
Uttara kannada|ಲೋಕಲ್ ನ್ಯೂಸ್ -ಎಲ್ಲಿ ಏನಾಗಿದೆ?.
Uttarakannada:-ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಏನೆಲ್ಲಾ ಘಟನೆ ನಡೆಯಿತು.ಅದರ ಪ್ರಮುಖ ಸುದ್ದಿಗಳು ಇಲ್ಲಿವೆ.
ಕುಮಟಾದ ಆಟೋಮೋಟಿವ್ ಪೇಂಟ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ.

ಕುಮಟಾ(kumta) ತಾಲೂಕಿನ ಅಳ್ವೆಕೋಡಿಯ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲಿರುವ ರಾಯಲ್ ಆಟೋಮೋಟಿವ್ ಪೇಂಟ್ ಅಂಗಡಿಯಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಪೇಂಟ್, ಯಂತ್ರೋಪಕರಣಗಳು ಹಾಗೂ ಇತರೆ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಅಳ್ವೆಕೋಡಿಯ ನಿವಾಸಿ ವಿನಾಯಕ ಶಿವಾನಂದ ನಾಯ್ಕ ಅವರಿಗೆ ಸೇರಿದ ರಾಯಲ್ ಆಟೋಮೋಟಿವ್ ಪೇಂಟ್ ಅಂಗಡಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಪೇಂಟ್ ಡಬ್ಬಗಳಿಗೆ ಬೆಂಕಿ ವ್ಯಾಪಿಸಿದ್ದರಿಂದ ಅಂಗಡಿಯಲ್ಲಿದ್ದ ಲ್ಯಾಪ್ಟಾಪ್, ಯುಪಿಎಸ್, ಮಿಕ್ಸಿಂಗ್ ಗ್ಯಾಲರಿ, ಮಿಕ್ಸಿಂಗ್ ಯಂತ್ರ, ಸ್ಪೆಕ್ಟ್ರೋಮೀಟರ್ ಸೇರಿದಂತೆ ಹಲವು ಉಪಕರಣಗಳು ಸುಟ್ಟು ನಾಶವಾಗಿವೆ. ಘಟನೆಯಲ್ಲಿ ಸುಮಾರು ₹25 ರಿಂದ ₹30 ಲಕ್ಷ ಮೌಲ್ಯದ ಪೇಂಟ್ ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ನಂದಿಸಲು ಯತ್ನಿಸಿದ ವೇಳೆ ಅಂಗಡಿ ಮಾಲೀಕ ವಿನಾಯಕ ನಾಯ್ಕ ಅವರ ಕೈಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ಬೆಂಕಿ ಪಕ್ಕದಲ್ಲಿದ್ದ ಫ್ಲೈವುಡ್ ಅಂಗಡಿಗೂ ವ್ಯಾಪಿಸಿದ್ದು, ಪ್ರಕಾಶ ಮಾಧವ ಶಾನಭಾಗ ಅವರ ಸಹೋದರನಿಗೆ ಸೇರಿದ ಅಂಗಡಿಯಲ್ಲಿದ್ದ ಕಂಪ್ಯೂಟರ್, ಸಿಸಿಟಿವಿ ವ್ಯವಸ್ಥೆ, ಪ್ರಿಂಟರ್ ಹಾಗೂ ಯುಪಿಎಸ್ಗೆ ಹಾನಿಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಮಟಾ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಗಜಾನನ ವಿ. ನಾಯ್ಕ, ಪ್ರಮುಖ ಅಗ್ನಿಶಾಮಕ ರಾಜೇಶ್ ಮಡಿವಾಳ, ಅಗ್ನಿಶಾಮಕ ಸಿಬ್ಬಂದಿಗಳಾದ ಚಂದ್ರಶೇಖರ ವಿ. ಗೌಡ, ಗುರುನಾಥ ನಾಯ್ಕ, ಮಹೇಶ್ ಶೆಟ್ಟಿ, ನಾಗರಾಜ ನಾಯ್ಕ, ಚಾಲಕ ಶಿವರಾಜ ಕೆ.ಆರ್. ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮ ಗುಂಡಿಗಳು- ಗಿಡ ನೆಟ್ಟು ಅಕ್ರೋಶ

ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಸರಳೆಬೈಲಿನ ಅಗಸೂರು ಬಳಿ ಹೆದ್ದಾರಿ ತೀರಾ ಹದಗೆಟ್ಟ ಹಿನ್ನಲೆಯಲ್ಲಿ ಗ್ರಾಮದ ಜನ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಬೃಹತ್ ಹೊಂಡಗಳಿಗೆ ಗಿಡ ನಡುವ ಮೂಲಕ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷದಿಂದ ಅಂಕೋಲ- ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ದೊಡ್ಡ ದೊಡ್ಡ ಹೊಂಡಗಳಿಂದ ಅಪಘಾತಗಳು ಆಗುತಿದ್ದು ,ಹಲವರು ಸಾವನ್ನಪ್ಪಿದ್ದಾರೆ.ಆದರೇ ಹೆದ್ದಾರಿ ಪ್ರಾಧಿಕಾರ ಮಾತ್ರ ಕಣ್ಮುಚ್ಚಿ ಕುಳಿತಿದ್ದು ಕೊನೆ ಪಕ್ಷ ಹೊಂಡ ಮುಚ್ಚುವ ಕಾರ್ಯವನ್ನು ಸಹ ಮಾಡದೇ ಅಪಘಾತಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಈ ಧೋರಣೆ ಖಂಡಿಸಿ ಗ್ರಾಮದ ಜನ ಹೊಂಡದಲ್ಲಿ ಗಿಡ ನೆಟ್ಟು ತಮ್ಮ ಅಕ್ರೋಶ ಹೊರಹಾಕಿದ್ದಾರೆ.
ಭಟ್ಕಳದಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ.
ಭಟ್ಕಳ (bhatkal) ತಾಲೂಕಿನ ಶ್ರೀ ಮಾರಿ ಜಾತ್ರೆಯ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಾಲೂಕು ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:-Bhatkal| ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ವಂಚನೆ
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಆದೇಶದಂತೆ, ಆಗಸ್ಟ್ 5ರ ಬೆಳಿಗ್ಗೆ 5 ಗಂಟೆಯಿಂದ ಆಗಸ್ಟ್ 6ರ ಮಧ್ಯರಾತ್ರಿ 12 ಗಂಟೆಯವರೆಗೆ ಭಟ್ಕಳ ತಾಲೂಕಿನಾದ್ಯಂತ ಎಲ್ಲಾ ರೀತಿಯ ಮದ್ಯದ ಅಂಗಡಿಗಳು, ವೈನ್ ಶಾಪ್ಗಳು ಹಾಗೂ ಬಾರ್ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.
ಈ ಅವಧಿಯಲ್ಲಿ ಭಟ್ಕಳ ತಾಲೂಕಿನಲ್ಲಿ ಮದ್ಯದ ಸಾಗಾಟ ಹಾಗೂ ಮಾರಾಟಕ್ಕೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆಗೆ ಅವಕಾಶ: ವಾಹನ ಮಾಲೀಕರಿಗೆ ₹25 ಸಾವಿರ ದಂಡ
ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ಕಲ್ಪಿಸಿದ್ದ ಪ್ರಕರಣದಲ್ಲಿ ವಾಹನದ ಮಾಲೀಕರಿಗೆ ₹25,000 ದಂಡ ವಿಧಿಸಲಾಗಿದೆ.
ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನೀರಗದ್ದೆ ಬೈಲೂರ ನಿವಾಸಿ ಸುಬ್ರಾಯ ಬಡಕಯ್ಯ ನಾಯ್ಕ್ ಎಂಬುವವರು ತಮ್ಮ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ನೀಡಿದ್ದರು.
ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ಅವರು ಮೋಟಾರು ವಾಹನ ಕಾಯ್ದೆಯ ಕಲಂ 5 ಹಾಗೂ 199(ಎ) ಅಡಿಯಲ್ಲಿ ವಾಹನ ಮಾಲೀಕರ ವಿರುದ್ಧ ದೋಷಾರೋಪಣಾ ಪತ್ರವನ್ನು ಭಟ್ಕಳದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನದ ಮಾಲೀಕ ಸುಬ್ರಾಯ ಬಡಕಯ್ಯ ನಾಯ್ಕ್ ಅವರಿಗೆ ₹25,000 ದಂಡ ವಿಧಿಸಿ ಆದೇಶಿಸಿದೆ.
33 ಕೆಜಿ ಶ್ರೀಗಂಧ ಜಪ್ತಿ: ಓರ್ವ ಸೆರೆ,ಇನ್ನೋರ್ವ ಪರಾರಿ

ಶಿರಸಿ ತಾಲೂಕಿನ ಕಾನಗೋಡ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಕೆತ್ತನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ದಾಳಿ ನಡೆಸಿ, 33.390 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.
ಬಂಧಿತ ಆರೋಪಿಯನ್ನು ಕಾನಗೋಡ ಗ್ರಾಮದ ಜನತಾ ಕಾಲೋನಿಯ ನಿವಾಸಿ ದಯಾನಂದ ನಾರಾಯಣ ನಾಯ್ಕ (48) ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಮಶಿಗದ್ದೆ ಗ್ರಾಮದ ಮಂಜುನಾಥ ಅಣ್ಣಪ್ಪ ದೇವಾಡಿಗ (47) ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.
ಎಲ್ಪಿಜಿಇ-ಕೆವೈಸಿಗೆ ಆಗಸ್ಟ್ 15 ಕೊನೆಯ ದಿನ.
ಕಾರವಾರ: ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹಾಗೂ ಇತರೆ ತೈಲ ಕಂಪನಿಗಳ ನಿರ್ದೇಶನದಂತೆ, ಇನ್ನೂ ಇ-ಕೆವೈಸಿ (e-KYC) ಪೂರ್ಣಗೊಳಿಸದ ಎಲ್ಲಾ ಎಲ್ಪಿಜಿ ಗ್ರಾಹಕರು ಆಗಸ್ಟ್ 15ರೊಳಗೆ ಕಡ್ಡಾಯವಾಗಿ ತಮ್ಮ ಗ್ಯಾಸ್ ಸಂಪರ್ಕದ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಾರವಾರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೆನಿನ್ ರಸ್ತೆಯಲ್ಲಿ ಅಗ್ನಿ ಅವಘಡ: ದಗದಗನೆ ಹೊತ್ತಿ ಉರಿದ ಅರ್ಪಿತ ಟಿಫಿನ್ ಕಾರ್ನರ್
ದಾಂಡೇಲಿ (dandeli)ನಗರದ ಲೆನಿನ್ ರಸ್ತೆಯಲ್ಲಿರುವ ಅರ್ಪಿತ ಟಿಫಿನ್ ಕಾರ್ನರ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ದಗದಗನೆ ಹೊತ್ತಿ ಉರಿದ ಘಟನೆ ಸೋಮವಾರ ನಸುಕಿನ ವೇಳೆ ನಡೆದಿದೆ.
ಇದನ್ನೂ ಓದಿ:-Dandeli | ಜಿಪ್ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಮಾಹಿತಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.
ಈ ಅವಘಡದಲ್ಲಿ ಅರ್ಪಿತ ಟಿಫಿನ್ ಕಾರ್ನರ್ ಅಂಗಡಿಯ ಸಂಪೂರ್ಣ ಸಾಮಗ್ರಿಗಳು ಹೊತ್ತಿ ಉರಿದಿವೆ. ಅಂಗಡಿಯಲ್ಲಿದ್ದ ಎಲ್ಲಾ ಪರಿಕರಗಳು ಸುಟ್ಟು ಬೂದಿಯಾಗಿವೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್, ಎಎಸ್ಐ ರಾಜಪ್ಪ ದೊಡ್ಮನಿ, ಪೊಲೀಸ್ ಸಿಬ್ಬಂದಿಗಳಾದ ಮಹಾದೇವ ಬಳೇಗಾರ, ದಯಾನಂದ ಲೋಂಡಿ, ಸುನೀಲ್ ದುಗ್ಗಾಡೆ, ಚಂದ್ರಶೇಖರ ಪಾಟೀಲ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಸ್ಥಳದಲ್ಲಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಸಹಕರಿಸಿದರು.
ಸ್ಥಳಕ್ಕೆ ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ, ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಜೊತೆ ಸೋಮವಾರ ತೆರಳಿ, ಸ್ಥಳ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ್ದ ಸಮಯದಲ್ಲಿ ಅಂಗಡಿಯ ಒಂದು ಬದಿಯ ಬಾಗಿಲು ತೆರೆದಿತ್ತು ಎಂದು ಹೇಳಲಾಗುತ್ತಿದ್ದು, ಇದು ಆಕಸ್ಮಿಕವಾಗಿ ನಡೆದ ಅವಘಡವೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ನದಿ ಜೋಡಣೆ-ಕಾಗೇರಿ ಮನವಿ

ಪ್ರಸ್ತಾಪಿತ ಬೇಡ್ತಿ-ಹಿರೆವದ್ದತ್ತಿ ನದಿ ಜೋಡಣೆ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರವು ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಯೋಜನೆಯ ಕುರಿತು ಸುದೀರ್ಘವಾಗಿ ಸಂಸದ ಕಾಗೇರಿ ಚರ್ಚಿಸಿದರು.
”ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಗೆ ಡಿಪಿಆರ್ (DPR) ಮಾಡಲು ಒಪ್ಪಿಗೆ ನೀಡಿರುವುದು ಸರಿಯಾದ ಕ್ರಮವಲ್ಲ. ಪಶ್ಚಿಮ ಘಟ್ಟಗಳ ಅತ್ಯಂತ ಸೂಕ್ಷ್ಮ ಪರಿಸರ ವಲಯದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ‘ಧಾರಣ ಸಾಮರ್ಥ್ಯ’ವನ್ನು (Carrying Capacity) ಸಂಪೂರ್ಣವಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ನಂತರವೇ ಇಂತಹ ಯೋಜನೆಗಳ ಕುರಿತು ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕು. ಜಿಲ್ಲೆಯ ಪರಿಸರ ಮತ್ತು ಧಾರಣ ಸಾಮರ್ಥ್ಯದ ಅಧ್ಯಯನವಾಗದೇ ಯೋಜನೆಯನ್ನು ಮುಂದುವರಿಸುವುದು ತೀವ್ರ ಆತಂಕಕಾರಿ ವಿಷಯವಾಗಿದೆ. ಆದ್ದರಿಂದ ಪ್ರಸ್ತುತ ಪ್ರಾರಂಭವಾಗಿರುವ ಡಿಪಿಆರ್ ತಯಾರಿಕೆ ಸೇರಿದಂತೆ ಈ ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ತಡೆಹಿಡಿಯಬೇಕು,” ಎಂದು ಸಚಿವರಿಗೆ ಮನವಿ ಪತ್ರ ನೀಡಿದರು.
ಉತ್ತರ ಕನ್ನಡ -ಬರ ಮತ್ತು ಪ್ರವಾಹ ಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ನಿರ್ದೇಶನ
ರಾಜ್ಯದ ಬರ ಹಾಗೂ ಅತಿವೃಷ್ಟಿ ಹಾನಿಯಿಂದ ಆದ ಸಮಸ್ಯೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಚಿವರುಗಳಿಗೆ ನಿರ್ದೇಶನ ನೀಡಲಾಗಿದೆ.
ಇದರ ಪಟ್ಟಿ ಇಲ್ಲಿದೆ:-









