ಮನವಿ ಸ್ವೀಕರುಸಲೂ ಜಿಲ್ಲಾಧಿಕಾರಿ ನಿರ್ಲಕ್ಷ – ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು.
ಕಾರವಾರ :- ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ನಡೆಸಲಾದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯ ಗೇಟ್ ತಳ್ಳಿ ಒಳನುಗ್ಗಿದ ಘಟನೆ ನಡೆದಿದೆ.ಸ್ವತಹ ಜಿಲ್ಲಾಧಿಕಾರಿ ಮನವಿ ಸ್ವೀಕರಸಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಕಚೇರಿ ಆವರಣದಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಗರದ ಮಿತ್ರ ಸಮಾಜ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯ ಹೊರಭಾಗದ ಗೇಟ್ ತಲುಪುತ್ತಿದ್ದಂತೆ, ಡಿಸಿ ಅವರೇ ಖುದ್ದಾಗಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆದರೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರದಿದ್ದಾಗ ತಾಳ್ಮೆಗೆಟ್ಟ ಪ್ರತಿಭಟನಾಕಾರರು ಗೇಟ್ ತಳ್ಳಿ ಕಚೇರಿಯ ಮುಖ್ಯ ದ್ವಾರದತ್ತ ನುಗ್ಗಿದರು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪೊಲೀಸರ ತಡೆಯನ್ನೂ ಲೆಕ್ಕಿಸದೆ ಕಚೇರಿಯ ಪ್ರಮುಖ ದ್ವಾರದ ಬಳಿ ತಲುಪಿದ ಕಾರ್ಯಕರ್ತರು, ಆವರಣದಲ್ಲೇ ಕುಳಿತು ಅಹೋರಾತ್ರಿ ಧರಣಿಯ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಸಾರ್ವಜನಿಕರ ಹತ್ತಾರು ಜ್ವಲಂತ ಸಮಸ್ಯೆಗಳನ್ನು ಹೊತ್ತು ತಂದಿರುವ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬಳಿ ಬಂದು ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳಿಗೆ ಸಮಯವಿಲ್ಲವೇ? ಕನಿಷ್ಠ ಸೌಜನ್ಯವೂ ಇಲ್ಲದಂತೆ ನಡೆದುಕೊಳ್ಳುತ್ತಿರುವ ಜಿಲ್ಲಾಡಳಿತ ಸಂಪೂರ್ಣವಾಗಿ ಮರಗಟ್ಟಿದೆ, ಎಂದು ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ:-Karwar- ಗಾಂಜಾ ಮಾರಾಟ ಯತ್ನ -ಸದಾಶಿವ ಘಡದ ಇಬ್ಬರ ಬಂಧನ
ಕೆಲವು ಸಮಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿಗಳ ವಿರುದ್ಧ ಕಾರ್ಯಕರ್ತರು ಸತತವಾಗಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಅಂತಿಮವಾಗಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ತದನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
