Sagar | ಸರಣಿ ಬೋರ್‌ವೆಲ್ ಕೇಬಲ್ ವೈರ್ ಕಳ್ಳತನ ಭೀಮನೇರಿಯಲ್ಲಿ ಸಿಕ್ಕಿಬಿದ್ದ ಕಳ್ಳರು.

ಶಿವಮೊಗ್ಗ: ಸಾಗರ (sagar)ತಾಲೂಕಿನ ಭೀಮನೇರಿ ಗ್ರಾಮದಲ್ಲಿ ತೋಟಗಳ ಬೋರ್‌ವೆಲ್ ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಆರೋಪಗಳನ್ನು ಬಂಧಿಸಲಾಗಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಮನೇರಿ ಗ್ರಾಮದ ನಿವಾಸಿ ಕೃಷ್ಣಪ್ಪ ಬಿ. (90) ಎಂಬುವವರು ದಿನಾಂಕ 16-08-2026 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ತಮ್ಮ ಸರ್ವೆ ನಂಬರ್ 36 ರಲ್ಲಿರುವ ಅಡಿಕೆ ತೋಟಕ್ಕೆ ಔಷಧ ಸಿಂಪಡಿಸಲು ಡ್ರಮ್‌ಗಳಿಗೆ ನೀರು ತುಂಬಿಸಲು ಮೋಟಾರ್ ಆನ್ ಮಾಡಿದ್ದಾರೆ. ಮೋಟಾರ್ ಆನ್ ಆಗದ ಕಾರಣ ವಿದ್ಯುತ್ ಕೈಕೊಟ್ಟಿರಬಹುದು ಎಂದು ಕಾಯುತ್ತಿದ್ದಾಗ, ತೋಟದ ಬೇಲಿಯ ಬಳಿ ಬೋರ್‌ವೆಲ್ ಕೇಬಲ್ ಕಟ್ ಆಗಿ ಬಿದ್ದಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ:-Sagar| ಕಣಜದ ಹುಳು ದಾಳಿ: 8 ವರ್ಷದ ಬಾಲಕ ಸಾವು
ತಕ್ಷಣ ಅವರು ಪಕ್ಕದ ಅಣ್ಣಪ್ಪ ಎಂಬುವವರ ತೋಟದ ಕಡೆ ಪರಿಶೀಲಿಸಿದಾಗ, ಮೂವರು ಅಪರಿಚಿತರು ಅಲ್ಲಿಯೂ ಬೋರ್‌ವೆಲ್ ಕೇಬಲ್ ಕತ್ತರಿಸುತ್ತಿರುವುದು ಕಂಡುಬಂದಿದೆ. ಕೃಷ್ಣಪ್ಪನವರು ಜೋರಾಗಿ ಕೂಗಿಕೊಂಡಾಗ ಸ್ಥಳೀಯರು ಓಡಿ ಬಂದಿದ್ದು, ಆರೋಪಿಗಳು ಪ್ಲಾಂಟೇಶನ್ ಕಡೆ ಪರಾರಿಯಾಗಿದ್ದರು
ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದ ವೇಳೆ, ತೋಟದ ಬಳಿ KA-11-M-1288 ನೋಂದಣಿ ಸಂಖ್ಯೆಯ ಮಾರುತಿ ಓಮ್ನಿ ಕಾರು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ. ಕಾರನ್ನು ಪರಿಶೀಲಿಸಿದಾಗ ಅದರೊಳಗೆ ಕಳವು ಮಾಡಲಾಗಿದ್ದ ಬೋರ್‌ವೆಲ್ ಕೇಬಲ್, ಚೀಲಗಳು, ಕಟ್ಟಿಂಗ್ ಪ್ಲೈಯರ್ ಮತ್ತು ಮಹಿಳೆಯರ ಚಪ್ಪಲಿ ಪತ್ತೆಯಾಗಿವೆ. ಸ್ಥಳದಲ್ಲಿದ್ದ ಓಮ್ನಿ ಚಾಲಕ ನೇಹಾಲ್ ಎಂಬಾತನನ್ನು ಹಿಡಿದು ವಿಚಾರಣೆ ನಡೆಸಿದಾಗ ಕಳ್ಳತನದ ಜಾಲ ಬಯಲಾಗಿದೆ.
ಕಳವಾದ ಒಟ್ಟು ಬೋರ್‌ವೆಲ್ ಕೇಬಲ್‌ನ ಅಂದಾಜು ಮೌಲ್ಯ ₹25,000 ಎಂದು ಅಂದಾಜಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ಮೊಹಮ್ಮದ್ ಸದಾಕತ್ ಉಲ್ಲಾ (A1)ಅಯಾನ್ (ಜೆ1 – ಅಪ್ರಾಪ್ತ),ತೌಸೀಫ್ (A2),ನೇಹಾಲ್ (A3 – ಓಮ್ನಿ ಚಾಲಕ)ಈ ನಾಲ್ವರನ್ನು ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 303(2) ಅಡಿಯಲ್ಲಿ ಸಾಗರ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ ಇದೇ ಭಾಗದಲ್ಲಿ ನಡೆದಿದ್ದ ಇತರ ರೈತರ ಕೇಬಲ್ ಕಳ್ಳತನ ಪ್ರಕರಣಗಳಲ್ಲೂ ಇವರ ಕೈವಾಡವಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.







