Shivamogga | ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಬೃಹತ್ ರೆಂಬೆ; ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ.
Shivamogga: ಅಬ್ಬರದ ಮಳೆಯ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಮರದ ಬೃಹತ್ ರೆಂಬೆ ಬಿದ್ದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಸುಣ್ಣದಬಸ್ತಿ–ತಾರಿಗ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಶಿವಮೊಗ್ಗ ತಾಲೂಕಿನ ಚೊರಡಿ ಗ್ರಾಮದ ನಿವಾಸಿ ಸಂತೋಷ್ (27) ಎಂದು ಗುರುತಿಸಲಾಗಿದೆ. ಗಾಯಗೊಂಡವರು ವೀರಭದ್ರ (41) ಆಗಿದ್ದು, ಅವರಿಗೆ ಮೊದಲು ರಿಪ್ಪನಪೇಟೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ (shivamogga) ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:-Shivamogga|25 ಲಕ್ಷ ರೂ. ಲೋನ್ ಗಾಗಿ 3 ಲಕ್ಷ ರೂ. ಕಳೆದುಕೊಂಡ ಪೊಲೀಸ್ ಅಧಿಕಾರಿ!
ಸಂತೋಷ್ ಹಾಗೂ ವೀರಭದ್ರ ಅವರು ಮೀನು ಹಿಡಿಯಲು ತಾರಿಗ ಬಳಿಯ ಕೆರೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಲೆ ಹಾಗೂ ತೆಪ್ಪವನ್ನು ಕೊಂಡೊಯ್ಯುತ್ತಿದ್ದಾಗ ಏಕಾಏಕಿ ಮರದ ಬೃಹತ್ ರೆಂಬೆಯೊಂದು ಬೈಕ್ ಮೇಲೆ ಬಿದ್ದಿದೆ. ರೆಂಬೆ ಬಿದ್ದ ರಭಸಕ್ಕೆ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






