ಕಾರವಾರ: ಉತ್ತರ ಕನ್ನಡ (uttara kannada )ಜಿಲ್ಲೆಯಲ್ಲಿ ಹಲವು ಸಹಕಾರ ಸಂಘಗಳು ತಮ್ಮ ಗ್ರಾಹಕರಿಗೆ ವಂಚಿಸಿದ ಬೆನ್ನಲ್ಲೇ ಇದೀಗ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಕಾರ್ಯವ್ಯಾಪ್ತಿಗೆ ಒಳಪಡುವ 13 ಸಹಕಾರ ಸಂಘಗಳ ನೊಂದಣಿ ರದ್ದಿಗೆ ಇಲಾಖೆ ಮುಂದಾಗಿದೆ.
ಇದನ್ನೂ ಓದಿ:-Karwar | ಅರಗಾ ಬಳಿ ಭೀಕರ ಅಪಘಾತ –ರಸ್ತೆಯಲ್ಲೇ ಹೊತ್ತಿ ಉರಿದ ವಾಹನ ,ಸವಾರ ಸಾವು
13 ಸಹಕಾರಿ ಸಂಘಗಳು ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ,ಅಲ್ಲದೇ, ಸದರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಈ ತೀರ್ಮಾನಕ್ಕೆ ಇಲಾಖೆ ಮುಂದಾಗಿದೆ.
ಇದರಂತೆ ಕಾರವಾರದ ಕೆನರಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಶ್ರೀ ವಿಜಯಲಕ್ಷ್ಮೀ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಸುವರ್ಣಕಾರರ ಕೈಗಾರಿಕಾ ಸಹಕಾರ ಸಂಘ ನಿಯಮಿತ, ಕಾರವಾರ ಮಹಿಳಾ ಔದ್ಯೋಗಿಕ ಸಹಕಾರಿ ಸಂಘ ನಿಯಮಿತ, ದೇವಭಾಗ-ಕಣಸಗಿರಿ ಮೀನುಗಾರರ ಮಹಿಳಾ ಸಹಕಾರ ಸಂಘ ನಿಯಮಿತ, ದೇವಭಾಗದ ನವಸಾಕ್ಷರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ, ಕೆರವಡಿಯ ಶ್ರೀ ಸಾತೇರಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಚಿತ್ತಾಕುಲದ ಬಿಣಗಾ ಮೀನುಗಾರರ ಸಹಕಾರ ಸಂಘ ನಿಯಮಿತ, ಕಾರವಾರದ ಗೌರ್ನಮೆಂಟ್ ನೌಕರರ ಶ್ರೀ ಸಜ್ಜೇಶ್ವರ ಹೌಸಿಂಗ್ ಕೋ-ಆಪ್ ಸೊಸೈಟಿ ನಿಯಮಿತ, ಜೋಯಿಡಾದ ಮಾವಳಿಂಗ ಗಂಗಾ ಕಲ್ಯಾಣ ಯೋಜನಾ ಫಲಾನುಭವಿಗಳ ಸಹಕಾರ ಸಂಘ ನಿಯಮಿತ, ಆನ್ಮಿ ಕುಣಬಿ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ, ಹಳಿಯಾಳ ತಾಲೂಕಿನ ಸಾಂಬ್ರಾಣಿ ಅರಣ್ಯ ನಿವಾಸಿಗಳ ಅರಣ್ಯ ಉತ್ಪತ್ತಿ ಶೇಖರಣೆ ಗುತ್ತಿಗೆ ಮಾರಾಟ ಸಹಕಾರ ಸಂಘ ನಿಯಮಿತ ಹಾಗೂ ದಾಂಡೇಲಿಯ ಗೋಪಾಲ ಡೇರಿ ಆ್ಯಂಡ್ ಮಲ್ಪಿಪರ್ಪಸ್ ಕೋ-ಆಪ್ ಸೊಸೈಟಿ ನಿಯಮಿತ ಸಹಕಾರ ಸಂಘಗಳು ಈ ಪಟ್ಟಿಯಲ್ಲಿವೆ.
ಈ ಸಹಕಾರ ಸಂಘಗಳಲ್ಲಿ ಹಲವು ವರ್ಷಗಳಿಂದ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆದಿರುವುದಿಲ್ಲ. ಅಲ್ಲದೇ, ಸಂಘಗಳ ಕೊಡತಕ್ಕ ಹಾಗೂ ಬರತಕ್ಕ ಬಾಬ್ತುಗಳ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ:-Haliyala |ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ ಯುವಕ ಗಂಭೀರ
ಈ ಹಿನ್ನೆಲೆಯಲ್ಲಿ 13 ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗಳಿಗೆ ಕೊಡತಕ್ಕ ಅಥವಾ ವ್ಯಕ್ತಿಗಳಿಂದ ಬರತಕ್ಕ ಹಣಕಾಸು ಬಾಬ್ತುಗಳಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಈ ಪತ್ರಿಕಾ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ಕಾರವಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಸಂಬಂಧಪಟ್ಟವರು ಜಿ.ಕೆ. ರಾಮ್ ಬಿಲ್ಡಿಂಗ್, ಹಬ್ಬುವಾಡಾ, ಕಾರವಾರದಲ್ಲಿರುವ ಸಹಾಯಕ ನಿಬಂಧಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ:-Kumta | ನಾಡುಮಾಸ್ತಿಕೇರಿಯಲ್ಲಿ 62 ಅಕ್ರಮ ರೆಸಾರ್ಟ ತೆರವಿಗೆ ಕೋರ್ಟ ಆದೇಶ ಇದ್ರೂ ಅಧಿಕಾರಿಗಳ ಮೀನಾವೇಶ !
ನಿಗದಿತ 7 ದಿನಗಳ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಸದಿದ್ದಲ್ಲಿ, ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಸದರಿ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ನಂತರ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಾಪನಾಧಿಕಾರಿಗಳು ತಿಳಿಸಿದ್ದಾರೆ.
