುಭಾಸನಗರ ನಿವಾಸಿ ಮುಜಫರ್ ಮಹಮ್ಮದ್ ಸಾಬ್ ಎಂಬಾತನು 2020ರ ಡಿಸೆಂಬರ್ 17ರಂದು ಮುಂಜಾನೆ ಸುಮಾರು 3.15ಕ್ಕೆ ಸೊಸೈಟಿಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಸಿಸಿ ಕ್ಯಾಮೆರಾ ಬಂದ್ ಮಾಡಿ ಅಲ್ಮಿರಾ ಹಾಗೂ ಲಾಕರ್ ಮುರಿದು ಹಣ ಕದ್ದಿದ್ದ. ಬಳಿಕ ಸಿಸಿ ಕ್ಯಾಮೆರಾದ ಡಿವಿಆರ್‌ನ್ನು ತೆಗೆದುಕೊಂಡು ಹೋಗಿ ಅಘನಾಶಿನಿ ಹೊಳೆಯಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದ ಎಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕುಮಟಾದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಶ್ರೀಮತಿ ವರ್ಷಶ್ರೀ ಅವರು ಆರೋಪಿತನನ್ನು ಭಾರತೀಯ ದಂಡ ಸಂಹಿತೆಯ ಕಲಂ 457, 380 ಮತ್ತು 201ರಡಿ ದೋಷಿ ಎಂದು ತೀರ್ಮಾನಿಸಿದ್ದಾರೆ.
ಕಲಂ 457ರಡಿ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹3,000 ದಂಡ, ಕಲಂ 380ರಡಿ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹3,000 ದಂಡ, ಮತ್ತು ಕಲಂ 201ರಡಿ 8 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹1,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಕ್ರಮವಾಗಿ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಗುಡ್ಡಿ ಭಾಗಶಃ ತನಿಖೆ ನಡೆಸಿದ್ದು, ಬಳಿಕ ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಗುನಗಾ ತನಿಖೆ ಮುಂದುವರಿಸಿದ್ದರು. ಶಿವಪ್ರಕಾಶ್ ಆರ್. ನಾಯ್ಕ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ಅಂತಿಮ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ ನಾಗಪ್ಪ ಪಟಗಾರ ಅವರು ವಾದ ಮಂಡಿಸಿದ್ದರು.
ಭಟ್ಕಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮೂವರು ಆರೋಪಿಗಳ ಬಂಧನ.
ಭಟ್ಕಳ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸಿ, 146 ಗ್ರಾಂ ಗಾಂಜಾ ಸೇರಿದಂತೆ ಒಟ್ಟು ಸುಮಾರು ₹80 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆ.30ರಂದು ಮಧ್ಯಾಹ್ನ 3.30ರ ಸುಮಾರಿಗೆ ಭಟ್ಕಳ ನಗರದ ಮುಗ್ಗುಂಕಾಲೋನಿ ಶಾಹೀನ್ ಗ್ರೌಂಡ್‌ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 146 ಗ್ರಾಂ ಗಾಂಜಾ (ಪ್ಲಾಸ್ಟಿಕ್ ಕವರ್ ಸಮೇತ) ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹10 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:-Bhatkal |ಭಾರಿ ಅಲೆಗೆ ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ.
ಬಂಧಿತರನ್ನು ಮೊಹಮ್ಮದ್ ಸಿಮ್ರಾನ್ (29), ಮೊಹಮ್ಮದ್ ಅಖೀಲ್ (25) ಹಾಗೂ ಮೊಹಮ್ಮದ್ ಇಮ್ರಾನ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಗಾಂಜಾವನ್ನು ಕಪ್ಪು ಬಣ್ಣದ ಕಾಲೇಜು ಬ್ಯಾಗ್‌ನಲ್ಲಿ ಇಟ್ಟುಕೊಂಡು, ಸಣ್ಣ ಜಿಪ್‌ಲೈನ್ ಕವರ್‌ನಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ವೇಳೆ ಗಾಂಜಾ ಸಾಗಾಟಕ್ಕೆ ಬಳಸಿದ್ದ ಹೀರೋ ಹೋಂಡಾ ಪ್ಯಾಷನ್ ಪ್ಲಸ್ ಬೈಕ್, ಹೋಂಡಾ SP125 ಬೈಕ್ ಹಾಗೂ ಸುಜುಕಿ ಹಯಾಬುಸಾ ಬೈಕ್ ಸೇರಿದಂತೆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು ₹80 ಸಾವಿರ ಎಂದು ತಿಳಿಸಲಾಗಿದೆ.
ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಗಿರೀಶ್ ಬಿ. ಅವರ ಮಾರ್ಗದರ್ಶನದಲ್ಲಿ, ಭಟ್ಕಳ ಶಹರ ಠಾಣೆ ಪೊಲೀಸ್ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದಲ್ಲಿ ಪಿಎಸ್‌ಐ (L&O) ನವೀನ್ ಎಸ್. ನಾಯ್ಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
Arecanut price | ರಾಜ್ಯದ ಪ್ರಮುಖ ಅಡಿಕೆ (arecanut)ಮಾರುಕಟ್ಟೆಯ ಇಂದಿನ ಅಡಿಕೆ ಧಾರಣ 31 ಆಗಷ್ಟ್ 2026.
