idagunji /ಕಾರವಾರ:- ನವರಾತ್ರಿಯ ಮೊದಲ ದಿನವೇ ರಾಜ್ಯದ ಪ್ರಸಿದ್ಧ ಇಡಗುಂಜಿ ಮಹಾಗಣಪತಿಯ ಪೂಜೆಗೆ ವಿಘ್ನ ಎದುರಾಗಿದೆ.ಹೊನ್ನಾವರ ತಾಲೂಕಿನ ಪ್ರಸಿದ್ಧ ಇಡುಗುಂಜಿ(Idaginji) ಮಹಾಗಣಪತಿ ದೇವಾಲಯದಲ್ಲಿ ಪೂಜಾ ಕಮಿಷನ್ ವಿವಾದ ತಾರಕಕ್ಕೆ ಏರಿದ್ದು ಪೂಜೆಯನ್ನೇ ಅರ್ಚಕರು ಬಹಿಷ್ಕರಿಸಿದ್ದಾರೆ.ಇದರಿಂದಾಗಿ ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಹೊರಗಡೆಯೇ ಹಣ್ಣು-ಕಾಯಿ ಸಮರ್ಪಿಸಿ, ಹೊರಗಿನಿಂದಲೇ ದೇವರ ದರ್ಶನ ಪಡೆದು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ದೇವರಿಗೆ ಪೂಜೆಯೇ ನಡೆಯದಂತಾಗಿದೆ. ಅರ್ಚಕರ ಈ ನಡೆಗೆ ಭಕ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:-Edagunji: ನ್ಯಾಯಾಧೀಶರೇ ಅಧ್ಯಕ್ಷರಾಗಿದ್ರೂ ಮಹಾಗಣಪತಿ ದೇವಸ್ಥಾನ ದಲ್ಲಿ ಪಂಕ್ತಿ ಬೇಧ?
ದೇವಾಲಯದ ಮೂಲ ಹಕ್ಕು ಹಾಗೂ ಪೂಜಾ ಆದಾಯದ ವಿಚಾರವಾಗಿ ಈ ಹಿಂದಿನಿಂದಲೂ ದೇವಾಲಯದ ಟ್ರಸ್ಟ್ ಮತ್ತು ಮೂರು ಅರ್ಚಕರ ಕುಟುಂಬಗಳ ನಡುವೆ ಕೋರ್ಟ ನಲ್ಲಿ ಧಾವೆ ನಡೆಯುತ್ತಿದೆ.ಈ ವಿವಾದದ ಹಿನ್ನೆಲೆಯಲ್ಲಿ ಹೈಕೋರ್ಟ ಆದೇಶದಂತೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರನ್ನು ರಿಸೀವರ್ ಆಗಿ ನೇಮಿಸಲಾಗಿತ್ತು. ದೇವಾಲಯದ ಪೂಜೆಯನ್ನು ಮೂರು ಅರ್ಚಕರ ಕುಟುಂಬಗಳು ಪಾಳಿಯ ಆಧಾರದ ಮೇಲೆ ನೆರವೇರಿಸುತ್ತಿವೆ.ಪ್ರಸ್ತುತ ಅರ್ಚಕ ಮಂಜುನಾಥ್ ಭಟ್ ಅವರ ಕುಟುಂಬದ ಪಾಳಿ ನಡೆಯುತ್ತಿದೆ.ಇದೇ ವೇಳೆ, ದೇವಾಲಯದ ಪೂಜಾ ಕಮಿಷನ್ ಹಣ ವಿಚಾರವಾಗಿ ನಾರಾಯಣ್ ಭಟ್ ಅವರ ಕುಟುಂಬ ಹೊನ್ನಾವರದ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು ನ್ಯಾಯಾಲಯದಲ್ಲಿ ತೀರ್ಪು ಹೊರಬರುವವರೆಗೆ ಪೂಜಾ ಕಮಿಷನ್ ಹಣವನ್ನು ಮಂಜುನಾಥ್ ಕುಟುಂಬಕ್ಕೆ ನೀಡದಂತೆ ಆಡಳಿತಾಧಿಕಾರಿಗೂ ಮನವಿ ಸಲ್ಲಿಸಲಾಗಿತ್ತು.Honnavar|ಬೋಟ್ ಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ಹಾನಿ
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಪೂಜಾ ಕಮಿಷನ್ ಹಣವನ್ನು ತಡೆಹಿಡಿಯಲಾಗಿತ್ತು.ಇದರಿಂದ ಅಸಮಾಧಾನಗೊಂಡ ಮಂಜುನಾಥ್ ಭಟ್ ಅವರು ನವರಾತ್ರಿಯ ಮೊದಲ ದಿನವಾದ ಇಂದು ಪೂಜೆಯನ್ನು ಬಹಿಷ್ಕರಿಸಿದ್ದಾರೆ.ಪೂಜೆ ಬಹಿಷ್ಕಾರದ ಜೊತೆಗೆ ಇತರ ಅರ್ಚಕರಿಗೂ ಪೂಜೆ ನೆರವೇರಿಸಲು ಅಡ್ಡಿಪಡಿಸಲಾಗಿದೆ.
ಅರ್ಚಕರ ನಡುವಿನ ಗಲಾಟೆ ಹಾಗೂ ಪೂಜಾ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಅವರು ಸ್ಥಳಕ್ಕೆ ತೆರಳುತ್ತಿದ್ದಾರೆ.ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ನಡೆದಿರುವ ಈ ಬೆಳವಣಿಗೆ ಭಕ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು ಅರ್ಚಕರ ನಡೆಗೆ ಭಕ್ತರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
