

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ಸರಣಿ ಕಳ್ಳತನ ನಗರದ ಜನತೆಯ ನಿದ್ದೆ ಕೆಡಿಸಿದೆ.
ಹಳಿಯಾಳದಲ್ಲಿ ಕಳೆದೊಂದು ವಾರದಿಂದ ಸರಣಿ ಕಳ್ಳತನವಾಗುತಿದ್ದು ಮುರ್ಕವಾಡ, ಮಾರುಕಟ್ಟೆ ರಸ್ತೆ ಫಿಶ್ ಮಾರ್ಕೆಟ್ ಬಳಿ, ಬಸ್ ನಿಲ್ದಾಣ ಬಳಿ ಸೇರಿದಂತೆ ವಿವಿಧೆಡೆ ಮನೆ ಹಾಗೂ ಅಂಗಡಿ ಕಳ್ಳತನ ಮಾಡಿ ಹಣ ವಸ್ತುಗಳನ್ನು ದೋಚಲಾಗಿದೆ.
ಕಳೆದ 1 ವಾರದಿಂದ 5 ಅಂಗಡಿ, 2 ಮನೆ ಕಳ್ಳತನವಾಗಿದ್ದು ಪ್ರಕರಣ ದಾಖಲಾಗಿ ಪೊಲೀಸರು ಶೋಧ ಕಾರ್ಯ ನಡೆಸುತಿದ್ದರೂ ಕಳ್ಳರು ಮಾತ್ರ ನಿರಂತರ ಕಳ್ಳತನದಲ್ಲಿ ತೊಡಗಿದ್ದಾರೆ.
ಎಲ್ಲೆಲ್ಲಿ ಕಳ್ಳತನ? ಎಷ್ಟು ವಸ್ತುಗಳು ಕಳ್ಳರ ಪಾಲು?

ಹಳಿಯಾಳ ನಗರದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಶಾರದಾ ಮೊಬೈಲ್ ಅಂಗಡಿಯ ಶಟರ್ ಮುರಿದು ಒಳಗೆ ನುಗ್ಗಿದ್ದ ಕಳ್ಳರು ಅಂಗಡಿಯ ಸಿಸಿ ಕ್ಯಾಮೆರಾದ ಡಿವಿಆರ್ ಕದ್ದು ಅಂಗಡಿಯನ್ನು ದೋಚಲು ವಿಫಲ ಯತ್ನ ನಡೆಸಿದ್ದರು.ಮೇಘರಾಜ ಶೆಟ್ಟಿ ಮಾಲಕತ್ವದ ಅರಿಹಂತ ಎಲೆಕ್ಟ್ರಾನಿಕ್ಸ್ ಅಂಗಡಿಯ ಬಾಗಿಲನ್ನು ಮುರಿದ್ದು,
ಹಳಿಯಾಳ ಮುಖ್ಯ ರಸ್ತೆಯ ಮಾರ್ಕೆಟ್‌ನಲ್ಲಿರೋ ಎಲೆಕ್ಟ್ರಾನಿಕ್ಸ್ ಅಂಗಡಿಗೆ ನುಗ್ಗಿ 15 ಸಾವಿರ ರೂ.ಗೂ ಅಧಿಕ ನಗದು ದೋಚಿದ್ದಾರೆ.
ಇದನ್ನೂ ಓದಿ:-ಹಳಿಯಾಳದಲ್ಲಿ ಚೋರರ ಕಾಟಕ್ಕೆ ಜನ ಸುಸ್ತು!
ಇನ್ನು ಹಳಿಯಾಳದ ಫಿಶ್ ಸರ್ಕಲ್‌ನ ಚರ್ಚ್ ಅಂಗಡಿ ಸಂಕೀರ್ಣದಲ್ಲಿರುವ ಸಾವೇರ ಕ್ರಾಸ್ಟಾ ಅವರ ಮಾಲಿಕತ್ವದ ಅಂಗಡಿಯಲ್ಲಿ ಮೌಂಟ್ ಮೇರಿ ಬೇಕರಿಯ ಬಾಗಿಲನ್ನು ಚಾಣಾಕ್ಷತನದಿಂದ ಮುರಿದು ಒಳ ನುಗ್ಗಿ ಅಂಗಡಿಯಲ್ಲಿದ್ದ ಒಂದು ಸಾವಿರ ರೂ.ಗೂ ಅಧಿಕ ನಗದು ಕಳ್ಳತನ ಮಾಡಿದ್ದಾರೆ.
ಇನ್ನು ಇಷ್ಟಕ್ಕೇ ಸುಮ್ಮನಾಗದ ಕಳ್ಳರು ಹಳಿಯಾಳ ಮಾರ್ಕೆಟ್‌ನಲ್ಲಿರುವ ಲಕ್ಷ್ಮೀಕಾಂತ ಪೂಜಾರಿ ಎಂಬವರ ಶ್ರೀ ಲಕ್ಷ್ಮೀ ಪೋಟೋ ಸ್ಟುಡಿಯೋದಲ್ಲಿ ಬಾಗಿಲಿನ ಬೀಗ ಮುರಿದು ಅಂಗಡಿಯಲ್ಲಿದ್ದ ನಗದು 12 ಸಾವಿರ ರೂ. ಹಾಗೂ 30 ಸಾವಿರ ರೂ. ರೂ ಮೌಲ್ಯದ ಡಿಎಸ್‌ಎಲ್‌ಆರ್ ಕ್ಯಾಮೆರಾ ಕಳ್ಳತನ ಮಾಡಿ ಮರುದಿನ ಇದೇ ಮಳಿಗೆಗೆ ಕಳ್ಳತನದ ವಿಫಲ ಯತ್ನ ನಡೆಸಿದ್ದಾರೆ.
ಇನ್ನು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರೋ ಶ್ರೀ ವೈನ್ಸ್ ಅಂಗಡಿಯ ಶಟರ್ಸ ಮುರಿದು 4 ಸಾವಿರ ರೂ. ದೋಚಿ ಪರಾರಿಯಾಗಿದ್ದು ,ಮುರ್ಕವಾಡ ಗ್ರಾಮದಲ್ಲಿ ಶಂಭಾಜೀ ಗುತ್ತೇನ್ನವರ ಮಾಲಕತ್ವದ ಮನೆಗೆ ನುಗ್ಗಿ ಒಂದು ಚಿನ್ನದ ಮಂಗಲಸೂತ್ರ, ಮೂರು ಉಂಗುರ, ಇನ್ನಿತರ ಚಿನ್ನದ ಆಭರಣಗಳು ಸೇರಿದಂತೆ ಬೆಳ್ಳಿಯ ಕೆಲವು ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಇದಲ್ಲದೇ ಸಮೀಪದ ಹನುಮಂತ ಶಿಂಧೆ ಎಂಬವರ ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನಮಾಡಿದ್ದು ಪ್ರಕರಣ ದಾಖಲಾಗುತಿದ್ದರೂ ಕಳ್ಳರು ಮಾತ್ರ ನಿರಂತರ ಕಳ್ಳತನದಲ್ಲಿ ನಿರತರಾಗಿದ್ದಾರೆ.






