
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಬಿಳೂರು ಪದವಿ ಪೂರ್ವ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ, ಪ್ರಾಂಶುಪಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲೆ ಡಾ. ಪುಷ್ಪಲತಾ ಅವರ ವರ್ತನೆಯಿಂದ ಬೇಸತ್ತಿದ್ದೇವೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ಕಾಲೇಜು ಆವರಣದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ‘ಡೌನ್ ಡೌನ್ ಪ್ರಿನ್ಸಿಪಾಲ್’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:-Sirsi| ಆಸ್ತಿ ವಿವಾದ ಸಹೋದರ ಮನೆ ಧ್ವಂಸ ಮಾಡಿದ ಸಹೋದರರು!
ವಿದ್ಯಾರ್ಥಿಗಳ ಆರೋಪದ ಪ್ರಕಾರ, ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ವಿದ್ಯಾರ್ಥಿಗಳ ಎದುರೇ ಪೋಷಕರಿಗೆ ಅಗೌರವದಿಂದ ಮಾತನಾಡುತ್ತಾರೆ ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಸೂಕ್ತ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಲೆಕ್ಚರರ್‌ಗಳಿಗೂ ವಿದ್ಯಾರ್ಥಿಗಳ ಎದುರೇ ದರ್ಪದಿಂದ ವರ್ತಿಸುತ್ತಾರೆ ಎಂಬ ಆರೋಪವನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾಡಿದ್ದಾರೆ.
ಪ್ರಾಂಶುಪಾಲರ ವರ್ತನೆಯಿಂದ ಕಾಲೇಜಿನಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿರುವ ವಿದ್ಯಾರ್ಥಿಗಳು, ಪ್ರಾಂಶುಪಾಲೆಯ ವರ್ಗಾವಣೆಯಾಗುವವರೆಗೂ ಕಾಲೇಜಿಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನೂರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಬಿಳೂರು ಪದವಿ ಪೂರ್ವ ಕಾಲೇಜಿನ ಬೆಳವಣಿಗೆ ಇದೀಗ ಗಮನ ಸೆಳೆದಿದೆ.
ವಿದ್ಯಾರ್ಥಿಗಳು ಮಾಡಿರುವ ಆರೋಪಗಳ ಕುರಿತು ಸಂಬಂಧಪಟ್ಟ ಕಾಲೇಜು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಅಧಿಕೃತ ಪ್ರತಿಕ್ರಿಯೆ ಲಭ್ಯವಾದ ಬಳಿಕ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.
