ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ತೂಗುಸೇತುವೆ ನಿರ್ಮಿಸಿದ ಬ್ರಿಡ್ಜ್ ಮ್ಯಾನ್ ಅಸ್ತಂಗತ.
ಕಾರವಾರ/ಮಂಗಳೂರು:- “ತೂಗುಸೇತುವೆಗಳ ಸರದಾರ”, ದೇಶದ ಹೆಮ್ಮೆಯ “ಬ್ರಿಡ್ಜ್‌ಮ್ಯಾನ್”, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಿರೀಶ್ ಭಾರದ್ವಾಜ್ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮುಂಜಾನೆ ತೀವ್ರ ಅಸ್ವಸ್ಥಗೊಂಡ ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ:-Ankola| ಅಂಕೋಲದಲ್ಲಿ ನಾಡಬಾಂಬ್ ತೆಗೆದುಕೊಂಡು ಹೋದ ಮೃತ ನಾಗೇಂದ್ರ|ರಮ್ಯಾಳಿಂದ ಲವ್ ಸ್ಟೋರಿ ರಿವೀಲ್
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದ ಭಾರದ್ವಾಜ್ ಅವರು ಆರಂಭದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಕನಸು ಕಂಡಿದ್ದರು. ಬಳಿಕ ಆ ಕನಸಿಗೆ ವಿದಾಯ ಹೇಳಿ ಗ್ರಾಮೀಣ ಜನರ ಬದುಕನ್ನು ಸುಗಮಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಸೇತುವೆ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟರು. ‘ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್’ ಸ್ಥಾಪಿಸಿದ ಅವರು, ದೂರದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನೂರಾರು ಸೇತುವೆಗಳನ್ನು ನಿರ್ಮಿಸಿ ಜನಮನ ಗೆದ್ದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ,ಹೊನ್ನಾವರ ,ಜೋಯಿಡಾ ಭಾಗ ಸೇರಿದಂತೆ ಮಂಗಳೂರು ಹಾಗೂ ರಾಜ್ಯದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರು ನಿರ್ಮಿಸಿದ ತೂಗುಸೇತುವೆಗಳು ಸಾವಿರಾರು ಕುಟುಂಬಗಳ ಜೀವನವನ್ನು ಸುಲಭಗೊಳಿಸಿವೆ. ಸುಳ್ಯದ ಮಂಡೆಕೋಲಿನಲ್ಲಿ ನಿರ್ಮಾಣಗೊಂಡ ಅವರ 100ನೇ ತೂಗುಸೇತುವೆ ವಿಶೇಷ ಗಮನ ಸೆಳೆದಿತ್ತು. ಈ ಸಾಧನೆಯಿಂದ ಗ್ರಾಮಸ್ಥರು ಅವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಹಾಗೂ ‘ಸೇತುವೆಗಳ ಸರದಾರ’ ಎಂದು ಕರೆಯುತ್ತಿದ್ದರು.
ಯಾವುದೇ ಆಧುನಿಕ ತಂತ್ರಜ್ಞಾನದ ಅಬ್ಬರವಿಲ್ಲದ ಕಾಲದಲ್ಲೂ ಅತ್ಯಂತ ಕಡಿಮೆ ವೆಚ್ಚದಲ್ಲಿ ದೇಶದಾದ್ಯಂತ 140ಕ್ಕೂ ಹೆಚ್ಚು ಗ್ರಾಮೀಣ ಭಾಗಗಳನ್ನು ಬೆಸೆಯುವ ತೂಗುಸೇತುವೆಗಳನ್ನು ನಿರ್ಮಿಸಿದ ಇವರ ಸಾಧನೆ ಅಪ್ರತಿಮವಾದದ್ದು. ಸುಳ್ಯದ ಮಣ್ಣಿನಿಂದ ಮೂಡಿಬಂದ ಇವರ ನಿಸ್ವಾರ್ಥ ಸೇವೆಗೆ ದೇಶವು ‘ಪದ್ಮಶ್ರೀ’ ನೀಡಿ ಗೌರವಿಸಿತ್ತು. ಇವರ ಅಗಲಿಕೆಯಿಂದ ದೇಶವು ಒಬ್ಬ ಶ್ರೇಷ್ಠ ಸಮಾಜಸೇವಕ ಹಾಗೂ ತಂತ್ರಜ್ಞನನ್ನು ಕಳೆದುಕೊಂಡಂತಾಗಿದೆ.
