Karnataka State Medical Supply Corporation which supplies veterinary medicine for human consumption

ಮನುಷ್ಯರ ಬಳಕೆಗೆ ಪಶುಔಷಧ ಪೂರೈಕೆ ಮಾಡಿದ ರಾಜ್ಯ ವೈದ್ಯಕೀಯ ಸರಬರಾಜು ನಿಗಮ!

88
GILANI super market karwar KSRTC bus stand near Karwar

ಬೆಂಗಳೂರು:- ಸರ್ಕಾರಿ ಆಸ್ಪತ್ರೆಗಳಿಗೆ ಕೋಟ್ಯಾಂತರ ರುಪಾಯಿಯ ಕಳಪೆ ಗುಣಮಟ್ಟದ ಗ್ಲುಕೋಸ್ ಪೂರೈಸಿ ಬ್ರಷ್ಟಾಚಾರ ಮಾಡಿದ್ದ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಇದೀಗ ಪಶುಗಳಿಗೆ ಬಳಸುವ ಔಷಧವನ್ನು ಮನುಷ್ಯರಿಗೆ ಬಳಸಲು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಅದೃಷ್ಟವಶಾತ್ ಯಾವುದೇ ಹಾನಿಯಾಗುವ ಮುನ್ನವೇ ಎಚ್ಚೆತ್ತುಕೊಂಡು ಪೂರೈಕೆಯಾಗಿರುವ ಔಷಧವನ್ನು ವಾಪಸ್ ಕಳುಹಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.

ಕಣ್ಣು, ಕಿವಿ, ಮೂಗಿಗೆ ಸಂಬಂಧಪಟ್ಟಂತೆ ವಿವಿಧ ಔಷಧ ಖರೀದಿಗಾಗಿ ನಿಗಮವು 2023ರ ಆಗಸ್ಟ್‌ನಲ್ಲಿ ಟೆಂಡ‌ರ್ ಪ್ರಕ್ರಿಯೆ ನಡೆಸಿತ್ತು.

ಟೆಂಡ‌ರ್ ಪಡೆದ ಖಾಸಗಿ ಕಂಪನಿ, ಕೋಟ್ಯಂತರ ರೂ. ಮೌಲ್ಯದ ಪಶುಗಳಿಗೆ ಬಳಸುವ ಔಷಧವನ್ನು ನಿಗಮಕ್ಕೆ ಪೂರೈಸಿ ಎಡವಟ್ಟು ಮಾಡಿದೆ. ನಿಗಮ ಇದನ್ನು ಗಮನಿಸದೆ ಎಲ್ಲ ಔಷಧಗಳನ್ನು ಔಷಧ ಉಗ್ರಾಣ ಮೂಲಕ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿದೆ. ಆದರೆ, ಖಾಸಗಿ ಕಂಪನಿ ಪೂರೈಸಿದ್ದ ಔಷಧದ ಮೇಲಿನ ಲೇಬಲ್‌ನಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಹೆಸರು ಇದೆ. ಅದನ್ನು ಮರೆಮಾಚಿ ಪೂರೈಸಲಾಗಿದೆ.

ಕೆಲವೊಂದು ಔಷಧಗಳ ಲೋಗೋಗ್ರಾಂ ವಿನ್ಯಾಸಕ್ಕೆ ಮಾಸ್ಕಿಂಗ್ ಮಾಡಿ ಕಳುಹಿಸಲಾಗಿದೆ.

ಇಂತಹ ಔಷಧಗಳನ್ನು ಹಿಂಪಡೆಯುವಂತೆ ಕೊಡಗಿನ ಔಷಧ ಉಗ್ರಾಣದವರು ಮೈಸೂರು ಮತ್ತು ಕೊಡಗು ಜಿಲ್ಲೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕಳಪೆ ಔಷಧ ಕೊಟ್ಟಿದ್ದ ನಿಗಮ 2015-16ರಿಂದ 2023-24ರವೆರೆಗೆ ನಿಗಮಕ್ಕೆ ಗ್ಲಕೋಸ್, ಚುಚ್ಚುಮದ್ದು, ಮಾತ್ರೆ, ವಿಟಮಿನ್ ‘ಸಿ’ ಟ್ಯಾಬ್ಲೆಟ್, ಸ್ಯಾನಿಟೈಸರ್, ಕಣ್ಣು, ಕಿವಿಗೆ ಹಾಕುವ ಡ್ರಾಪ್ಸ್ ಸೇರಿ ವಿವಿಧ ಬಗೆಯ 11 ಕಳಪೆ ಔಷಧ ಸರಬರಾಜು ಮಾಡಿರುವುದು ಬಹಿರಂಗವಾಗಿದೆ.

ಎನ್‌ಎಸ್‌ಕ್ಯೂ ಆಗಿರುವ ಔಷಧ ಬಗ್ಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟನ್ಸ್ (ಎನ್‌ಡಿಪಿಎಸ್) ಅಡಿ ಕಂಪನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಶಿಫಾರಸು ಮಾಡುತ್ತಿದೆ. ಕೆಲ ಕಂಪನಿಗಳು ಅಧಿಕಾರಿಗಳ ಜತೆ ಶಾಮೀಲಾಗಿ ಫೇಲ್ ಆಗಿರುವ ಔಷಧಗಳನ್ನು ಪಾಸ್ ಮಾಡಿಸುತ್ತಿರುವ ಬಗ್ಗೆಯೂ ಗುರುತರ ಆರೋಪಗಳಿವೆ.

2018ರಿಂದ 2022-23ರವರೆಗೆ ಕಳಪೆ ಮತ್ತು ನಕಲಿ ಔಷಧ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ 25 ಔಷಧ ತಯಾರಿಕ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ನಿಗಮಕ್ಕೆ ಸರಬರಾಜು ಮಾಡಿರುವ ಔಷಧಗಳನ್ನು ಔಷಧ ನಿಯಂತ್ರಣ ಇಲಾಖೆ, ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದೆ. ಈ ವೇಳೆ ಪ್ರಯೋಗಾಲಯದಲ್ಲಿ ನೂರಾರು ಔಷಧಗಳು ಉತ್ತಮ ಗುಣಮಟ್ಟದ್ದಲ್ಲ ಎಂದು ಪತ್ತೆಯಾಗುತ್ತಿದೆ.

ಟೆಂಡರ್ ಪಡೆದ ಕಂಪನಿ ನಿಯಮದಂತೆ ಸೋಡಿಯಂ ಕ್ಲೋರೈಡ್ (ನಾಸಲ್) ಡ್ರಾಪ್ಸ್, ಟಿಮೊಲೊಲ್ ಮಲೇಟ್ (ಡ್ರಾಪ್ಸ್), ಆಕ್ಸಿಮೆಟಾಜೋಲಿನ್ ಪೀಡಿಯಾಟ್ರಿಕ್ (ನಾಸಲ್), ಫರ್ಬಿಪ್ರೋಫೇನ್ ( ಐ-ಡ್ರಾಪ್ಸ್), ಆಕ್ಸಿಮೆಟಾಜೋಲಿನ್ ಹೈಡೋಕ್ಲೋರೈಡ್(ನಾಸಲ್‌) ಹಾಗೂ ಕಾರ್ಬಾಕ್ಸಿಮಿಥೈಲ್ ಲ್ಯುಲೋಸ್ (ಐ ಡ್ರಾಪ್ಸ್) ಔಷಧಗಳನ್ನು ಸರಬರಾಜು ಮಾಡಬೇಕಿತ್ತು. ಕಣ್ಣು, ಮೂಗು, ಕಿವಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಔಷಧಗಳನ್ನು ನೀಡಲಾಗುತ್ತದೆ. ಮನುಷ್ಯನಿಗೆ ನೀಡುವ ಯಾವುದೇ ಔಷಧಗಳ ಲೋಗೋಗ್ರಾಂ ಮೇಲೆ ‘ಕೆಎಸ್‌ಎಂಎಸ್‌ಸಿಎಲ್‌ -ನಾಟ್ ಫಾರ್ ಸೇಲ್’ ಎಂದು ನಮೂದಿಸಲಾಗುತ್ತದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!