
ಕಾರವಾರ :-ನಕಲಿ ದಾಖಲೆ ಸೃಷ್ಟಿಸಿ ಏನುಬೇಕಾದರೂ ಮಾಡಬಹುದು ಎಂಬುವವರಿಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಿಸಿ ಮುಟ್ಟಿಸಿದ್ದು,ನಕಲಿ ದಾಖಲೆ ಸೃಷ್ಟಿಮಾಡಿ ಬೇರೆಯವರಿಗೆ ಜಮೀನು ಮಾರಾಟ ಮಾಡುತಿದ್ದ ಐವರನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ಅಂಕೋಲದ (ankola) ಉಪನೋಂದಣಾಧಿಕಾರಿ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:-Karwar |ಪದವಿದರರು ಕುಲಗೆಟ್ಟ ಮತ ಹಾಕದಂತೆ ಮಾಜಿ ಎಮ್.ಎಲ್.ಸಿ ಮೋಹನ್ ಲಿಂಬಿಕಾಯಿ ಮನವಿ
ಬಂಧಿತರನ್ನು ಅಂಕೋಲ ತಾಲೂಕಿನ ಬಾಳೆಗುಳಿಯ ರಿಯಲ್ ಎಸ್ಟೇಟ್ ಬ್ರೋಕರ್ ಮಂಜುನಾಥ ಆನಂದು ಗೌಡ, ಹೊನ್ನೇಕೇರಿ ಕ್ರಾಸ್‌ನ ಪ್ರಸ್ತುತ ಅಂಕೋಲದ ರಿಜಿಸ್ಟರ್ ಆಫೀಸಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ
ಶಂಕರ ರಾಮದಾಸ ಅಣ್ವೇಕರ,ಕಂಪ್ಯೂಟರ್ ಸೆಂಟರ್ ನ ಕೃಷ್ಣಾಪುರದ ಚೆನ್ನಪ್ಪ ಅಲಿಯಾಸ್ ರವಿ ಜಟ್ಟಿ ನಾಯ್ಕ ಹಾಗೂ ಬೆಳಸೆಯ ವೆಲ್ಟಿಂಗ್ ಕೆಲಸ ಮಾಡುವ ದರ್ಶನ ನಾರಾಯಣ ಗೌಡ ಮತ್ತು ಕೂಲಿ ಕೆಲಸ ಮಾಡುವ ಯಂಕು ಹುಲಿಯಾ ಗೌಡ ಎಂಬುವವರನ್ನ ಬಂಧಿಸಲಾಗಿದೆ.
ಇದನ್ನೂ ಓದಿ:-Ankola |ಬಿಜೆಪಿ ಪಾದಯಾತ್ರೆಯಿಂದ ಅವರ ಬಿಪಿ,ಶುಗರ್ ಕಡಿಮೆಯಾಗುತ್ತಿದೆ-ಲಕ್ಷಣ್ ಸವದಿ
ಅಂಕೋಲ ತಾಲೂಕಿನ ಬೋಗ್ರಿಬೈಲ್ ಗ್ರಾಮದ ಸರ್ವೆ ನಂ. 79/ಅ4ರ 01-14-00 ವಿಸ್ತೀರ್ಣದ ಜಮೀನನ್ನು ಫಿರ್ಯಾದಿದಾರರ ಕುಟುಂಬಕ್ಕೆ ಸೇರಿದ ಈ ಸ್ವತ್ತನ್ನ ಅಕ್ರಮವಾಗಿ ಪರಭಾರೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು.
ಫಿರ್ಯಾದಿದಾರರು ಹಾಗೂ ಅವರ ಸಹೋದರರೇ ಎಂಬಂತೆ ಸುಳ್ಳು ವ್ಯಕ್ತಿಗಳನ್ನು ಹಾಜರುಪಡಿಸಿ, ನಕಲಿ ಸಹಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನಿನ ಮಾರಾಟ ಪ್ರಕ್ರಿಯೆ ನಡೆಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 171/2026ರಂತೆ ಬಿ.ಎನ್.ಎಸ್.-2023ರ ವಿವಿಧ ಕಲಂಗಳು ಹಾಗೂ ಕಲಂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರವಾರ (karwar)ಉಪವಿಭಾಗದ ಡಿವೈಎಸ್‌ಪಿ ಎಸ್.ವಿ. ಗಿರೀಶ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಗಳ ಚಲನವಲನ ಪತ್ತೆಹಚ್ಚಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರನ್ನೂ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕೃತ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, ಬಳಿಕ ಅವರನ್ನು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಸ್.ವಿ. ಗಿರೀಶ್, ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
