
ಸಾಗರ: ವಿದ್ಯುತ್ ತಂತಿ ಹಾಯಿಸಿ ಎರಡು ಗಂಡು ಜಿಂಕೆಗಳನ್ನು ಬೇಟೆಯಾಡಿ, ಅವುಗಳ ಮಾಂಸವನ್ನು ಬೇಯಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ:-http://Sagar
ಸಾಗರ (sagar) ತಾಲೂಕಿನ ನಾಗವಳ್ಳಿ ಗ್ರಾಮದ ಷಾಜಿ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಗಳು ಜಿಂಕೆಗಳನ್ನು ಬೇಟೆಯಾಡಿದ ಬಳಿಕ ಮಾಂಸವನ್ನು ತಯಾರಿಸಿದ್ದು, ಅದರ ಒಂದು ಭಾಗವನ್ನು ಬೇಯಿಸಿ ಸಾಂಬಾರ್ ಸೇರಿದಂತೆ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಉಳಿದ ಮಾಂಸ ಹಾಗೂ ಕಳೆಬರಹವನ್ನು ಮಣ್ಣಿನಲ್ಲಿ ಹೂತು ಹಾಕಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾನು, ಶಿವು ಹಾಗೂ ಮಹೇಶ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಷಾಜಿ, ರಾಮ ಹಾಗೂ ಶ್ರೀಧರ ಎಂಬ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ, ಕಾರ್ಗಲ್ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ್ ಸಿ.ಬಿ. ಹಾಗೂ ಶರಾವತಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಧನಂಜಯ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ ತೋಳಬಂದಿ, ಕಿರಣ ಎ. ಬಿದರಳ್ಳಿ, ಸಂಧ್ಯಾ ಎಸ್., ಗಸ್ತು ಅರಣ್ಯ ಪಾಲಕ ದೀಪಕ ಎಸ್. ಪ್ರಭು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
