


ಕಾರವಾರ: 85 ವರ್ಷದ ವೃದ್ಧೆ ಒಬ್ಬರೇ ಮನೆಯಲ್ಲಿದ್ದುದನ್ನು ಗಮನಿಸಿ ಮನೆಗೆ ನುಗ್ಗಿ ಅವರನ್ನು ಬೆದರಿಸಿ ಕೊರಳಲ್ಲಿದ್ದ ಸುಮಾರು ₹1.20 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹಳಿಯಾಳ (haliyala) ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:-Haliyala| ಪೊಲೀಸರಿಗೆ ಗೂಸ ನೀಡಿದ ಮಂಜಾ ಮಹರಾಷ್ಟ್ರ ಗಡಿಯಲ್ಲಿ ಬಂಧನ
ಹಳಿಯಾಳ ತಾಲೂಕಿನ ಹಂಪಿಹೊಳೆಯಲ್ಲಿ ಸೆಪ್ಟೆಂಬರ್ 7ರಂದು ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿತ್ತು. ಶಾಂತವ್ವ ಕೋಂ ದುರ್ಗಪ್ಪ ಕಮ್ಮಾರ (85) ಅವರು ತಮ್ಮ ಹಳೆಯ ಮನೆಯಲ್ಲಿದ್ದಾಗ, ಧಾರವಾಡದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಮಂಜುನಾಥ ಶಿವಾಜಿ ಜುಂಜವಾಡಕರ ಎಂಬಾತ ಮನೆಗೆ ಅಕ್ರಮವಾಗಿ ಪ್ರವೇಶಿಸಿ ವೃದ್ಧೆಯನ್ನು ಹೆದರಿಸಿದ್ದಾನೆ.
ನಂತರ ವೃದ್ಧೆಯ ಕೊರಳಲ್ಲಿದ್ದ ಬಂಗಾರದ 6 ಕೊಳವೆ, 4 ಗುಂಡುಗಳು ಹಾಗೂ 2 ತಾಳಿಗಳನ್ನು ಬ್ಲೇಡ್‌ನಿಂದ ಕತ್ತರಿಸಿ ಕಿತ್ತುಕೊಂಡು ಪರಾರಿಯಾಗಿದ್ದನು. ಇದನ್ನೂ ಓದಿ:-Haliyala|ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಾಜಿ ಸೈನಿಕನಿಗೆ ಲಕ್ಷಾಂತರ ಹಣ ವಂಚನೆ!
ಇದನ್ನೂ ಓದಿ:-Dandeli| ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಹೊಡೆದಾಟ ಕೊನೆಗೂ ಸಿಕ್ಕರು ಕುಡುಕ ಕುಚುಕುಗಳು!
ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಗಾಗಿ ಹಳಿಯಾಳ ಪೊಲೀಸರು ವಿಶೇಷ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು ಸೆಪ್ಟೆಂಬರ್ 10ರಂದು ಧಾರವಾಡ ಜಿಲ್ಲೆಯ ತಪೋವನ ನಗರದಲ್ಲಿ ಪ್ರಕರಣದ ಆರೋಪಿಗಳಾದ ಮಂಜುನಾಥ ಶಿವಾಜಿ ಜುಂಜವಾಡಕರ, ಸಾ. ಹಂಪಿಹೊಳೆ, ಹಳಿಯಾಳ ತಾಲೂಕು, ಹಾಲಿ ತಪೋವನ ನಗರ, ಧಾರವಾಡ ಹಾಗೂ ಅರ್ಜುನ್ ಬಸಪ್ಪ ಹಡಪದ, ಸಾ. ಹಳ್ಳಿಗೇರಿ, ಧಾರವಾಡ ಇವರನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ವೃದ್ಧೆಯ ಕೊರಳಲ್ಲಿದ್ದ ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಸುಮಾರು ₹1.20 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ₹50 ಸಾವಿರ ಮೌಲ್ಯದ ಕೆಎ-65 ಇಎನ್-2055 ನೋಂದಣಿ ಸಂಖ್ಯೆಯ ಎಚ್‌ಎಫ್ ಡಿಲಕ್ಸ್ ಮೋಟಾರ್ ಸೈಕಲ್‌ನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ, ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಭೀಮಣ್ಣ ಸೋರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರ್ ಕಾಂಬಳೆ (ಕಾ&ಸು), ಪಿಎಸ್‌ಐ ಮಹೇಶ ಮಾಳಿ (ತನಿಖೆ), ಜಗದೀಶ ಕುಂಬಾರ, ಶ್ರೀಶೈಲ್ ಜಿ.ಎಂ., ವಿನೋದ್ ಜಿ.ಬಿ., ಲಕ್ಷ್ಮಣ ಪೂಜಾರಿ, ನಿಂಗಪ್ಪ ಬಳ್ಳಾರಿ, ಮಂಜುನಾಥ ಬಾಲಿ, ಬಸವರಾಜ್ ತ್ಯಾಪಿ, ಬಸವರಾಜ್ ಚವಡಿ, ಸೋಹೇಲ್ ನಾಗನೂರ ಹಾಗೂ ಜೀಪ್ ಚಾಲಕರಾದ ಗಂಗಾಧರ ತಳಗಲಮನಿ ಮತ್ತು ಉಮೇಶ ತೇಲಿ ಅವರು ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಕರಣವನ್ನು ಪತ್ತೆಹಚ್ಚಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
