BREAKING NEWS
Search

ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿ ಪಾತ್ರಗಳಿಂದ ಮರಳು ತೆಗೆಯಲು ಶೀಘ್ರ ಅನುಮತಿ-ಮುಲ್ಲೈ ಮುಗಿಲನ್

1604

ಕಾರವಾರ :-ಕಾರವಾರ ಬಂದರು ಪ್ರದೇಶದಲ್ಲಿ ಸರ್ಕಾರಕ್ಕೆ ವಶಪಡಿಸಿಕೊಂಡು ದಾಸ್ತಾನು ಮಾಡಿರುವ ಕಬ್ಬಿಣದ ಅದಿರನ್ನು ಲೈವ್ ಬಿಡ್ ನಡೆಸಲು ಸಮಯ ನಿಗದಿಪಡಿಸಲಾಗಿದ್ದು, ಬಂದರು ಪ್ರದೇಶದಲ್ಲಿರುವ ಕಬ್ಬಿಣ ಅದಿರನ್ನು ಸಾಗಾಟ ಮಾಡುವಾಗ ಸಿ ಸಿ ಕ್ಯಾಮೆರಾ ಹಾಗೂ ಅಲ್ಲಿ ತೆರಳುವ ವಾಹನಗಳ ಸಂಖೆ,್ಯ ಸಮಯ ಇತ್ಯಾದಿ ಕ್ರಮಗಳೊಂದಿಗೆ ಸಾಗಾಣಿಕೆಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಟಾಸ್ಕಪೋರ್ಸ(ಗಣಿ) ಸಮಿತಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಸಮಿತಿ ಹಾಗೂ ಸಿ ಆರ್ ಜೆಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆ, ಬಂದರು ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆಯನ್ನು ಈಗಿನಿಂದಲೇ ಕೈಗೊಂಡು ಕಬ್ಬಿಣ ಅದಿರು ಸಾಗಾಟವನ್ನು ಸುಗಮಗೊಳಿಸಬೇಕೆಂದರು

ಮುಂದಿನ ಸಭೆಗೆ ಪೂರ್ಣ ತಯಾರಿಯೊಂದಿಗೆ ಕಾರ್ಯಸೂಚಿಯನ್ನು ಸಭೆಗೆ ಮಂಡಿಸುವಂತೆ ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇವರಿಗೆ ತಿಳಿಸುತ್ತಾ, ಅಸಮಾಧಾನ ವ್ಯಕ್ತಪಡಿಸಿದರು.

ಕಾರವಾರ ತಾಲೂಕು ವ್ಯಾಪ್ತಿಯ ಕಾಳಿ ನದಿ ಪಾತ್ರದಲ್ಲಿ 4 ಮರಳು ದಿಬ್ಬಗಳಿಂದ ಮರಳನ್ನು ತೆರವುಗೊಳಿಸಲು 42 ಸಾಂಪ್ರದಾಯಿಕವಾಗಿ ಮರಳನ್ನು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆ ವಿತರಿಸಲಾಗಿದೆ. ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿ ಪಾತ್ರಗಳಿಂದ ಗುರುತಿಸಲಾದ 11 ಮರಳು ದಿಬ್ಬಗಳಿಂದ ಮರಳನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ನಿರ್ವಹಣಾ ಪ್ರಾಧಿಕಾರ ದಿಂದ ನಿರಾಕ್ಷೇಪಣಾ ಪತ್ರ ಸ್ವೀಕೃತವಾಗಿರುವದರಿಂದ ಸದರಿ ಮರಳು ದಿಬ್ಬಗಳ ವಿಲೇವಾರಿಗೆ ಸಂಬಂಧಿಸಿದಂತೆ ಹಾಗೂ ಹೊಸದಾಗಿ ತಾತ್ಕಾಲಿಕ ಪರವಾನಿಗೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಲು ಸರ್ಕಾರದ ಏಕ ರೂಪ ಮಾರ್ಗಸೂಚಿಗಳು ಇನ್ನೂ ಎರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ ಎಂದು ಸಭೆಗೆ ತಿಳಿಸಿದರು.

ಕಲ್ಲು ಗಣಿ ಲೈಸನ್ಸ್ ಕೋರಿ ಸಲ್ಲಿಕೆಯಾದ ಅರ್ಜಿಗಳಿಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಸ್ಪಷ್ಟ ಶಿಫಾರಸ್ಸಿನೊಂದಿಗೆ ನಿರಾಕ್ಷೇಪಣಾ ಪತ್ರಗಳನ್ನು ನೀಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ವಾಹನಗಳಿಗೆ ಜಿಪಿಎಸ್ ಯಂತ್ರ ಅಳವಡಿಸಲು ಹಾಗೂ ಹಳೆಯ ವಾಹನ/ಮಾರಾಟ ಮಾಡಿದ ವಾಹನಗಳಿಂದ ಬೇರೆ ವಾಹನಗಳಿಗೆ ಜಿ ಪಿ ಎಸ್ ವರ್ಗಾಯಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವರದಿ ಪಡೆದು ಕ್ರಮವಹಿಸಲು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್ , ಡಿ ಎಫ್ ಒ ಗಣಪತಿ ಕೆ. ಸಹಾಯಕ ಆಯುಕ್ತರಾದ ರಾಹುಲ ಪಾಂಡೆ ಹಾಗೂ ಜಯಲಕ್ಷಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೆಶಕ ಎಸ್ ಸೋಮಶೇಖರ ಸೇರಿದಂತೆ ಇತರರು ಇದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!