ಕಾರವಾರ :-ಕೇಂದ್ರ ರೈಲ್ವೆ ಸಚಿವಾಲಯ ಜನರ ಬೇಡಿಕೆಯಂತೆ ಕರ್ನಾಟಕದ ರೈಲು ನಿಲ್ದಾಣವೊಂದರ ಹೆಸರು ಬದಲಾವಣೆ ಮಾಡಿದೆ. ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ನಿಲ್ದಾಣ ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯದ ವ್ಯಾಪ್ತಿಗೆ ಸೇರುತ್ತದೆ. ಹೌದು ಬ್ರಿಟೀಷ ಕಾಲದಿಂದಲೂ ಮಹತ್ವ ಹೊಂದಿರುವ ಹಾಗೂ ಸರಕು ಸಾಗಾಣಿಕೆ ಮಾಡಲಾಗುತಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು’ದಾಂಡೇಲಿ’ ಎಂದು ಬದಲಾವಣೆ ಮಾಡಲಾಗಿದೆ. ಇಂಗ್ಲಿಷ್ ನಲ್ಲಿ DANDELI ಎಂದು ಕನ್ನಡದಲ್ಲಿ ದಾಂಡೇಲಿ ಎಂದು ಇನ್ನು ಮುಂದೆ ರೈಲು ನಿಲ್ದಾಣದ ಹೆಸರು ಬದಲಿಸಿ ಸುತ್ತೋಲೆ ಹೊರಡಿಸಲಾಗಿದೆ.
ಕರ್ನಾಟಕದಲ್ಲಿ ಐತಿಹಾಸಿಕ ಹಿನ್ನಲೆ ಹೊಂದಿರುವ ರೈಲು ನಿಲ್ದಾಣಗಳಲ್ಲಿ (Railway station) ಇದು ಸಹ ಒಂದಾಗಿದೆ. ಈ ಹಿಂದೆ ಬ್ರಿಟೀಷರ ಕಾಲದಲ್ಲಿ ಸರಕು ಸಾಮಗ್ರಿಗಳನ್ನು ಕಾರ್ಖಾನೆಗೆ ಸರಬರಾಜು ಮಾಡಲು ಈ ಭಾಗದ ನಿಲ್ದಾಣವನ್ನು ಬಳಕೆ ಮಾಡಲಾಗುತಿತ್ತು. ಹೀಗಾಗಿ ಐತಿಹಾಸಿಕ ಹಿನ್ನಲೆ ಸಹ ಈ ನಿಲ್ದಾಣಕ್ಕಿದೆ.

ಹಳಿಯಾಳದ ಶಾಸಕ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹಾಗೂ ಸ್ಥಳೀಯ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಅಂಬೇವಾಡಿ ಬದಲು ದಾಂಡೇಲಿ ಎಂದು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿದ್ದರು.
ಇದನ್ನೂ ಓದಿ:-ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದ್ರೆ 1 ಲಕ್ಷ ಬಹುಮಾನ: ಸಚಿವ ದಿನೇಶ್ ಗುಂಡೂರಾವ್
ಇನ್ನು ಹೆಸರುವಬದಲಾವಣೆಯಾದ ಮಾಹಿತಿಯನ್ನು ಶಾಸಕ ಆರ್.ವಿ ದೇಶಪಾಂಡೆಯವರು (RV Deshpande) ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು
ದಾಂಡೇಲಿಯು (dandeli) ಕಾಳಿ ನದಿಯ ದಡದಲ್ಲಿರುವ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನ ಮತ್ತು ಹಚ್ಚ ಹಸಿರಿನ ಕಾಡುಗಳೊಂದಿಗೆ ಪ್ರವಾಸಿ ತಾಣವಾಗಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಮತ್ತು ದೇಶದ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. ಆದರೆ ರೈಲಿನ ಹೆಸರು ಪ್ರವಾಸಿ ತಾಣಕ್ಕಿಂತ ಭಿನ್ನವಾಗಿದ್ದು ಪ್ರಯಾಣಿಕರಿಗೆ ಗೊಂದಲವನ್ನು ಉಂಟುಮಾಡುತ್ತಿದೆ ಈ ಹಿನ್ನಲೆಯಲ್ಲಿ ಅಂಬೆವಾಡಿ ರೈಲು ನಿಲ್ದಾಣದಿಂದ ದಾಂಡೇಲಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡುವುದು ಹೆಚ್ಚು ಸೂಕ್ತವೆಂದು ಈ ಮೊದಲು ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಮುಖೇನ ನಾನು ವಿನಂತಿಸಿದ್ದು ಪ್ರಯಾಣಿಕರ ಗೊಂದಲವನ್ನು ತಪ್ಪಿಸಲು ಮತ್ತು ಸಹಾಯ ಮಾಡಲು ಪ್ರಸ್ತುತ ಅಂಬೆವಾಡಿ ರೈಲು ನಿಲ್ದಾಣದಿಂದ ದಾಂಡೇಲಿ ರೈಲು ನಿಲ್ದಾಣ ಎಂದು ಮರುನಾಮಕರಣವಾಗಿದ್ದು ದಾಂಡೇಲಿಗರ ಬಹುದಿನದ ಕನಸು ಸಾಕಾರಗೊಂಡಿದೆ. ಈ ಮೂಲಕ ಅತೀ ಶೀಘ್ರದಲ್ಲಿ ರೈಲು ಸಂಚರಿಸುವ ಆಶಾ ಭಾವನೆಯನ್ನು ಹೊಂದಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.






