Sirsi | ಕಾಡುಕೋಣ ಬೇಟೆ ಓರ್ವನ ಬಂಧನ ನಾಲ್ವರು ಪರಾರಿ
ಕಾರವಾರ :-ಶಿರಸಿ (sirsi)ತಾಲೂಕಿನ ಹುಲೇಕಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡುಕೋಣವನ್ನು ಬೇಟೆಯಾಡಿದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಓರ್ವ ಆರೋಪಿಯನ್ನು ಬಂಧಿಸಿದ್ದು, ಪರಾರಿಯಾದ ಇತರ ನಾಲ್ವರಿಗಾಗಿ ತೀವ್ರ ಶೋಧ ನಡೆಸುತ್ತಿದೆ.
Karwar| ಈ ಶ್ವಾನದ ಮಾಲೀಕ ನಾನಲ್ಲ ! ಜಿಲ್ಲಾಧಿಕಾರಿ ಮೊರೆ ಹೋದ ಯುವಕ ! ಏನಿದು ಕತೆ?
ಸೋಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋದೆಪೇಟೆಯ ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಸಲೀಮ್ ಅಬ್ದುಲ್ ರಬ್ಬು ಸಾಬ್ (44) ಬಂಧಿತ ಆರೋಪಿ.
ಇದೇ ಗ್ರಾಮದ ಹಸನ್ ಮೌಲಾಲಿ ಬೆಣ್ಣೆಸಾಬ, ಹನ್ನಾನ ಅಬ್ದುಲ್ ರಬ್ಬುಸಾಬ , ಸಲಿಂ ಉಸ್ಮಾನಸಾಬ ಹಾಗೂ ಅಬ್ದುಲ್ ಕರಿಂ ಅಬ್ದುಲ್ ಸಲಾಂ ಸಾಬ್ ಪರಾರಿಯಾದ ಆರೋಪಿಗಳಾಗಿದ್ದು, ಇವರ ಪತ್ತೆಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಚುರುಕುಗೊಳಿಸಿದೆ.
ಮಠದೇವಳ ಗ್ರಾಮದ ಅರಣ್ಯದಲ್ಲಿ ಕಾಡುಕೋಣವನ್ನು ಬೇಟೆಯಾಡಿದ್ದಾರೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಸ್ಥಳದ ಮೇಲೆ ದಾಳಿ ನಡೆಸಿದೆ. ಈ ವೇಳೆ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಸ್ಥಳದಿಂದ ಕಾಡುಕೋಣದ ಮಾಂಸದ ಅವಶೇಷಗಳು, ಪ್ಲಾಸ್ಟಿಕ್ ಚೀಲ ಹಾಗೂ ಕೃತ್ಯಕ್ಕೆ ಬಳಸಿದ್ದ ಹೆಡ್ ಬ್ಯಾಟರಿ ಬೆಲ್ಟ್‌ಗಳನ್ನುಇಲಾಖೆ ಜಪ್ತಿ ಮಾಡಿಕೊಂಡಿದೆ.
ವಶಪಡಿಸಿಕೊಂಡ ಕಾಡುಕೋಣದ ಅವಶೇಷಗಳ ಮಾದರಿಗಳನ್ನು ಶಿರಸಿಯ ಪಶು ವೈದ್ಯಾಧಿಕಾರಿಗಳಾದ ಡಾ. ಪ್ರಶಾಂತ್ ಕೆ.ವಿ ಹಾಗೂ ವಿಧಿ ವಿಜ್ಞಾನ ತಜ್ಞರಾದ ಮಧುಸೂಧನ ಅವರ ಅಭಿಪ್ರಾಯದ ಮೇರೆಗೆ ಹೆಚ್ಚಿನ ತಪಾಸಣೆಗಾಗಿ ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲೇಕಲ್ ವಲಯದಲ್ಲಿ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಠಿಣ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಶಿರಸಿ (sirsi) ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಹಾಗೂ ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಸಿ.ಎನ್. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹುಲೇಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ಎಸ್. ನಿಂಗಾಣಿ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಶರತ್ ಐಹೊಳೆ, ಗಸ್ತು ಅರಣ್ಯ ಪಾಲಕ ಪ್ರಮೋದ ನಾರಾಯಣ ನಾಯ್ಕ ಹಾಗೂ ಇಲಾಖೆಯ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.






