ARECANUT PEST ALERT | ಅಡಿಕೆಗೆ ವಿಚಿತ್ರ ಕೀಟಬಾಧೆ -ಕೆಲವೇ ದಿನದಲ್ಲಿ ಎಕರೆಗಟ್ಟಲೇ ಹಸಿರು ತಿನ್ನುವ ಕೀಟಕ್ಕೆ ಬೇಕಿದೆ ಪರಿಹಾರ
PEST ALERT / ಉತ್ತರ ಕನ್ನಡ :-ಬಂಗಾರದ ಬೆಳೆ ಎಂದೇ ಖ್ಯಾತಿ ಗಳಿಸಿರುವ ಅಡಿಕೆಗೆ(arecanut) ಒಂದಲ್ಲಾ ಒಂದು ರೋಗಬಾಧೆ ಬರುತ್ತಲೇ ಇರುತ್ತವೆ.ಆದರೇ ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ವಿಚಿತ್ರ ಕೀಟವೊಂದು ಅಡಿಕೆ ಗಿಡಗಳಿಗೆ ದಾಳಿ ನಡೆಸುತಿದ್ದು ಇಡೀ ತೋಟವನ್ನೇ ನಾಶ ಮಾಡುವ ಜೊತೆ ಅರಣ್ಯ ನಾಶಕ್ಕೂ ಕಾರಣವಾಗುತ್ತಿದೆ. ಸಂಶೋಧಕರಿಗೂ ತಲೆನೋವಾಗಿರುವ ಈ ಕೀಟದ ನಿಖರ ಪ್ರಭೇದವನ್ನು ಇನ್ನೂ ದೃಢೀಕರಿಸಲಾಗಿಲ್ಲ. ತಜ್ಞರು ಅದರ ಗುರುತಿಸುವಿಕೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಹಾಗಿದ್ರೆ ಈ ಕೀಟ ಏನೆಲ್ಲಾ ಹಾನಿ ಮಾಡುತ್ತಿದೆ,ಇದರ ನಾಶಕ್ಕೆ ಪ್ರಾಥಮಿಕ ಮುಂಜಾಗ್ರತೆ ಏನು? ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.Siddapur| ₹2 ಸಾವಿರ ಕಳ್ಳತನಕ್ಕೆ ಎರಡು ಲಕ್ಷದ ಕಾರಿನಲ್ಲಿ ಬಂದ ಅಂತರ ಜಿಲ್ಲಾ ಕಳ್ಳರು ಲಾಕ್ !
ರಾಜ್ಯದಲ್ಲಿ ಅಡಿಕೆ ಬೆಳೆಗಾರರು 2025-26 ಅಂಕಿ ಅಂಶದ ಪ್ರಕಾರ ಸುಮಾರು 6,39,033 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತಿದ್ದಾರೆ. 9.05 ಲಕ್ಷ ಕೋಟಿ ಅಡಿಕೆ ರಾಜ್ಯದಲ್ಲಿ ಉತ್ಪತ್ತಿಯಾಗುತ್ತದೆ. ರಾಜ್ಯ ಸರ್ಕಾರಕ್ಕೆ 1,58,000 ಕೋಟಿ ಜಿ.ಎಸ್.ಟಿ (GST) ಈ ಬೆಳೆಯಿಂದಲೇ ಆಧಾಯ ಬರುತ್ತಿದೆ.ರಾಜ್ಯದಲ್ಲಿ ದಾವಣಗೆರೆ,ಶಿವಮೊಗ್ಗ ಜಿಲ್ಲೆಯು 1.5ಲಕ್ಷ ,ಚಿಕ್ಕಮಗಳೂರು-1.2 ಲಕ್ಷ , ಉತ್ತರ ಕನ್ನಡ ಜಿಲ್ಲೆ -1.1ಲಕ್ಷ , ದಕ್ಷಿಣ ಕನ್ನಡ -95,000,ಉಡುಪಿ- 70,000, ತುಮಕೂರು -94,000 ಹೆಕ್ಟೇರ್ ನಷ್ಟು ಅಡಿಕೆ ಬೆಳೆ ಇದೆ.ಇದಲ್ಲದೇ ಹೆಚ್ಚಿನ ಬೆಲೆ ಇರುವುದರಿಂದ ಪ್ರತಿ ವರ್ಷ ಹೆಕ್ಟೇರ್ ಗಟ್ಟಲೇ ಅಡಿಕೆ ತೋಟ ಮಾಡಲಾಗುತ್ತಿದೆ.

ಸಾಂಪ್ರದಾಯಿಕವಾಗಿ ಈ ಹಿಂದಿನಿಂದಲೂ ಉತ್ತರ ಕನ್ನಡ,ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಅಡಿಕೆ ಬೆಳೆ ಬೆಳೆದುಕೊಂಡು ಬರುತಿದ್ದು ಐತಿಹಾಸಿಕ ಹಿನ್ನಲೆ ಕೂಡ ಇದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ಮಟ್ಟಿಗೆ ಅಡಿಕೆ ಬೆಳೆ ಬೆಳೆಯುವುದು ಕೇವಲ ವಾಣಿಜ್ಯ ಉದ್ದೇಶಕ್ಕೆ ಅಲ್ಲ.ಬದಲಾಗಿ ಇದೊಂದು ಸಾಂಪ್ರದಾಯಿಕ ಕೃಷಿ ಕೂಡ ಹೌದು .ಆದರೇ ಅಡಿಕೆ ಬೆಳೆಗಾರರು ಬೆಲೆ ಏರಿಳಿತದ ಹೊಡೆತ, ಗುಟ್ಕಾ ಬ್ಯಾನ್ ನಂತಹ ಆರ್ಥಿಕ ವಧೆ ನಡೆದರೂ ಜೀವನೋಪಾಯಕ್ಕೆ ತುಂಡು ಭೂಮಿಯಲ್ಲಿ ಅಡಿಕೆಯನ್ನೇ ಸಾಂಪ್ರದಾಯಿಕ ಬೆಳೆಯನ್ನಾಗಿ ಬೆಳೆದುಕೊಂಡು ಬಂದಿದ್ದಾರೆ. ಈ ಹಿಂದೆ ಕೊಳೆರೋಗ,ಎಲೆಚುಕ್ಕೆ ರೋಗ,ಬೇರು ಹುಳು ಬಾಧೆಯಂತಹ ಸಂಕಷ್ಟದ ನಡುವೆ ತಮ್ಮ ತೋಟವನ್ನ ರಕ್ಷಿಸಿಕೊಂಡು ಬಂದಿದ್ದಾರೆ. ಆದರೇ ಇತ್ತೀಚಿನ ವರ್ಷದಲ್ಲಿ ಹವಾಮಾನ ಬದಲಾವಣೆಯಿಂದ ಕೀಟಸ್ಪೋಟದಂತಹ ಪ್ರಕೃತಿ ಬದಲಾವಣೆಯ ಹೊಡೆತ ಅಡಿಕೆ ಬೆಳೆಗಾರರನ್ನು ಮಾನಸಿಕ ಹಾಗೂ ಆರ್ಥಿಕವಾಗಿ ಕುಸಿಯುವಂತೆ ಮಾಡಿದೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಅಡಿಕೆ ಮರಗಳಿಗೆ ವಿಚಿತ್ರ ಕೀಟಬಾಧೆ ಕಾಣಿಸುತ್ತಿದೆ.ಈ ಊರಿನಲ್ಲಿ ಇದೀಗ ಕೆಲವು ವಾರಗಳಿಂದ ವಿಚಿತ್ರ ಕೀಟಗಳು ಅಡಿಕೆ ಮರಗಳಿಗೆ ದಾಳಿ ಇಡುತ್ತಿವೆ.ಮೊದಲು ಎಲೆಗಳ ಹಿಂಭಾಗದಲ್ಲಿ ರೇಷ್ಮೆ ಗೂಡುನಂತೆ ಬಲೆಹೆಣೆಯುವ ಕೀಟವು ಅಲ್ಲಿಯೇ ವಾಸಮಾಡಿ ಎಲೆಗಳನ್ನ ತಿನ್ನುತ್ತಿವೆ. ಹೀಗೆ ನಾಲ್ಕು ಹಂತದಲ್ಲಿ ವೃದ್ದಿಗೊಳ್ಳುವ ಈ ಕೀಟ ಇಡೀ ಅಡಿಕೆ ಮರದ ಎಲೆಗಳನ್ನ ತಿಂದು ತನ್ನ ಸಂತಾನೋತ್ಮತ್ತಿಯನ್ನ ಮಾಡುವ ಇವು ನಂತರ ಚಿಟ್ಟೆ ರೂಪ ಪಡೆದು ಹೊರಬರುತ್ತವೆ. ಹೀಗೆ ಹೊರಬಂದ ಕೀಟವು ಸುತ್ತಮುತ್ತಲು ಇರುವ ಅಡಿಕೆ ಸಸಿಗಳ ಎಲೆ ತಿಂದು ಅಡಿಕೆ ಗಿಡವನ್ನೇ ನಾಶ ಮಾಡುತಿದ್ದು ,ಮುಗದೂರಿನಲ್ಲಿ ಈಗಾಗಲೇ 20 ಎಕರೆ ಪ್ರದೇಶ ಅಡಿಕೆ ಮರಗಳು ಇವುಗಳಿಂದ ಬಾಧಿತವಾಗಿ ನಾಶವಾಗುವತ್ತ ಸಾಗಿದೆ.ಇದರಿಂದಾಗಿ ಮಳೆ ಕೊರತೆ,ಕೊಳೆರೋಗ ,ಬೇರುಹುಳು ಬಾಧೆ, ಚಂಡೆ ಒಣಗುವ ಹಾಗೂ ಎಲೆಚುಕ್ಕೆ ರೋಗದದ ಕಂಗಾಲಾಗಿರುವ ರೈತರು ಇದೀಗ ಈ ಕೀಟಬಾಧೆಯಿಂದ ಇರುವ ಬೆಳೆಯನ್ನೂ ಸಹ ಪಡೆಯಲಾಗದ ಸ್ಥಿತಿಯಲ್ಲಿ ಇದ್ದು ಸಂಕಷ್ಟ ಅನುಭವಿಸುವಂತೆ ಮಾಡಿದೆ.

ಮುಗದೂರಿನ ಅಡಿಕೆ ಬೆಳೆಗಾರ ರವಿ ಹೆಗಡೆಯವರು ತಮ್ಮ ತೋಟವನ್ನ ಮಕ್ಕಳಂತೆ ಪೋಷಿಸಿಕೊಂಡು ಬಂದಿದ್ದಾರೆ. ಇವರಿಗೆ ಇದುವೇ ಜೀವನಾದಾರ,ವರ್ಷದ ಆರ್ಥಿಕ ಉತ್ಪತ್ತಿ. ಆದರೇ ಈ ವಿಚಿತ್ರ ಕೀಟಗಳು ಇವರ ಸಂವೃದ್ಧ ತೋಟದ ಹಸಿರನ್ನ ನಾಶ ಮಾಡಿದೆ. ಚಿಕ್ಕ ಸಸಿಯಿಂದ ಹಿಡಿದು ದೊಡ್ಡ ಮರದ ಅಡಿಕೆಯ ಎಲೆಗಳು ಈ ಕೀಟಕ್ಕೆ ಆಹಾರವಾಗುತ್ತಿದೆ. ಹಾಗಂತ ಇವರು ಸುಮ್ಮನೇ ಕೂರದೇ ತೋಟಗಾರಿಕಾ ಇಲಾಖೆ,ಸಂಶೋಧಕರಿಗೂ ಇದರ ಬಗ್ಗೆ ಮಾಹಿತಿ ನೀಡಿ ಪರಿಹಾರದ ಬಗ್ಗೆ ಚರ್ಚಿಸಿದರು.ಸ್ಥಳಕ್ಕೆ ಬಂದ ವಿಜ್ಞಾನಿಗಳು ಇವುಗಳ ಬಗ್ಗೆ ಒಂದಿಷ್ಟು ಪರಿಹಾರ ನೀಡಿದರೂ ಉಪಯೋಗವಾಗಿಲ್ಲ . ತಮ್ಮ ತೋಟದ ಈಗಿನ ಸ್ಥಿತಿ ಕಂಡು ಮರಗುವ ಅವರು ಕೀಟಬಾಧೆ ತಡೆಗೆ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಮುಂದಿನ ವರ್ಷದ ಬೆಳೆಯ ಬಗ್ಗೆ ಆತಂಕ ವ್ಯಕ್ತಪಡಿಸುವ ಇವರು, ಅಡಿಕೆ ಮರಕ್ಕೆ ಎಲೆಗಳೇ ಜೀವ. ಇವುಗಳೇ ಆಹಾರ ಪೂರೈಕೆಯ ಮುಖ್ಯ ನಾಳ. ಇವುಗಳನ್ನ ತಿಂದು ಕೀಟಗಳು ನಂತರ ಚಿಟ್ಟೆಯಾಗಿ ಹಾರಿಹೋದರೇ,ಎಲೆಗಳು ಉದುರಿ ಮರ ಸಾಯುತ್ತದೆ.ಒಂದು ಅಡಿಕೆ ಸಸಿ ಬೆಳೆದು ಫಸಲು ಬಿಡಲು ಐದು ವರ್ಷ ಬೇಕು.ಐದು ವರ್ಷದ ಶ್ರಮ ಕೆಲವೇ ದಿನದಲ್ಲಿ ಮಣ್ಣುಪಾಲಾಗುತ್ತಿದೆ.ಹೀಗಾದರೇ ಇದನ್ನೇ ನಂಬಿ ವರ್ಷದ ಕೂಳಿಗೆ ಏನು ಮಾಡಬೇಕು ಎಂಬುದು ಇವರ ನೋವು.
ಇನ್ನು ಇದೇ ಊರಿನ ಇನ್ನೊಬ್ಬ ಬೆಳೆಗಾರ ಶ್ರೀಧರ್ ರವರ ನೋವೂ ಇದಕ್ಕೆ ಹೊರತಾಗಿಲ್ಲ.ವಿಜ್ಞಾನಿಗಳು ಈ ಪ್ರಬೇಧದ ಬಗ್ಗೆ ಸಂಶೋಧನೆ ಮುಂದುವರೆಸಿದ್ದಾರೆ, ಆದರೇ ಈಗ ಸೂಚಿಸಿರುವ ಕೀಟನಾಶಕವನ್ನು ರೈತರು ಸಿಂಪಡಿಸಿದರೂ ಕೀಟಗಳ ನಾಶದ ಪ್ರಮಾಣ ಕಮ್ಮಿ ಇದೆ. ಇದಲ್ಲದೇ ಈ ಕೀಟಗಳು ಹಗಲು ಗೂಡಿನಲ್ಲಿದ್ದು ರಾತ್ರಿ ವೇಳೆ ಹಸಿರು ಎಲೆಗಳನ್ನ ತಿನ್ನುತ್ತಿವೆ. ಇದಲ್ಲದೇ ಅಡಿಕೆ ಸಸಿಗಳ ಎಲೆ ತಿನ್ನುವ ಜೊತೆ ಬಾಳೆ ಗಿಡಗಳು ,ಕಾಡಿನ ಮೃದು ಎಲೆಗಳು ಈ ಕೀಟಗಳ ಆಹಾರವಾಗುತಿದ್ದು ಕೇವಲ ಅಡಿಕೆ ಗಿಡಗಳಲ್ಲದೇ ಮೃದು ಇರುವ ಮರಗಳ ಎಲೆಗಳನ್ನು ಸಹ ಇವು ತಿನ್ನುತಿದ್ದು , ಅಡಿಕೆ ಹಾಗೂ ಮರಗಿಡಗಳು ಎಲೆಗಳ ಮೂಲಕ ತಮ್ಮ ಆಹಾರ ಪೂರೈಕೆಗೆ ಅಡ್ಡಿ ಮಾಡುತ್ತಿವೆ. ಹೀಗಾಗಿ ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕು ಹಾಗೂ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಇವರ ಆಗ್ರಹ.
ಇದನ್ನೂ ಓದಿ:-Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರು
ದಕ್ಷಿಣ ಕನ್ನಡ ಜಿಲ್ಲೆಯ ನರ್ಸರಿಯೊಂದರಲ್ಲಿ ಪತ್ತೆಯಾದ ಈ ಹೊಸ ಪ್ರಬೇಧದ ಕೀಟ ನಂತರ ಬೆಂಗಳೂರಿನ ದಕ್ಷಿಣ ಜಿಲ್ಲೆಯ ಕನಕಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕಾಣಿಸಿಕೊಂಡಿದೆ. ಚಿಟ್ಟೆ ಜಾತಿಗೆ ಸೇರಿದ ಈ ಕೀಟವನ್ನು Acria sp ಎಂದು ಕರೆದರೇ ,ಸ್ಥಳೀಯವಾಗಿ ಎಲೆ ಕೊರಕ ಕೀಟ ಎಂದು ಕರೆಯಲಾಗುತ್ತಿದೆ.Lepidoptera(ಚಿಟ್ಟೆಗಳ ಜಾತಿ)
ವೈಜ್ಞಾನಿಕ ವರ್ಗದ ಕುಟುಂಬಕ್ಕೆ ಸೇರಿರುವುದು ಎಂದು ಹೇಳಲಾಗುತ್ತಿದೆ. ಹೊಸದಾಗಿ ಈ ಕೀಟ ಪತ್ತೆಯಾಗಿರುವುದರಿಂದ ಇದರ ಬಗ್ಗೆ ಸಂಶೋಧನೆ ನಡೆಸಲಾಗುತಿದ್ದು ಇವುಗಳ ನಿಯಂತ್ರಣದ ಬಗ್ಗೆ ವಿಜ್ಞಾನಿಗಳು ಸಹ ತಲೆಕೆಡಸಿಕೊಂಡಿದ್ದು , ಸಂಶೋಧನೆ ಮುಂದುವರೆಸಿದ್ದು ಸಧ್ಯ ತೋಟಗಾರಿಕಾ ಇಲಾಖೆಯಿಂದ ಕ್ಲೋರಾಂಟ್ರಾನಿಲಿಪ್ರೋಲ್ (Chlorantraniliprole) ಕೀಟನಾಶಕ ಬಳಸುವಂತೆ ಸೂಚನೆ ನೀಡಲಾಗಿದೆ ಎಂಬುದು ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರಾದ ಬಿ.ಪಿ ಸತೀಷ್ ರವರ ಮಾತು.
ಈ ಕೀಟವು ನಾಲ್ಕು ಹಂತದಲ್ಲಿ ವೃದ್ದಿಯಾಗುತ್ತಿದೆ. ಏಕಾಏಕಿ ತನ್ನ ಸಂಖ್ಯೆ ಹೆಚ್ಚಿಸಿಕೊಂಡು ಸಂತಾನವೃದ್ಧಿಮಾಡಿ ಮತ್ತಷ್ಟು ಹಸಿರನ್ನ ನಾಶ ಮಾಡುತ್ತಿದೆ. ಒಟ್ಟಿನಲ್ಲಿ ಕೀಟಸ್ಪೋಟದಿಂದಾಗಿ ವಿಚಿತ್ರ ಚಿಟ್ಟೆಯೊಂದು ಇದೀಗ ಸಿದ್ದಾಪುರ ಭಾಗದಲ್ಲಿ ರೈತರ ಬೆಳೆ ಹಾಗೂ ಅರಣ್ಯಕ್ಕೂ ಲಗ್ಗೆಯಿಟ್ಟು ,ಹಸಿರನ್ನ ನಾಶಮಾಡುತ್ತಿದ್ದು , ವರ್ಷವಿಡೀ ಬೆವರು ಸುರಿಸಿ ಬೆಳೆದ ಬೆಳೆ ಕಣ್ಣೆದುರೇ ನಾಯವಾಗುತಿದ್ದು ,ರೈತನ ತುತ್ತಿನ ಚೀಲಕ್ಕೆ ಕಂಟಕವಾಗಿದೆ.
ಈಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಮಾರ್ಗೋಪಾಯ ಕಲ್ಪಿಸದಿದ್ದರೇ ಮುಂದೊಂದು ದಿನ ಬಿಟ್ಟಿ ಭಾಗ್ಯ ನೀಡುತ್ತಿರುವ ಸರ್ಕಾರದ ಆಧಾಯಕ್ಕೂ ಕೊಕ್ಕೆ ಬೀಳುವುದರಲ್ಲಿ ಅನುಮಾನವಿಲ್ಲ.
