ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ನಿಧನ

ಮೈಸೂರು: ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನದಿಂದ ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕುಟುಂಬ ಮೂಲಗಳ ಪ್ರಕಾರ, ಮಗನ ನಿಧನದ ಬಳಿಕ ಅವರು ಮೈಸೂರಿನ ಬೋಗಾದಿ ಪ್ರದೇಶದಲ್ಲಿ ಆಪ್ತರ ನಿವಾಸದಲ್ಲಿ ವಾಸಿಸುತ್ತಿದ್ದರು.

ಭಾರತೀಯ ಚಿತ್ರರಂಗದಲ್ಲಿ “ಜಾನಕಮ್ಮ” ಎಂದೇ ಅಭಿಮಾನಿಗಳ ಮನಸ್ಸು ಗೆದ್ದಿದ್ದ ಎಸ್. ಜಾನಕಿ ಅವರು ಹಲವು ದಶಕಗಳ ಕಾಲ ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಸಂಗೀತಾಸಕ್ತರನ್ನು ರಂಜಿಸಿದರು. ಮಧುರ ಕಂಠ, ಭಾವಪೂರ್ಣ ಗಾಯನ ಹಾಗೂ ಯಾವುದೇ ರೀತಿಯ ಹಾಡನ್ನು ಸಮರ್ಥವಾಗಿ ಹಾಡುವ ಸಾಮರ್ಥ್ಯದಿಂದ ಅವರು ದೇಶದ ಪ್ರಮುಖ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.
ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿರುವ ಎಸ್. ಜಾನಕಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಗಾಯನ ಮಾಡಿದ್ದಾರೆ. ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅವರು ಹಾಡಿದ ಅನೇಕ ಹಾಡುಗಳು ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಇತ್ತು. ಔಪಚಾರಿಕ ಸಂಗೀತ ಶಿಕ್ಷಣವಿಲ್ಲದಿದ್ದರೂ ತಮ್ಮ ಸಹಜ ಪ್ರತಿಭೆ, ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಮೂಲಕ ಅವರು ದೇಶದ ಶ್ರೇಷ್ಠ ಹಿನ್ನೆಲೆ ಗಾಯಕಿಯರ ಸಾಲಿನಲ್ಲಿ ಸ್ಥಾನ ಪಡೆದರು.
ಸಂಗೀತ ಕ್ಷೇತ್ರದಲ್ಲಿ ಅವಕಾಶ ಅರಸಿ ಚೆನ್ನೈಗೆ ತೆರಳಿದ ಅವರು ಎವಿಎಂ ಸ್ಟುಡಿಯೋ ಮೂಲಕ ಗಾಯನ ಜೀವನ ಆರಂಭಿಸಿದರು. ಬಳಿಕ 1950ರ ದಶಕದ ಕೊನೆಯಲ್ಲಿ ಕನ್ನಡ ಚಿತ್ರರಂಗದಲ್ಲೂ ತಮ್ಮ ಗಾಯನ ಪಯಣ ಆರಂಭಿಸಿ, ದಕ್ಷಿಣ ಭಾರತದ ಪ್ರಮುಖ ಭಾಷೆಗಳ ಚಿತ್ರರಂಗದಲ್ಲಿ ಅಗ್ರಗಣ್ಯ ಗಾಯಕರಾಗಿ ಗುರುತಿಸಿಕೊಂಡರು.
ಇದನ್ನೂ ಓದಿ:-Mysore:ಸಚಿವ ಮಹಾದೇವಪ್ಪ ಹೆಸರಿನಲ್ಲಿ ವಂಚನೆ! ಬೀದಿಗಿಳಿದ ವಂಚಿತರು!
ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ, ಪ್ರೇಮಗೀತೆ, ಮಕ್ಕಳ ಧ್ವನಿ ಸೇರಿದಂತೆ ವಿವಿಧ ಶೈಲಿಯ ಹಾಡುಗಳಿಗೆ ತಮ್ಮ ಕಂಠವನ್ನು ಹೊಂದಿಸಿಕೊಳ್ಳುವ ಅಪರೂಪದ ಪ್ರತಿಭೆ ಅವರದ್ದಾಗಿತ್ತು. ಅದೇ ಕಾರಣಕ್ಕೆ ಹಲವು ತಲೆಮಾರಿನ ಸಂಗೀತ ನಿರ್ದೇಶಕರು ಹಾಗೂ ಗಾಯಕರೊಂದಿಗೆ ಅವರು ಕೆಲಸ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ರಾಜನ್-ನಾಗೇಂದ್ರ, ಉಪೇಂದ್ರಕುಮಾರ್, ಇಳಯರಾಜ, ಹಂಸಲೇಖ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರ ಸಂಗೀತ ನಿರ್ದೇಶನದಲ್ಲಿ ಅವರು ಅನೇಕ ಮರೆಯಲಾಗದ ಹಾಡುಗಳನ್ನು ನೀಡಿದ್ದಾರೆ. ಡಾ. ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್ ಸೇರಿದಂತೆ ಹಲವಾರು ಖ್ಯಾತ ಗಾಯಕರೊಂದಿಗೆ ಹಾಡಿದ ಯುಗಲಗೀತೆಗಳು ಇಂದಿಗೂ ಸಂಗೀತ ಪ್ರಿಯರ ಮೆಚ್ಚಿನ ಹಾಡುಗಳಾಗಿವೆ.
ಇದನ್ನೂ ಓದಿ:-Karwar |ಕಾಳಿ ಬ್ರಿಡ್ಜ್ ಬಳಿ ಕಾರ್ಮಿಕರ ಟೆಂಟ್ ಗೆ ಬೆಂಕಿ -ತಪ್ಪಿದ ಅನಾಹುತ-ವಿಡಿಯೋ ನೋಡಿ
ತಮ್ಮ ದೀರ್ಘ ಸಂಗೀತ ಸೇವೆಗೆ ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ವಿವಿಧ ರಾಜ್ಯ ಸರ್ಕಾರಗಳ ಅನೇಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಅವರ ಗಾಯನ ಪರಂಪರೆ ಭಾರತೀಯ ಸಂಗೀತ ಲೋಕದಲ್ಲಿ ಸದಾ ಚಿರಸ್ಥಾಯಿಯಾಗಿರಲಿದೆ.







