ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಅಲ್ಪ ಕಡಿಮೆಯಾದರೂ ಅಬ್ಬರದ ಮಳೆ ಹಾಗೂ ನದಿಗಳಿಂದ ಸೃಷ್ಟಿಯಾದ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು , ಕೆಲವು ಭಾಗದಲ್ಲಿ ಗುಡ್ಡ ಕುಸಿತವಾಗಿ ಹೆದ್ದಾರಿ ಸಂಚಾರ ಸಹ ಅಸ್ತವ್ಯಸ್ಥವಾಗಿದೆ. ಹಾಗಿದ್ರೆ ಎಲ್ಲಿ ಎಸ್ಟು ಅನಾಹುತ ಆಗಿದೆ ಇಲ್ಲಿದೆ ವಿವರ.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಪರಿಣಾಮ ಗಂಗಾವಳಿ, ಅಘನಾಶಿನಿ, ವರದಾ ಹಾಗೂ ಗುಂಡಬಾಳ ನದಿ ತೀರದ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಎದುರಾಗಿದ್ದು, ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಅಂಕೋಲಾ ತಾಲ್ಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ್ದ ನೀರು ಇಳಿಕೆಯಾಗುತ್ತಿದ್ದು, ತೀರಾ ತಗ್ಗು ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ ಮಾತ್ರ ನೀರು ಸಂಗ್ರಹಗೊಂಡಿದೆ. ಮಳೆಯಿಂದಾಗಿ ನದಿ ಹಾಗೂ ಹಳ್ಳಗಳು ತುಂಬಿ ಹರಿಯುತ್ತಿದೆ.
ಜಲಾಶಯಗಳಲ್ಲಿ ಜಿಲ್ಲಾಡಳಿತ ಸೂಚಿಸಿದ ನೀರಿನಮಟ್ಟ ಕಾಯ್ದುಕೊಂಡು ಪ್ರವಾಹವಾಗದಂತೆ ಅಲ್ಪ ಪ್ರಮಾಣದಲ್ಲಿ ನೀರು ಹೊರಹಾಕಲಾಗುತ್ತಿದೆ. ಇನ್ನು ನದಿಗಳು ಉಕ್ಕಿ ಹರಿದ ಪರಿಣಾಮ ಹೊನ್ನಾವರ, ಕುಮಟಾ ಸೇರಿದಂತೆ ಜಿಲ್ಲೆಯಲ್ಲಿ 11 ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು 360 ಜನರು ಆಶ್ರಯ ಪಡೆದಿದ್ದಾರೆ.
ಇನ್ನು ಮಳೆ ಕಡಿಮೆಯಾದರೂ ಕೂಡ ಪ್ರವಾಹ ಹಾಗೂ ಗಾಳಿ ಮಳೆಯಿಂದಾದ ಹಾನಿ ಪ್ರಮಾಣ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಜೂನ್ 1 ರಿಂದ ಇದುವರೆಗೆ 3 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಾದ್ಯಂತ ಒಟ್ಟು 289 ಮನೆಗಳಿಗೆ ಹಾನಿಯಾಗಿದೆ. 14 ಜಾನುವಾರುಗಳು ಮೃತಪಟ್ಟಿವೆ.
ಇದನ್ನೂ ಓದಿ:-ಒತ್ತಡ ,ಖಿನ್ನತೆ ನಿವಾರಣೆಗೆ ಈ ಯೋಗಾಸನ ಮಾಡಿನೋಡಿ|ಮಾನಸಿಕ ಆರೋಗ್ಯಕ್ಕೆ ಇಲ್ಲಿದೆ ಸರಳ ಆಸನ
ಇದಲ್ಲದೇ ಕುಮಟಾ-ಶಿರಸಿ, ಕುಮಟಾ-ಸಿದ್ದಾಪುರ ಹೆದ್ದಾರಿ ಹಾಗೂ ಗೋವಾ ಸಂಪರ್ಕಿಸುವ ರಾಮನಗರ-ಲೋಂಡಾ ಹೆದ್ದಾರಿಯಲ್ಲಿ ಧರೆ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಗುಡ್ಡದ ಮಣ್ಣು ತೆರವು ಮಾಡಿದರೂ ಕೂಡ ಮತ್ತೆ ಮಣ್ಣು ಕುಸಿಯುತ್ತಿರುವ ಹಿನ್ನಲೆ ಭಾರೀ ವಾಹನಗಳಿಗೆ ಬದಲಿ ಮಾರ್ಗದಲ್ಲಿ ತೆರಳುವಂತೆ ಸೂಚಿಸಲಾಗಿದೆ. ಈಗಾಗಲೇ ಗುಡ್ಡ ಕುಸಿಯುವ ಪ್ರದೇಶವನ್ನ ಗುರುತಿಸಿ ತೆರವುಗೊಳಿಸಲಾಗುತ್ತಿದೆ. ಆದರೆ ಇದೇ ರೀತಿ ಗುಡ್ಡ ಕುಸಿತ ಮುಂದುವರಿದಲ್ಲಿ ಹೆದ್ದಾರಿಯಲ್ಲಿ ಈ ಹಿಂದಿನಂತೆ ರಾತ್ರಿ ಸಂಚಾರವನ್ನ ನಿರ್ಬಂಧಿಸುವ ಚಿಂತನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಮಲೆನಾಡಿನ ಸಿದ್ದಾಪುರ ,ಬನವಾಸಿ ಭಾಗದಲ್ಲಿ ವರದಾ ನದಿ ಪ್ರವಾಹ ಮುಂದುವರೆದಿದ್ದು ಕೃಷಿ ಜಮೀನು ಜಲಾವೃತವಾಗಿದೆ.ಸದ್ಯ ಮಳೆಯ ಪ್ರಮಾಣ ಕಡಿಮೆಯಾದರೂ ಇನ್ನೂ ನಾಲ್ಕು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ನದಿ ಪಾತ್ರದ ಜನ ಪ್ರವಾಹ ಇಳಿತದಿಂದ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಆತಂಕ ಮನೆ ಮಾಡಿದ್ದು ಹೆಚ್ಚಿನ ಮಳೆಯಾದರೇ ಜಿಲ್ಲೆಯಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ:- ಆರೋಗ್ಯವಾಗಿದ್ದ ಮಹಿಳೆಗೆ ಪಾರ್ಶವಾಯು ಬಾರದಂತೆ ಇಂಜೆಕ್ಷನ್ ನೀಡಿ ಮಹಿಳೆ ಪ್ರಾಣ ತೆಗೆದ ಕಾರವಾರದ ಹಳಗಾ ಆಸ್ಪತ್ರೆ






