


ಕಾರವಾರ :- ಒಂದಲ್ಲಾ ಒಂದು ವಿವಾಧದ ಮೂಲಕವೇ ಸುದ್ದಿಯಾಗುತ್ತಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗೋಕರ್ಣ (gokarna) ಮಹಾಬಲೇಶ್ವರ ದೇವಸ್ಥಾನ (Mahabaleshwara temple)ಇದೀಗ ಭಕ್ತರಿಗೆ ತೀರ್ಥ ಕೊಡುವುದರಲ್ಲೂ ವಿವಾದಕ್ಕೀಡಾಗಿದೆ. ಅಷ್ಟಕ್ಕೂ ಏನು ವಿವಾದ ಅಂತೀರಾ ಈ ಸುದ್ದಿ ಓದಿ.
ದೇವಸ್ಥಾನದ(temple) ಗರ್ಭ ಗುಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅರ್ಚಕರು,ಮತ್ತೊಂದೆಡೆ ಪ್ರತಿಭಟನೆಯಿಂದಾಗಿ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಅಡ್ಡಿ. ಈ ದಿಡೀರ್ ಬೆಳವಣಿಗೆಯಿಂದ ದೇವರ ದರ್ಶನಕ್ಕೆ ಬಂದಿದ್ದವರೇ ಶಾಖ್ ಆಗಿದ್ದರು.
ಹೌದು ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕಾಶಿಎಂದೇ ಪ್ರಸಿದ್ಧಿ ಪಡೆದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ನೀಡುವ ಹಕ್ಕಿಗಾಗಿ ಅರ್ಚಕರೇ ಪ್ರತಿಭಟನೆಗಿಳಿದಿದ್ದರು.
ರಾಮಾಯಣ ಮಹಾಕಾಲದಿಂದಲೂ ಗೋಕರ್ಣ ಕ್ಕೆ ವಿಶೇಷ ಮಹತ್ವವಿದೆ. ಇಲ್ಲಿನ ಮಹಾಬಲೇಶ್ವರನನ್ನು ಸ್ವತಹಾ ರಾವಣ ತನ್ನ ತಪಸ್ಸಿನಿಂದ ಕೈಲಾಸದಿಂದ ಆತ್ಮಲಿಂಗ ತಂದು ವಿಘ್ನ ನಿವಾರಕನ ಲೀಲೆಯಿಂದ ಇಲ್ಲಿ ಪ್ರತಿಷ್ಟಾಪನೆಯಾಯಿತು ಎಂಬ ಇತಿಹಾಸ ಹೇಳುತ್ತದೆ.
ಈ ದೇವಸ್ಥಾನದ ಆಡಳಿತವನ್ನು 2008 ರಲ್ಲಿ ಯಡಿಯೂರಪ್ಪ ನವರ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತು. ಇದನ್ನು ಪ್ರಶ್ನಿಸಿದ ಅಲ್ಲಿನ ಅರ್ಚಕರು ಕೋರ್ಟ ಮೆಟ್ಟಿಲೇರಿದ ಪರಿಣಾಮ 2018 ರ ಆಗಷ್ಟ ನಲ್ಲಿ ಸುಪ್ರಿಂ ಕೋರ್ಟ ನ್ಯಾಯಮೂರ್ತಿ ಗಳಾದ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚನೆ ಮಾಡಿತು. ಇದಾದ ನಂತರ ದೇವಸ್ಥಾನದ ಪೂಜೆ , ದೇವರ ಆರತಿ ತಟ್ಟೆಯ ಹಣದ ಹಕ್ಕಿನ ವರೆಗೆ ಇಲ್ಲಿನ ಕೆಲವು ಅರ್ಚಕರು ಕೋರ್ಟ ಮೆಟ್ಟಿಲೇರಿದರು.
ಇನ್ನು ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಜಂಬೆ ಮನೆತನ ಹಾಗೂ ಗೋಪು ಮನೆತನದಲ್ಲಿ ದೇವಸ್ಥಾನ ಹಸ್ತಾಂತರ ದಿನದಿಂದ ವಿವಾದವಿದ್ದು 2004 ರಲ್ಲಿ ಗೋಪ ಮನೆತನದವರು ಕೋರ್ಟ ಮೆಟ್ಟಿಲೇರಿದ್ದರು ಎಂದು ಹೇಳಲಾಗುತಿದ್ದು ,ಆದರೇ ಕೋರ್ಟ ಗೆ ಹೋದ ಅವರ ಕುಟುಂಬದ ವ್ಯಕ್ತಿಗಳು ಅಕಾಲಿಕ ನಿಧನದ ನಂತರ ಯಾರೂ ಕೂಡ ಕೋರ್ಟ ಪ್ರಕರಣ ಮುಂದುವರೆಸದೇ ಇಬ್ಬರ ಕುಟುಂಬವೂ ಮಾತಿನ ಪ್ರಕಾರ ತಿಂಗಳ ಪಾಳಿಯಂತೆ ಒಂದೊಂದು ಕುಟುಂಬ ನಂದಿ ಮಂಟಪದಲ್ಲಿ ಭಕ್ತರಿಗೆ ತೀರ್ಥ ನೀಡುವ “ಪಾಳಿ” ವಹಿಸಿಕೊಂಡಿತ್ತು.
ಅದರಂತೆ ಜಂಬೆ ಕುಟುಂಬ ಹಲವು ತಿಂಗಳುಗಳಿಂದ ಪಾಳಿ ಮಾಡುತಿದ್ದು ಇದೀಗ ಗೋಪ ಕುಟುಂಬದ ಅರ್ಚಕರು ಈ ಬಾರಿ ನಮ್ಮ ಪಾಳಿಯಿದ್ದು ಬಿಟ್ಟುಕೊಡುವಂತೆ ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ದೇವಸ್ಥಾನ ಉಸ್ತುವಾರಿ ಸಮಿತಿಯ ಆಡಳಿತಕ್ಕೆ ಒಳಪಟ್ಟಿದ್ದರಿಂದ ಅಧ್ಯಕ್ಷರೇ ಹೇಳಬೇಕೆಂದು ಜಂಬೆ ಕುಟುಂಬ ತಕರಾರು ತೆಗೆದಿದ್ದು ಈ ವೇಳೆ ದೇವರ ಗರ್ಭಗುಡಿಯಲ್ಲೇ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದು ವಿವಾದಕ್ಕೆ ಕಾರಣವಾಯಿತು.

ಇನ್ನು ಜಂಬೆ ಕುಟುಂಬ ಗೋಪ ಕುಟುಂಬಕ್ಕೆ ಯಾವುದೇ ಹಕ್ಕಿಲ್ಲ, ಏನೇ ಇದ್ದರೂ ದಾಖಲೆ ತೋರಿಸಲಿ ನಾವು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ.ಆದರೇ ತಮ್ಮ ಬಳಿ ದಾಖಲೆ ಇದೆ ನಾವು ಕೂಡ ಹಕ್ಕುದಾರರು ಎಂದು ಗೋಪು ಕುಟುಂಬ ವಾದಿಸುತ್ತದೆ. ಇದಲ್ಲದೇ ಜಂಬೆ ಕುಟುಂಬ ದೇವಸ್ಥಾನದ ಆಡಳಿತದಲ್ಲಿ ತಮ್ಮ ಪ್ರಭಾವ ಬೀರಿ ಹಿಡಿತದಲ್ಲಿ ಇಟ್ಟುಕೊಂಡಿದೆ, ಆಡಳಿತದಲ್ಲಿ ಬ್ರಷ್ಟಾಚಾರ ಮಾಡಿದೆ,ಹಣ ಲಪಟಾಯಿಸಿದೆ ಎಂದು ದೂರುತ್ತಿರುವುದಲ್ಲದೇ ಈ ಬಗ್ಗೆ ಹಲವು ತಿಂಗಳಿಂದ ದಾಖಲೆ ಸಮೇತ ಕುಮಟಾದ ಎಸಿ ಅವರಿಗೆ ದೂರು ನೀಡಿರುವುದಾಗಿ ಹೇಳುತ್ತಾರೆ.

ಈ ಮಧ್ಯೆ ಸಮಿತಿಯ ಆಡಳಿತಾಧಿಕಾರಿಯಾದ ಕುಮಟಾದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಏಳು ದಿನ ಕಾಲಾವಕಾಶ ಕೋರಿದ್ದು ,ಅಲ್ಲಿಯವರೆಗೆ ಜಂಬೆ ಮನೆತನದ ಅರ್ಚಕರೇ ನಿಗದಿಯಂತೆ ನಂದಿ ಮಂಟಪದಲ್ಲಿ ತೀರ್ಥ ,ಪ್ರಸಾದ ನೀಡುವ ಕಾರ್ಯ ನಡೆಸುವ ಜೊತೆ ಎತಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸದ್ಯ ಏಳು ದಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಗೋಪ ಕುಟುಂಬ ದೇವಸ್ಥಾನದ ಗರ್ಭಗುಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆದಿದೆ.
ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ – ಮೇಲ್ಮನವಿ ಅಂಗೀಕಾರ
ಸದ್ಯ ಪೊಲೀಸರ ,ಆಡಳಿತಾಧಿಕಾರಿಗಳ ಮಧ್ಯಸ್ಥಿಕೆಯಿಂದ ದೇವರ ಸನ್ನಿದಿಯಲ್ಲೇ ಆದ ಗಲಾಟೆ ತಾತ್ಕಾಲಿಕ ಶಮನಗೊಂಡಿದೆ.ಆದ್ರೆ ದೇವಸ್ಥಾನದ ಪ್ರತಿ ವಿಚಾರದಲ್ಲೂ ಅರ್ಚಕರುಗಳ ನಡುವೆ ಗಲಾಟೆಗಳು ಆಗುತ್ತಲೇ ಇದೆ.ಪ್ರತಿ ವಿಷಯಕ್ಕೂ ಕೋರ್ಟ ಮೆಟ್ಟಿಲೇರುತ್ತಿರುವ ಅರ್ಚಕರಿಂದಾಗಿ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ತೊಂದರೆಗಳಾಗುತ್ತಿದೆ. ದೇವಸ್ಥಾನದಲ್ಲಿ ಅರ್ಚಕ ವೃತ್ತಿಗಿಂತ ಅಲ್ಲಿ ಸಿಗುವ ಹಣವೇ ಮುಖ್ಯ ಎನ್ನುವಂತೆ ಅರ್ಚಕರು ನಡೆದುಕೊಳ್ಳುತಿದ್ದು ಆ ಮಹಾಬಲೇಶ್ವರನೇ ಇವರಿಗೆ ಒಳ್ಳೆ ಬುದ್ದಿ ನೀಡಲಿ ಎಂಬುದು ಭಕ್ತರ ಆಶಯ .







