BREAKING NEWS
Search

Bhatkal ಧ್ವಜ ದಂಗಲ್ ! ಮತ್ತೆ ನಿರ್ಮಾಣವಾಯ್ತು ವೀರ ಸಾವರ್ಕರ್ ಧ್ವಜಕಟ್ಟೆ -ಧ್ವಜವೇರಿಸಲು 15 ದಿನ ಗಡುವು! ಏನಿದು ವಿವಾದ?

93

ಕಾರವಾರ ಜನವರಿ 30:-ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ( flag )ವಿವಾದ ಬುಗಿಲೆದ್ದ ನಡುವೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವೀರ ಸಾವರ್ಕರ್ ಹೆಸರಿನ ಧ್ವಜಕಟ್ಟೆ ವಿವಾದ ನಡೆದಿದೆ. ತಾಲೂಕಿನ ತೆಂಗಿನಗುಂಡಿಯಲ್ಲಿ ನಿರ್ಮಿಸಿದ ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟೆಯನ್ನ ಗ್ರಾಮ ಪಂಚಾಯತ್ ತೆರವುಗೊಳಿಸಿರುವುದು ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಲ್ಲಿ ಏನಾಯ್ತು? ಯಾಕೀ ವಿವಾದ ?ಇಲ್ಲಿದೆ ಅದರ ಸತ್ಯಾಸತ್ಯೆತೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೆ ಧ್ವಜ ವಿವಾದ ತಾರಕಕ್ಕೆ ಏರಿದೆ. ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜದ ವಿವಾದ ಈಗ ಎಲ್ಲೆಡೆ ಬುಗಿಲೆದ್ದ ಬೆನ್ನಲ್ಲೇ ಇದೀಗ ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ ವೃತ್ತದಲ್ಲಿ ನಿರ್ಮಿಸಿದ್ದ ಕಟ್ಟೆಯನ್ನ ಗ್ರಾಮ ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಈ ಹಿಂದೆ ಗ್ರಾಮಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಾವರ್ಕರ್ (savarkar)ಧ್ವಜಸ್ತಂಬ ನಿರ್ಮಿಸಲು ಸರ್ವ ಸದಸ್ಯರು ಒಪ್ಪಿಗೆ ನೀಡಿದ್ದರು.
ಹೀಗಾಗಿ ಜನವರಿ 21ರಂದು ಸ್ಥಳೀಯ ಯುವಕರು ಧ್ವಜ ಕಟ್ಟೆಯನ್ನ ನಿರ್ಮಿಸಿದ್ದರು. ಜೊತೆಗೆ ಅನುಮತಿ ಪಡೆಯದೇ ಸಾವರ್ಕರ್ ನಾಮಫಲಕ ಅಳವಡಿಸಿ ,ಭಗವಧ್ವಜ ಹಾರಿಸಿದ್ದರು.ಇನ್ನು ಭಗವದಧ್ವಜ ಹಾಗೂ ನಾಮಫಲಕ ಹಾಕಿದ್ದರಿಂದ ಅನುಮತಿ ಇರದ ಕಾರಣ ಗ್ರಾಮ ಪಂಚಾಯತ್ ಅಧಿಕಾರಿಗಳು ಫಲಕವನ್ನು ತೆರವುಗೊಳಿಸುವ ಬದಲು ,ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರೂ ಒಪ್ಪಿದ್ದ ಧ್ವಜದ ಕಟ್ಟೆಯನ್ನು ಜೆಸಿಬಿ ನೆರವಿನೊಂದಿಗೆ ತೆರವುಗೊಳಿಸಿದ್ದು ಹಿಂದು ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ.

ಜನವರಿ 14ರಂದು ಇಲ್ಲಿಯ ಪಕ್ಕದ ಜಾಲಿಯ ದೇವಿ ನಗರ ಬಳಿ ಕೂಡ ನಾಮಫಲಕ ಅಳವಡಿಸುವ ವಿಚಾರಕ್ಕಾಗಿ ಗಲಾಟೆ ನಡೆದು ಸಂಘರ್ಷಕ್ಕೆ ಕಾರಣವಾಗಿತ್ತು . ನಂತರ ಉಭಯ ಜನಾಂಗಗಳೊಂದಿಗೆ ಅಧಿಕಾರಿಗಳ ಸಂದಾನದ ನಂತರ ಅಲ್ಲಿಯೇ ಶಮನಗೊಂಡಿತ್ತು. ಆದ್ರೆ ತೆಂಗಿನಗುಂಡಿಯಲ್ಲಿ ನಾಮಫಲಕ,ಭಗವದ್ವಜದ ಜೊತೆ ಸ್ತಂಬದ ಕಟ್ಟೆಯನ್ನೂ ನಾಶಪಡಿಸಿದ ಅಧಿಕಾರಿಗಳ ನಡೆಗೆ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶ ಕ್ಕೆ ಕಾರಣವಾಗಿದ್ದು ಹೀಗಾಗಿ ಹೆಬಳೆ ಗ್ರಾಮ ಪಂಚಾಯತ್ ಮುಂದೆ ಹಿಂದೂಪರ ಸಂಘಟನೆ ಕಾರ್ಯಕರ್ತರು,ಗ್ರಾಮಪಂಚಾಯ್ತಿ ಸದಸ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:-ಶಂಕಿತ ಉಗ್ರನ ಜೊತೆ ಭಟ್ಕಳದ ವಿಚ್ಛೇದಿತ ಮಹಿಳೆ ಲಿಂಕ್ -ಲವ್ ಕಹಾನಿ ಹಿಂದಿತ್ತು ಕರಾಳ ಮುಖ!

ಈ ಹಿಂದೆಯೇ ಇಲ್ಲಿ ಧ್ವಜದ ಕಟ್ಟೆ ನಿರ್ಮಿಸಲು ಗ್ರಾಮ ಪಂಚಾಯ್ತಿ ಸದಸ್ಯರೆಲ್ಲರೂ ಒಪ್ಪಿದ್ದಾರೆ. ಹೀಗಿದ್ದರೂ ಜನವರಿ 26 ರಂದು ಸರ್ಕಾರಿ ರಜೆ ಇದ್ದರೂ ಅಧಿಕಾರಿಗಳು ಧ್ವಜ ಸ್ತಂಭ ನಾಶಮಾಡಿ ಕ್ರಮ ಕೈಗೊಂಡಿದ್ದಾರೆ,ಅಧ್ಯಕ್ಷರ ಗಮನಕ್ಕೂ ತಾರದೇ ಹೀಗೆ ನಾಶಮಾಡಲು ಅಧಿಕಾರಿಗಳಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಗ್ರಾಮಪಂಚಾಯ್ತಿ ಸದಸ್ಯ
ಸುಬ್ರಾಯ್ ದೇವಾಡಿಗ ಆಕ್ರೋಶ ವ್ಯಕ್ತಪಡಿಸಿದ್ರೆ ,ಇದಕ್ಕೆ ಗ್ರಾಮಪಂಚಾಯ್ತಿ ಅಧ್ಯಕ್ಷರಾದ
ಪಾರ್ವತಿ ನಾಯ್ಕ ಸಹ ದ್ವನಿಗೂಡಿಸಿದ್ದಾರೆ.

ಇನ್ನು ಗ್ರಾಮ ಪಂಚಾಯತಿಉಲ್ಲಿ ಹಿಂದೆ ವೀರ ಸಾವರ್ಕರ್ ವೃತ್ತದ ಹೆಸರಿಡುವ ಸಂಬಂಧ ಗ್ರಾಮದ ಜನರು ಗ್ರಾಮ ಪಂಚಾಯತ್ ಗೆ ಅರ್ಜಿ ನೀಡಿದ್ದರು. ಜೊತೆಗೆ ಅನಧಿಕೃತ ನಾಮಫಲಕವನ್ನು ತೆರವುಗೊಳಿಸುವ ಕುರಿತು ಗ್ರಾಮಪಂಚಾಯ್ತಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಹೀಗಾಗಿ ಅನುಮತಿ ಇಲ್ಲ ಎಂಬ ಕಾರಣ ನೀಡಿ ಹಿಂದೂ ಸಂಘಟನೆಯ ಯುವಕರು ನಿರ್ಮಿಸಿದ ಕಟ್ಟೆಯನ್ನ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇನ್ನು ನಾಮಫಲಕ ,ಭಗವದ್ವಜ ತೆಗೆಯುವ ಜೊತೆ ಕಟ್ಟೆಯನ್ನೂ ನೆಲಸಮ ಮಾಡಿದ್ದಕ್ಕೆ
ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ,ಸ್ಥಳೀಯರು ಸ್ಥಳದಲ್ಲಿಯೇ ಪುನಃ ಧ್ವಜ ಕಟ್ಟೆ ನಿರ್ಮಿಸಿದ್ದಾರಲ್ಲದೇ ವೀರ ಸಾವರ್ಕರ್ ಹೆಸರಿನಲ್ಲಿ ಬಾವುಟ ಹಾರಿಸುವ ಪಣ ತೊಟ್ಟಿದ್ದಾರೆ.ಈ ಘಟನೆ ಸೂಕ್ಷತೆ ಅರಿತ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದು . ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿದೆ.

ಇದನ್ನೂ ಓದಿ:-ಭಟ್ಕಳ ಹಿಂದೂ ಕಾರ್ಯಕರ್ತರಿಗೆ ವಿಡಿಯೋ ಮಾಡಿ ದುಬೈ ನಿಂದ ದಮ್ಕಿ ನೀಡಿದ ಮುಸ್ಲಿಂ ಯುವಕ!

ಸದ್ಯ ತೆಂಗಿನಗುಂಡಿಯಲ್ಲಿ ಜಿದ್ದಿಗೆ ಬಿದ್ಧ ಹಿಂದು ಸಂಘಟನೆ ಕಾರ್ಯಕರ್ತರು ಧ್ವಜವನ್ನ ಪುನಃ ನಿರ್ಮಾಣ ಮಾಡಿದ್ದಾರೆ, 15 ದಿನದಲ್ಲಿ ಗ್ರಾಮದ ಎಲ್ಲಾ ಅನಧಿಕೃತ ಬೋರ್ಡುಗಳನ್ನು ತೆರವು ಗೊಳಿಸಬೇಕು. ತೆರವುಗೊಳಿಸದೇ ಇದ್ರೆ ,ನಿರ್ಮಾಣ ಮಾಡಿರುವ ಧ್ವಜದ ಕಟ್ಟೆಗೆ ವೀರಸಾವರ್ಕರ್ ಬೋರ್ಡ್ ಅಳವಡಿಸುವ ಜೊತೆ ಭಗವದ್ವಜ ಹಾರಿಸುವ ಎಚ್ಚರಿಕೆಯನ್ನು ಬಿಜೆಪಿ ಮುಖಂಡ ಗೋವಿಂದನಾಯ್ಕ ಆಡಳಿತಕ್ಕೆ ಎಚ್ಚರಿಸಿದ್ದಾರೆ.

ಇನ್ನು ಹಿಂದೂ ಕಾರ್ಯಕರ್ತರ ಮನವಿಗೆ ಒಪ್ಪಿಗೆ ಸೂಚಿಸಿದ ತಹಶಿಲ್ದಾರ ತಿಪ್ಪೆಸ್ವಾಮಿ 15 ದಿನದ ಅವಕಾಶ ಕೋರಿದ ಕಾರಣ ಧ್ವಜ ಕಟ್ಟೆ ನಿರ್ಮಾಣ ಮಾಡಿದ ಹಿಂದೂ ಸಂಘಟನೆ ಕಾರ್ಯಕರ್ತರು ಧ್ವಜ ಹಾಗೂ ಬೋರ್ಡ್ ಹಾಕದೆ
ಸುಮ್ಮನಾಗಿದ್ದಾರೆ.

ಇದನ್ನೂ ಓದಿ:-Bhatkal ಜಾಲಿಯಲ್ಲಿ ನಾಮಫಲಕ ಸಂಘರ್ಷ- ಪೊಲೀಸ್ ಬಿಗಿ ಬಂದವಸ್ತ್!

ರಾಜ್ಯದ ವಿವಿದೆಡೆ ಧ್ವಜ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ , ಸೂಕ್ಷ್ಮ ಪ್ರದೇಶವೆಂದು ಬಿಂಬಿತವಾಗಿರುವ ಭಟ್ಕಳದಲ್ಲಿ ಸಹ ಅಧಿಕಾರಿಗಳ ,ಹಿಂದೂಪರ ಸಂಘಟನೆಗಳ ತಪ್ಪು ಗ್ರಹಿಕೆ ಸಂಘರ್ಷದ ಹಂತ ತಲುಪಿದ್ದು ಬೂದಿ ಮುಚ್ಚಿದ ಕೆಂಡದಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!