Uttara kannada | ಕಸಕ್ಕೂ ಇಲ್ಲಿ ದೈವಾ ಸ್ಥಾನ-ಕಸವನ್ನೆಲ್ಲಾ ದೈವಕ್ಕೆ ಅರ್ಪಿಸುವ ಗ್ರಾಮಸ್ತರು ಏನಿದರ ವಿಶೇಷ ಇಲ್ಲಿದೆ ನೋಡಿ
ಕಾರವಾರ :- ಗರಿಕೆ ಹುಲ್ಲು, ಗೋಮಯದಲ್ಲಿ ದೇವರನ್ನು ಕಾಣುವ ವಿಶಿಷ್ಟ ಸಂಪ್ರದಾಯ ಹಿಂದೂ ಧರ್ಮದಲ್ಲಿ ಪಂಚಭೂತಗಳಿಗೆ ವಿಶೇಷ ಸ್ಥಾನಮಾನಗಳಿವೆ. ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಗಳಿಗೆ ಒಂದೊಂದು ಕಾರಣ ಇರುತ್ತದೆ.ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ,ಭಟ್ಕಳ ಸೇರಿದಂತೆ ಹಲವು ಭಾಹದಲ್ಲಿ ತಮ್ಮೂರಿನ ಕಸಗಳಿಗೂ ದೈವ ಸ್ಥಾನ ನೀಡಿ ಪೂಜಿಸಿ ಊರಿನಿಂದ ಹೊರದಬ್ಬುತ್ತಾರೆ. ಇದನ್ನೂ ಓದಿ:-Honnavar| ಶಾಲೆಯಲ್ಲಿ ಮಕ್ಕಳಿಗೆ ಶೌಚಕ್ಕೂ ಅವ್ಯವಸ್ಥೆ – ಬಾವಿಯಿಂದ ನೀರು ಸೇದಿ ಬಕೇಟ್ ಹೊತ್ತು ಹೋಗುವ ಪುಟ್ಟ ಮಕ್ಕಳು!
ಹೌದು ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಇರುವ ದೇವಾಲಯವೊಂದರ ಬಳಿ ಈ ವಿಶಿಷ್ಟ ಆಚರಣೆ ನಡೆಯಿತು.
ಕರ್ಕಿಯ ಸುತ್ತಮುತ್ತಲ ಗ್ರಾಮದ ಜನ ತಮ್ಮೂರಿನ ಕಸ, ಹಳೆಯವಸ್ತುಗಳನ್ನ ಸ್ವಚ್ಛಗೊಳಿಸಿ, ಒಂದುಗೂಡಿಸಿ ಊರಿನಿಂದ ಹೊರಗೆ ತಂದು ಈ ಊರಿನ ಸಂಚಾರಿ ದೇವತೆಯಾದ ವಡಗಲಜ್ಜಿ ಗೆ ಹರಕೆಯಾಗಿ ಅರ್ಪಿಸುವ ಮೂಲಕ ಈ ವಿಭಿನ್ನ ಸಂಪ್ರದಾಯವನ್ನು ಆಚರಿಸಿದ್ದಾರೆ.

ಗಾಂಧಿ ಜಯಂತಿ ನಿಮಿತ್ತ ಜಿಲ್ಲೆಯ ಕರಾವಳಿ ತೀರ ಪ್ರದೇಶ ಸೇರಿದಂತೆ ಹಲವು ಕಡೆ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇದರ ಮಧ್ಯೆ ಹಿಂದಿನಿಂದಲೂ ಊರಿನ ಸ್ಪಚ್ಛತೆ ಅಭಿಯಾನವನ್ನ ಧಾರ್ಮಿಕ ಕಾರ್ಯದ ರೀತಿ ಆಚರಿಸಿಕೊಂಡು ಬರುತ್ತಿದ್ದು, ರೋಗ-ರುಜಿನಗಳು ಹರಡದಂತೆ ಮನೆಗಳನ್ನು ಸ್ವಚ್ಛಗೊಳಿಸಿ, ವರ್ಷಗಳಿಂದ ಬಳಕೆಯಾಗದೆ ಬಿದ್ದಿರುವ ವಸ್ತುಗಳನ್ನು ಹೊರಹಾಕುವ ಸಂಪ್ರದಾಯ ಇಲ್ಲಿನ ಜನಜೀವನದ ಭಾಗವಾಗಿದೆ.
ಹೊನ್ನಾವರದ ಕರ್ಕಿಯ ಹೆದ್ದಾರಿಯ ಪಕ್ಕದಲ್ಲಿ ವಡಗಲಜ್ಜಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸಿದರು.
ಮಹಿಳೆಯರು ಕುಂಕುಮ, ಅರಿಶಿನ ಹಚ್ಚಿಕೊಂಡು, ಹಸಿರು ಬಳೆಗಳನ್ನು ಧರಿಸಿ, ಸೀರೆ, ತೆಂಗಿನಕಾಯಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ದೇವಿಗೆ ಅರ್ಪಿಸಿದರು.
ಹಲವು ಬಗೆಯ ಅಡುಗೆ ಪದಾರ್ಥಗಳನ್ನೂ ನೈವೇದ್ಯವಾಗಿ ನೀಡಲಾಯಿತು. ಕೋಳಿ ಹಾಗೂ ಉಪ್ಪನ್ನೂ ಅರ್ಪಿಸಲಾಯಿತು. ಇದರ ಜತೆಗೆ ಮನೆಗಳಲ್ಲಿ ಬಳಕೆಯಾಗದೆ ಉಳಿದಿದ್ದ ವಸ್ತುಗಳು, ಹಳೆಯ ಬಟ್ಟೆಗಳು, ಚೀಲಗಳು ಸೇರಿದಂತೆ ದೊಡ್ಡ ಪ್ರಮಾಣದ ತ್ಯಾಜ್ಯವನ್ನೂ ದೇವಿಯ ಮುಂದೆ ರಾಶಿ ಹಾಕಲಾಯಿತು.

ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಚರಿಸುವವರಿಗೆ ಇಂತಹ ವಸ್ತುಗಳ ರಾಶಿ ಕಂಡರೆ, ಯಾರೋ ರಸ್ತೆ ಬದಿಯಲ್ಲಿ ಕಸ ಎಸೆದಿದ್ದಾರೆ ಎಂದು ಭಾಸವಾಗಬಹುದು. ಆದರೆ, ಅದರ ಹಿಂದೆ ಶತಮಾನಗಳ ನಂಬಿಕೆ ಮತ್ತು ವಿಶಿಷ್ಟ ಆಚರಣೆ ಕೂಡ ಅಡಗಿದೆ.ತ್ಯಾಜ್ಯ ತೆಗೆದುಕೊಂಡು ರೋಗವನ್ನೂ ಕೊಂಡೊಯ್ಯುತ್ತಾಳೆ’ ಎಂಬ ನಂಬಿಕೆ ವಡಗಲಜ್ಜಿ ಊರಿನಿಂದ ಊರಿಗೆ ಸಂಚರಿಸುವಾಗ ಜನರು ಮನೆಗಳಿಂದ ಹೊರತೆಗೆದ ತ್ಯಾಜ್ಯ ಹಾಗೂ ಬಳಕೆಯಾಗದ ವಸ್ತುಗಳನ್ನು ಸ್ವೀಕರಿಸುತ್ತಾಳೆ. ಆ ವಸ್ತುಗಳೊಂದಿಗೆ ರೋಗ-ರುಜಿನಗಳನ್ನೂ ಊರಿನಿಂದ ದೂರ ಕೊಂಡೊಯ್ಯುತ್ತಾಳೆ ಎಂಬ ನಂಬಿಕೆ ಇಲ್ಲಿದೆ.
ಇದನ್ನೂ ಓದಿ:-Uttara kannada | LPG ಇಂಧನ ಕೊರತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 90 ಕೋಟಿಗೂ ಹೆಚ್ಚು ಕಟ್ಟಿಗೆ ವಹಿವಾಟು ನಡೆಸಿದ ಅರಣ್ಯ ಇಲಾಖೆ
ಉತ್ತರ ಕನ್ನಡದ ಸ್ಥಳೀಯ ಕನ್ನಡ ಭಾಷಾ ಬಳಕೆಯಲ್ಲಿ ‘ವಡಗು’ ಎಂದರೆ ಗುಡಿಸುವುದು ಎಂಬ ಅರ್ಥವಿದೆ. ಹೀಗಾಗಿ ಮನೆ ಹಾಗೂ ಪರಿಸರವನ್ನು ಗುಡಿಸಿ ಸ್ವಚ್ಛಗೊಳಿಸುವ ಈ ಆಚರಣೆಯೊಂದಿಗೆ ದೇವಿಯ ಹೆಸರೂ ಬೆಸೆದುಕೊಂಡಿದೆ. ಇದಲ್ಲದೇ ಗಡಿಯಿಂದ ಗಡಿಗೆ ದಾಟುವ ವಡಗಲಜ್ಜಿ ಕೊನೆಗೆ ಶಿರಸಿಯ ಗಡಿ ದಾಟಿ ಮಾರಿಕಾಂಬೆಯ ಬಳಿ ಸೇರುತ್ತಾಳೆ ಎಂಬುದು ಜನರ ನಂಬಿಕೆ.
ನಂಬಿಕೆಯ ಹಿಂದೆ ಆರೋಗ್ಯದ ಕಾಳಜಿ?
ಈ ಸಂಪ್ರದಾಯಕ್ಕೆ ಧಾರ್ಮಿಕ ನಂಬಿಕೆಯ ಜತೆಗೆ ಪ್ರಾಯೋಗಿಕ ಕಾರಣವೂ ಇರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.ಮನೆಗಳಲ್ಲಿ ವರ್ಷಗಟ್ಟಲೆ ಬಳಕೆಯಾಗದೆ ಬಿದ್ದಿರುವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಹಳೆಯ ಹಾಗೂ ಹಾಳಾದ ವಸ್ತುಗಳನ್ನು ಹೊರಹಾಕುವ ಮೂಲಕ ಪರಿಸರವನ್ನು ಶುಚಿಯಾಗಿಡುವ ಪದ್ಧತಿ ಬೆಳೆದಿರಬಹುದು ಎಂಬುದು ಹಿರಿಯರ ಮಾತು.
ಹಳೆಯ ಪೊರಕೆಯಿಂದ ಎಲೆಕ್ಟ್ರಾನಿಕ್ ವಸ್ತುಗಳವರೆಗೆ!
ವಡಗಲಜ್ಜಿಗೆ ಅರ್ಪಿಸುವ ವಸ್ತುಗಳ ಪಟ್ಟಿಯೂ ಕುತೂಹಲ ಮೂಡಿಸುತ್ತದೆ. ಬಳಸಿದ ಪೊರಕೆಗಳು, ಹಳೆಯ ಚೀಲಗಳು, ಹರಿದ ಬಟ್ಟೆಗಳು, ಕೃಷಿ ಉಪಕರಣಗಳು, ಕೊಡೆಗಳು ಸೇರಿದಂತೆ ಮನೆಯಲ್ಲಿರುವ ಬಳಕೆಯಾಗದ ಹಲವು ವಸ್ತುಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಕಾಲ ಬದಲಾಗುತ್ತಿದ್ದಂತೆ ಎಲೆಕ್ಟ್ರಾನಿಕ್ ವಸ್ತುಗಳೂ ಈ ರಾಶಿಗೆ ಸೇರುತ್ತಿವೆ.ದೇವಿಯನ್ನು ಊರಿಗೆ ಬರಮಾಡಿಕೊಳ್ಳುವಾಗ ಸದ್ದು-ಗದ್ದಲ, ವಾದ್ಯಗಳೊಂದಿಗೆ ಮೆರವಣಿಗೆ ನಡೆಯುತ್ತದೆ. ನಿಗದಿತ ಅವಧಿಯಲ್ಲಿ ಭಕ್ತರು ನಿರಂತರವಾಗಿ ದೇವಿಗೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ.
ಆಚರಣೆಯ ಕೊನೆಯ ದಿನ ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಗ್ರಾಮಸ್ಥರು ದೇವಿಯನ್ನು ಹೊತ್ತುಕೊಂಡು ಘೋಷಣೆಗಳನ್ನು ಕೂಗುತ್ತಾ, ಪೂಜಾ ಸಾಮಗ್ರಿ ಹಾಗೂ ತ್ಯಾಜ್ಯವನ್ನು ಜತೆಗಿಟ್ಟುಕೊಂಡು ಮಧ್ಯರಾತ್ರಿಯಲ್ಲಿ ಹೆದ್ದಾರಿಯಲ್ಲಿರುವ ನೆರೆಯ ಗ್ರಾಮಕ್ಕೆ ತೆರಳುತ್ತಾರೆ. ಅಲ್ಲಿನ ಗ್ರಾಮಸ್ಥರಿಗೆ ದೇವಿಯನ್ನು ಹಸ್ತಾಂತರಿಸಲಾಗುತ್ತದೆ.
ಹೀಗೆ ಭಟ್ಕಳದಿಂದ ಅಂಕೋಲ ,ಕಾರವಾರ ಹಾಗೂ ಶಿರಸಿ ವರೆಗೂ ಈ ದೇವಿ ಊರಿನಿಂದ ಊರಿಗೆ ಹಸ್ತಾಂತರವಾಗುತ್ತಾಳೆ. ಜೊತೆಗೆ ತನ್ನೊಂದಿಗೆ ಕಸದ ದೊಡ್ಡ ರಾಶಿಯನ್ನ ಹೊತ್ತು ತರುವ ಮೂಲಕ ನಿಗದಿ ಜಾಗದಲ್ಲಿ ಕೊನೆಯದಾಗಿ ವಿಸರ್ಜನೆ ಆಗುತ್ತದೆ.
ಇಂದಿನ ಆದುನಿಕ ಕಾಲದಲ್ಲೂ ಈ ಸ್ವಚ್ಛತಾ ಕಾರ್ಯದ ಧಾರ್ಮಿಕ ಆಚರಣೆ ಮುಂದುವರೆದಿದ್ದು ಮಾತ್ರ ವಿಶೇಷವಾಗಿದೆ.
