BREAKING NEWS
Search

ಕರೋನಾ ಸೋಂಕಿತ ಮಕ್ಕಳಿಗೆ ಪ್ರತಿ ತಾಲೂಕಿನಲ್ಲಿ 25 ಹಾಸಿಗೆಯ ಕೋವಿಡ್ ವಾರ್ಡ ತೆರೆಯಲು ಸಿದ್ದತೆ- ಪ್ರಿಯಾಂಗಾ. ಎಂ.

462

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಂಭವನೀಯ 3 ನೇ ಅಲೆ ಎದುರಾದಲ್ಲಿ ಮಕ್ಕಳಿಗೆ ರಕ್ಷಣೆ ಹಾಗೂ ಚಿಕಿತ್ಸೆ ಒದಗಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಕಾರ್ಯಲಯದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಸದೃಢತೆಗಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಹಾಗೂ ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತರೊಂದಿಗೆ ಆರೋಗ್ಯ ಸಮೀಕ್ಷೆ ಕಾರ್ಯ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತ್‍ಗಳಲ್ಲಿನ ಮಕ್ಕಳ ಆರೋಗ್ಯ ತಪಾಸಣೆಕೈಗೊಳ್ಳಲಾಗುವುದು. ಪ್ರತಿ ತಾಲೂಕನಲ್ಲೂ ಕೂಡ ವಿಶೇಷವಾದ 25 ಹಾಸಿಗೆಯುಳ್ಳ ಮಕ್ಕಳ ಕೋವಿಡ್ ವಾರ್ಡ ತೆರೆಯಲು ಸ್ಥಳ ಗುರುತಿಸಲಾಗುತ್ತಿದೆ. ಮಕ್ಕಳಿಗೆ ಅಲ್ಲಿ ಅವಶ್ಯಕವಾಗಿ ಬೇಕಾಗಿರುವಂತಹ ಆಟಿಕೆ ಸಾಮಾನು ಶೌಚಾಲಯ ಮತ್ತು ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುವುದು ಎಂದರು.

ಅಪೌಷ್ಟಿಕ ಮಕ್ಕಳಿಗೆ ಉತ್ತಮ ಆಹಾರ ನೀಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 6 ವರ್ಷದೊಳಗಿನ ಮಕ್ಕಳ ಸಂಖ್ಯೆ ಒಂದು ಲಕ್ಷ ಆರು ಸಾವಿರ ಇದೆ. ತೀವ್ರ ಅಪೌಷ್ಟಿಕತೆ ಹೊಂದಿರು ಮಕ್ಕಳ ಸಂಖ್ಯೆ 184 ಇದ್ದರೆ ,ಅಪೌಷ್ಟಿಕ ಹೊಂದಿರುವ ಮಕ್ಕಳ ಸಂಖ್ಯೆ 4402 ಜಿಲ್ಲೆಯಲ್ಲಿದೆ. ಈ ಎಲ್ಲಾ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಪ್ರೋಟೀನ್ ಪೌಡರ್, ಚವನ್ ಪ್ರಾಶ್, ಮಲ್ಟಿ ವಿಟಮಿನ್ ಸಿರಫ್ ಜಿಂಕ್ ಮತ್ತು ಐರನ್ ಸಿರಪ್ , ಜ್ವರದ ಸಿರಫ್ ಒಳಗೊಂಡ ಒಂದು ಕಿಟ್ ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ಮಕ್ಕಳಿಗೆ ಮೊದಲು ಅಂಗನವಾಡಿಗಳಲ್ಲಿ ನೀಡಲಾಗುತ್ತಿದ್ದ ಮೊಟ್ಟೆಯ ಪ್ರಮಾಣಕ್ಕಿಂತ ಒಂದುವರೆ ಪಟ್ಟು ಹೆಚ್ಚು ನೀಡಲಾಗುವುದು. ಮಧ್ಯಮಾಂತರ ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಆಧ್ಯತಾ ಅನುಸಾರ ಕಿಟ್ ಗಳನ್ನು ನೀಡಲಾಗುವುದು ಎಂದರು.

ಕೋವಿಡ್ ಕಾರಣದಿಂದಾಗಿ ಜಿಲ್ಲೆಗೆ 6 ತಿಂಗಳಿನಿಂದ 3 ವರ್ಷದೊಳಗಿನ 863 ಮಕ್ಕಳು, 3ರಿಂದ 6 ವರ್ಷದೊಳಗಿನ 1121 ಮಕ್ಕಳು , 562 ಗರ್ಭಿಣಿಯರು, 639 ಬಾಣಂತಿಯರು ವಲಸೆ ಬಂದಿರುತ್ತಾರೆ.

2021 ರ ಎರಡನೇ ಅಲೆಯಲ್ಲಿ ಜಲ್ಲೆಯಲ್ಲಿ 18 ವರ್ಷದೊಳಗಿನ 151 ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು ಯಾರೂ ಕೂಡ ಆಸ್ಪತ್ರೆಗೆ ದಾಖಲಾಗಿರುವುದಿಲ್ಲ , ಅಲ್ಲದೇ ಯಾವುದೇ ಸಮಸ್ಯೆ ಅಥವಾ ಸಾವಿನ ವರದಿಯಾಗಿಲ್ಲ ಎಂದು ತಿಳಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!