

ಮಂಗಳೂರಿನಲ್ಲಿ ₹1.15 ಕೋಟಿ ಹವಾಲ ಹಣ ದರೋಡೆ ಪ್ರಕರಣ: ಕಾರವಾರದ ಪೊಲೀಸ್ ಪೇದೆ ಬಂಧನ.
ಕಾರವಾರ: ಮಂಗಳೂರಿನಲ್ಲಿ(mangalur ) ನಡೆದ 1.15 ಕೋಟಿ ರೂಪಾಯಿ ಹವಾಲ ಹಣ ದರೋಡೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಪೊಲೀಸ್ ಪೇದೆಯೊಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್ ಬಂಧಿತ ಪೊಲೀಸ್ ಪೇದೆ. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಸಂಚು ರೂಪಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ ಹವಾಲ ಹಣವನ್ನು ದರೋಡೆ ಮಾಡುವ ಉದ್ದೇಶದಿಂದ ಸತ್ಯನಾರಾಯಣ ಎಂಬುವವರನ್ನು ಅಪಹರಿಸಿ, 1.15 ಕೋಟಿ ರೂಪಾಯಿ ಹಣವನ್ನು ದೋಚಲಾಗಿತ್ತು. ಈ ಸಂಬಂಧ ಸತ್ಯನಾರಾಯಣ ಅವರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಪೊಲೀಸರು ತನಿಖೆ ಕೈಗೊಂಡಿದ್ದರು.Karwar | ಕೋಡಿಬಾಗ ಸೇತುವೆಯಿಂದ ಹಾರಲು ಯತ್ನಿಸಿದ ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ
ತನಿಖೆ ವೇಳೆ ಸತ್ಯನಾರಾಯಣ ಅವರ ಅಪಹರಣದ ಹಿಂದೆ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ನ ಸಂಚು ಇರುವುದು ಬಯಲಾಗಿದೆ ಎನ್ನಲಾಗಿದೆ. ಕಾರವಾರದ (karwar)ಯುವಕರನ್ನು ಬಳಸಿಕೊಂಡು ಅಪಹರಣಕ್ಕೆ ಯೋಜನೆ ರೂಪಿಸಿದ್ದ ಆರೋಪ ಶ್ರೀಶೈಲ್ ಮೇಲಿದೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಬಳಸಿಕೊಂಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಗಣೇಶ ಕೋಳಂಕರ್ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪೇದೆ ಅಮಾನತು.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಸ್ಟೇಬಲ್ ಶ್ರೀಶೈಲ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಅಮಾನತುಗೊಳಿಸಿದ್ದಾರೆ.
ಹವಾಲ ಹಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಹೆಸರು ಕೇಳಿಬಂದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
