ಕಾರವಾರ:- ಸೆ.3 ರಂದು ಕಾರವಾರದಲ್ಲಿ ಮೀನುಗಾರ ಸಮುದಾಯದ ಬಾಳಂತಿ ಗೀತಾ ಬಾನವಾಳಿಕರ್ ಸಾವಿಗೆ ನಿರ್ದಿಷ್ಟವಾಗಿ ಇಂಥವರೇ ಹೊಣೆಗಾರರು ಎಂದು ಗುರುತಿಸಲು ಸಾಧ್ಯವಿಲ್ಲ’ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆಯಾಗಿದೆ.
ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ನೇತೃತ್ವದ ತನಿಖಾ ತಂಡವು ಕೆಲವು ದಿನಗಳ ಹಿಂದೆ ಈ ವರದಿಯನ್ನು ಸಲ್ಲಿಸಿದೆ.
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿ ತಂಡವಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಯಾರ ಬೇಜವಾಬ್ದಾರಿಯಿಂದ ಸಾವು ಸಂಭವಿಸಿದೆ ಎಂಬ ಬಗ್ಗೆ ಸ್ಪಷ್ಟವಾಗಿ ನಿರ್ಣಯಕ್ಕೆ ಬರುವುದು ಅಸಾಧ್ಯ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಸರ್ವೋದಯ ನಗರದ ಗೀತಾ (30) ಅವರು ಅ.31ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಅಂದಿನ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃಪಟ್ಟಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ನಗರದಲ್ಲಿ ಭಾರಿ ಪ್ರತಿಭಟನೆಗಳೂ ನಡೆದಿದ್ದವು. ಈ ಬಗ್ಗೆ ಸೆ.5ರಂದು ತನಿಖಾ ತಂಡ ರಚಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು.
ವರದಿಯಲ್ಲಿ ಉಲ್ಲೇಖವೇನು?
ಗೀತಾ ಅವರಿಗೆ ಹೆರಿಗೆಯ ನಂತರ ಹೃದಯಾಘಾತ ಆಗಿರಬಹುದು. ಶ್ವಾಸಕೋಶದಲ್ಲಿ ಸಮಸ್ಯೆ ಕಂಡುಬಂದಿರಬಹುದು. ಅದೇರೀತಿ, ಸಾವಿನ ಬಗ್ಗೆ ಅತಿಯಾದ ಭಯದಿಂದಲೂ ವ್ಯಕ್ತಿಯು ಮೃತಪಡುವ ಸಾಧ್ಯತೆ ಇದೆ, ಗೀತಾ ಅವರ ವಿಚಾರದಲ್ಲಿ ಹೀಗೂ ಆಗಿರಬಹುದು. ಆದ್ದರಿಂದ ಅವರ ಸಾವಿಗೆ ನಿರ್ದಿಷ್ಟವಾದ ಕಾರಣದ ಬಗ್ಗೆ ಸ್ಪಷ್ಟತೆಯಿಲ್ಲ’ ಎಂದು ವರದಿಯಲ್ಲಿ ಇರುವುದಾಗಿ ಗೊತ್ತಾಗಿದೆ.
ತನಿಖಾ ತಂಡದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದರು. ಹೃದ್ರೋಗ ತಜ್ಞರು, ಖಾಸಗಿ ಅರಿವಳಿಕೆ ತಜ್ಞರು ಮತ್ತು ಖಾಸಗಿ ಸ್ತ್ರೀರೋಗ ತಜ್ಞರು ಸಮಿತಿಯ ಸದಸ‌್ಯರಾಗಿದ್ದರು.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರ ಗಮನಕ್ಕೂ ಬಂದು ರಾಜಕೀಯ ರೂಪ ಪಡೆದಿತ್ತು.ಸೆ.30ರಂದು ಡಾ.ಶಿವಾನಂದ ಕುಡ್ತಕಲರ್ ಅವರನ್ನು ಯಾವುದೇ ನಿರ್ದಿಷ್ಟ ಸ್ಥಾನ ನೀಡದೇ ವರ್ಗಾಯಿಸಿ ರಾಜ್ಯ ಸರ್ಕಾರವು ಆದೇಶಿಸಿತ್ತು. ಆದರೆ, ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಸಲಹೆ ನೀಡಿದ ತನಿಖಾ ತಂಡ ಸಲಹೆ!
ರೋಗಿಗೆ ಪ್ರಮುಖ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ಔಷಧ ನೀಡುವಾಗ ತಜ್ಞರು ಕಡ್ಡಾಯವಾಗಿ ಹಾಜರಿರಬೇಕು. ಆದರೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಇರಲೇಬೇಕೆಂಬ ನಿಯಮವಿಲ್ಲ. ಆದರೂ ಅವರು ಅಲ್ಲಿರುವುದು ಉತ್ತಮ. ಹೆರಿಗೆಯಾದ ಆರು ದಿನಗಳ ನಂತರ ಬಾಣಂತಿಗೆ ಶೀತದಂಥ ಲಕ್ಷಣಗಳು ಕಂಡುಬರಬಹುದು. ಅವರ ಆರೋಗ್ಯದಲ್ಲಿ ಏರುಪೇರಾಗಬಹುದು. ಇದರ ಬಗ್ಗೆಯೂ ಎಚ್ಚರಿಕೆ ಅಗತ್ಯ ಎಂದು ಸಮಿತಿಯ ವರದಿಯಲ್ಲಿ ಸಲಹೆ ನೀಡಿದ್ದು ಸರ್ಜನ್ ರವರಿಗೆ ಕ್ಲೀನ್ ಚಿಟ್ ನೀಡಿದೆ.