rajyotsava award 2026 |ಕಾರವಾರ :- ಉತ್ತರ ಕನ್ನಡ(uttara kannada) ಜಿಲ್ಲೆಯ ಮಟ್ಟಿಗೆ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಹಿಡಿದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವರೆಗೆ ಜಿಲ್ಲೆಯ ಜನರಿಗೆ ಅನ್ಯಾಯವನ್ನೇ ಮಾಡಿಕೊಂಡು ಬಂದಿದೆ. ಇದೀಗ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುವುದರಲ್ಲೂ ಅನ್ಯಾಯ ಮಾಡಿ ತನ್ನ ವರಸೆಯನ್ನು ಮುಂದುವರೆಸಿದೆ.
ಹೌದು ಈ ಬಾರಿ ರಾಜ್ಯಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಕೋಟಾ ದಲ್ಲಿ ನೆರೆಯ ಉಡುಪಿ ಜಿಲ್ಲೆಯ ಮೂಲತಹಾ ಚಿಕ್ಕಮಗಳೂರಿನ ಡಾ.ಎಸ್.ಚಂದ್ರಶೇಖರ್ ರವರಿಗೆ ಸಮಾಜಸೇವೆ ಅಡಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹಾಗಂತ ಇವರು ಆ ಗೌರವಕ್ಕೆ ಅರ್ಹರಲ್ಲ ಎಂದಲ್ಲ. ಆದರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತಹ ವ್ಯಕ್ತಿತ್ವ ಹಾಗೂ ಸಾಧನೆ ಮಾಡಿದವರು ಇಲ್ಲವೇ ? ಅಥವಾ ನಾವು ಆಯ್ಕೆ ಮಾಡಿ ಕಳುಹಿಸಿದ ಐದು ಜನ ಕಾಂಗ್ರೆಸ್ ಶಾಸಕರಿಗೆ ನಮ್ಮ ಜಿಲ್ಲೆಯ ಪರ ಧ್ವನಿ ಎತ್ತದಷ್ಟು ಧ್ವನಿಯೇ ಅಡಗಿ ಹೋಗಿದೆಯೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆ ಕಲೆ,ಸಾಹಿತ್ಯ,ರಾಜಕೀಯದಲ್ಲಿಯೂ ತನ್ನದೇ ಆದ ಸ್ಥಾನ ಪಡೆದಿದೆ. ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದವರು ಇದ್ದಾರೆ. ಆದರೇ ಇವೆಲ್ಲವನ್ನೂ ಬಿಟ್ಟು ಉತ್ತರ ಕನ್ನಡ ಜಿಲ್ಲೆಯ ಕೋಟ ಬೇರೆ ಜಿಲ್ಲೆಯ ಪಾಲಾದರೇ ಇದು ಎಷ್ಟು ಸರಿ.? ಅಷ್ಟಕ್ಕೂ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಮೂಲಕವೇ ಆಯ್ಕೆ ಮಾಡಿರುವುದು ನಮ್ಮ ಜಿಲ್ಲೆಯ ಜನರಿಗೆ ದ್ರೋಹ ಮಾಡಿದಂತೆ ಅಲ್ಲವೇ ? ಆಯ್ಕೆ ಸಮಿತಿ ನಿರ್ಧಾರಕ್ಕೆ ಆಡಳಿತ, ಜನಪ್ರತಿನಿಧಿಗಳು ಮಾತನಾಡದೇ ಇರುವುದು ಏಕೆ? ನಮ್ಮ ಜಿಲ್ಲೆಯ ಜನರ ಒಬ್ಬ ಹೆಸರನ್ನೂ ಆಯ್ಕೆ ಸಮಿತಿಗೆ ಕಳುಹಿಸದಷ್ಟು ಈ ಜಿಲ್ಲೆ ನಿಷ್ಕ್ರಿಯವೇ? ಅಥವಾ ಏನು ಮಾಡಿದರೂ ಜನ ಸಹಿಸಿಕೊಳ್ಳುತ್ತಾರೆ ಎಂಬ ದುರಾಲೋಚನೆಯೇ ಎಂಬ ಬಗ್ಗೆ ಜನಪ್ರತಿನಿಧಿಗಳೇ ಉತ್ತರ ಕೊಡಬೇಕಿದೆ.
ಡಾ.ಎಸ್ .ಚಂದ್ರಶೇಖರ್ ಯಾರು

ಇನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಡಾ.ಎಸ್ .ಚಂದ್ರಶೇಖರ್ ಯಾರು ಎಂಬ ಪ್ರಶ್ನೆ ಜಿಲ್ಲೆಯ ಬಹುತೇಕ ಜನರಲ್ಲಿದೆ. ಇವರ ಬಗ್ಗೆ ಒಂದಿಷ್ಟಿ ಮಾಹಿತಿ ಇಲ್ಲಿದೆ.
ಡಾ|| ಜಿ. ಎಸ್. ಚಂದ್ರಶೇಖರ್ ರವರು ಚಿಕ್ಕಮಂಗಳೂರು ಜಿಲ್ಲೆಯ ತರಿಕೆರೆ ತಾಲ್ಲೂಕು ಅಜ್ಜಂಪುರ ಹೋಬಳಿ ಶ್ರೀ ಸಿದ್ದರಾಮಪ್ಪ ಹಾಗೂ ಗೌರಮ್ಮ ದಂಪತಿಯ ಹಿರಿಯ ಪುತ್ರರಾಗಿ 1966ನೇ ಇಸವಿಯಲ್ಲಿ ಜನಿಸಿದರು. ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ತರಿಕೆರೆ ಗೆಜ್ಜೆಗೊಂಡನ ಹಳ್ಳಿಯಲ್ಲಿ ಮುಗಿಸಿ. ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ತಿಪಟೂರು ಹಾಗೂ ತುಮಕೂರಿನಲ್ಲಿ ಪಡೆದರು. ಇವರು ವೈದ್ಯಕೀಯ ಪದವಿ ಶಿಕ್ಷಣವನ್ನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಮೆರಿಟ್ ಆಧಾರದಲ್ಲಿ ಮುಗಿಸಿ, ಸ್ನಾತಕೋಡ್ರರ ಪದವಿಯನ್ನು (ಮೆಡಿಸಿನ್ ವಿಭಾಗದಲ್ಲಿ) ಸರಕಾರಿ ಮೈಸೂರು ಮೆಡಿಕಲ್ ಕಾಲೇಜನಲ್ಲಿ 1991ರಲ್ಲಿ ಮುಗಿಸಿದರು. ಸಿದ್ಧಾರ್ಥ ಮೆಡಿಕಲ್ ಕಾಲೇಜು ತುಮಕೂರಿನಲ್ಲಿ ಅಲ್ಪಾವಧಿ ಸೇವೆ ಸಲ್ಲಿಸಿದ ನಂತರ ಕೆಪಿಎಸ್ಸಿ ಮುಖಾಂತರ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು.
ವೈದ್ಯಕೀಯ ಸೇವೆ ಎಂದರೆ ದೇವರು ಮೆಚ್ಚುವಂತೆ ಮಾಡುವ ಮಲನುಕುಲದ ಸೇವೆ ಎಂಬುದನ್ನು ವೃತ್ತಿ ಜೀವನದಲ್ಲಿ ಬಲವಾದ ನಂಬಿಕೆಯನ್ನು ಹೊಂದಿ, ರೋಗಿಗಳ ಮೇಲೆ ಅವರು ತೋರುವ ವಿಶೇಷ ಕಾಳಜಿ, ಮಮತೆ, ಸೇವಾಮನೋಭಾವ, ಅನುಕಂಪನೀಯ ಹಾಗೂ ಮಾನವೀಯ ಸ್ಪರ್ಶ ಮತ್ತು 20 ವರ್ಷಗಳ ನಿರಂತರ ಸೇವೆಯು ಅವರನ್ನು ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೇ ಅಸುಪಾಸಿನ ಜಿಲ್ಲೆಗಳಾದ ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕೂಡ ಹೆಸರುವಾಸಿಗೊಳಿಸುವಂತೆ ಮಾಡಿದೆ.
2000 ರಲ್ಲಿ ಸ್ವಂತ “ಆದರ್ಶ ಆಸ್ಪತ್ರೆ’ಯನ್ನು ಸ್ಥಾಪಿಸಿದರು. ಸಮಾಜದ ಎಲ್ಲಾ ಜನರ ಪ್ರೋತ್ಸಾಹದಿಂದ ಆಸ್ಪತ್ರೆಯು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿದ್ದು, ಅಲ್ಪಕಾಲಾವಧಿಯಲ್ಲಿ ಅತ್ಯಂತ ಹೆಸರುವಾಸಿಯಾಗಿರುತ್ತದೆ ಹಾಗೂ ಆಸ್ಪತ್ರೆಯು 100 ಹಾಸಿಗೆಗಳನ್ನೊಳಗೊಂಡಿದ್ದು, ಅತ್ಯಾಧುನಿಕ ಸಕಲ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಆಸ್ಪತ್ರೆಯೆಂದು ಹೆಸರುಗಳಿಸಿದೆ. ಸೌಲಭ್ಯ ಬಯಸಿ ಬರುವ ವಿವಿಧ ತರದ ರೋಗಿಗಳ ಉತ್ತಮ ಸೌಲಭ್ಯಕ್ಕಾಗಿ ಹಾಗೂ ಸಾರ್ವಜನಿಕರು ಮತ್ತು ಅವಶ್ಯಕತೆ ವುಳ್ಳವರಿಗೆ ಬೇಡಿಕೆ ಪೂರೈಸುವ ದೃಷ್ಟಿಯಿಂದ 2015ರಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 2೦೦ ಹಾಸಿಗೆಗಳ ಸೌಲಭ್ಯ ಒದಗಿಸಲಾಯಿತು. ಅಲ್ಲದೆ ಹೃದಯ ರೋಗ ವಿಭಾಗ ಪ್ರಾರಂಭಿಸಿ ಕಾರ್ಡಿಯಾಕ್ ಕ್ಯಾಥೆಟರೈಸೇಶನ್ ಲ್ಯಾಬೋರೇಟರಿಯನ್ನು ಪ್ರಾರಂಭಿಸಲಾಯಿತು. ಅಲ್ಲದೆ ನ್ಯೂರೋಸರ್ಜರಿ, ಗ್ಯಾಸ್ಟೋಎಂಟರಾಲಜಿ, ನೆಪ್ರೋಲಜ, ಓಂಕಾಲಜಿ ವಿಭಾಗಗಳನ್ನು ಪ್ರಾರಂಭಿಸಲಾಯಿತು. ಆಸ್ಪತ್ರೆಯಲ್ಲಿ, ಸರಕಾರದ ಯೋಜನೆಗಳಾದ ಯಶಸ್ವಿನಿ, ವಾಜಪೇಯಿ ಆರೋಗ್ಯ ಯೋಜನೆ, ಜ್ಯೋತಿ ಸಂಜೀವಿನಿ, ಆರೋಗ್ಯ ಭಾಗ್ಯ ಯೋಜನೆ ಹಾಗೂ ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಜನರಿಗೆ ನಿರಂತರ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೇ ಬಡವರಿಗೆ, ಆಧುನಿಕ ಸೌಲಭ್ಯವಿಲ್ಲದವರಿಗೆ ವಿಶೇಷ ವೈದ್ಯಕೀಯ ನೆರವು ಹಾಗೂ ವಿಶ್ವತ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.
ಇದನ್ನೂ ಓದಿ:-Sirsi |ಶಿರಸಿ ಯುವಕರಿಂದ ಹೊಸ ತಂತ್ರಜ್ಞಾನ ಆವಿಷ್ಕಾರ: ಕಾಡಿನಲ್ಲೂ ಸಿಗಲಿದೆ 4G ನೆಟ್ವರ್ಕ್!
ಇವರ ನಿರಂತರ ಸಾಧನೆಯಲ್ಲಿ ಇವರ ಧರ್ಮಪತ್ನಿ ಐಮಲಾಚಂದ್ರಶೇಖರ್ರವರ ಪಾತ್ರ ಹಿರಿದು, ತ್ಯಾಗ ಮನೋಭಾವದಿಂದ ಗಂಡನ ಸೇವೆಯಲ್ಲಿ ಬೆನ್ನೆಲುಬಾಗಿ ತಮ್ಮ ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು ಸಹಾನ್ ಹಾಗೂ ಸುದೀಪ್. ಇವರಿಬ್ಬರೂ ಅಪ್ರತಿಮ ಪ್ರತಿಭಾವಂತರಾಗಿದ್ದಾರೆ.
ಚಿಕ್ಕಂದಿನಲ್ಲಿ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಡಾ| ಜಿ.ಎಸ್. ಚಂದ್ರಶೇಖರ್ ರವರು ಈ ಸಮಾಜಕ್ಕೆ ತಾನೇನಾದರೂ ವಿಶೇಷವಾದ ಕೊಡುಗೆಯನ್ನು ನೀಡಬೇಕೆಂಬ ವಿಶೇಷ ಹಂಬಲವನ್ನು ಹೊಂದಿದವರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹಲವಾರು ಶಿಬಿರಗಳನ್ನು ನಡೆಸಿ, ಉಚಿತವಾಗಿ ಪರೀಕ್ಷೆಗಳನ್ನು ನಡೆಸಿ, ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಸರಿಸುಮಾರು 10೦೦ಕ್ಕಿಂತಲೂ ಅಧಿಕ ವೈದ್ಯಕೀಯ ಶಿಬಿರಗಳನ್ನು ನಡೆಸಿದ ಕೀರ್ತಿ ಇವರದ್ದು, ಅಲ್ಲದೇ ಜಿಲ್ಲೆಯ ಮೂಲೆ ಮೂಲೆಯ ಹಳ್ಳಿಗಳಲ್ಲಿ ಮನೆಮನೆಗೆ ಭೇಟಿ ನೀಡಿ. ಸ್ಥಳದಲ್ಲಿಯೇ ಡಯಾಬಿಟೀಸ್ ಹಾಗೂ ರಕ್ತದೊತ್ತಡ ಕಾಯಿಲೆಗಳನ್ನು ತಪಾಸಿಸಿ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ.
ಆದರ್ಶ ಆಸ್ಪತ್ರೆಯನ್ನು ಪ್ರಾರಂಭಿಸಿದ ನಂತರ ಆಸ್ಪತ್ರೆಯ ಆವರಣದಲ್ಲಿಯೇ ಸಮಾಜದ ಎಲ್ಲಾ ವರ್ಗದ ಜನರಿಗೆ ವಿಶೇಷ ವೈದ್ಯಕೀಯ ಶಿಬಿರಗಳನ್ನು ಆಯೋಚಿಸಿ ರಕ್ತಪರೀಕ್ಷೆ,_ECG (ಹೃದಯದ ಸ್ಕ್ಯಾನಿಂಗ್) ಪರೀಕ್ಷೆಗಳನ್ನು ಉಚಿತವಾಗಿ ಮಾಡಿ ಡಯಾಬಿಟೀಸ್, ರಕ್ತದೊತ್ತಡ, ಹೃದಯದ ಕಾಯಿಲೆ, ಮೂಳೆ ಸವೆದ ಹಾಗೂ ನರರೋಗ ಸಂಬಂಧಿ ಕಾಯಿಲೆಗಳ ಬಗ್ಗೆ ವಿಶೇಷ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಸಾಮಾನ್ಯ ಕಾಯಿಲೆಗಳಾದ ಡಯಾಟಿಟಿಸ್, ರಕ್ತದೊತ್ತಡ, ಹೃದಯದ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೋಲೀಸ್ ಹಾಗೂ ಕುಟುಂಬದವರಿಗೆ, ಬ್ಯಾಂಕ್ ನೌಕರರಿಗೆ ಹಾಗೂ ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಉಚಿತ ವೈದ್ಯಕೀಯ ತಪಾಸಣೆ, ರಕ್ತಪರೀಕ್ಷೆಗಳನ್ನು ಮಾಡಿಸಿ ಉಪಯುಕ್ತ ಸಲಹೆ ನೀಡುವ ಮೂಲಕ ನೆರವಾಗಿದ್ದಾರೆ. ಈ ಎಲ್ಲಾ ಸಾಧನೆಗೆ ಸಮಾಜಸೇವೆ ವಿಭಾಗದಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
