Snake|ಮಳೆಗಾಲ ಬಂದ್ರೆ ಹಾವಿನ ಕಾಟ! ಹಾವುಗಳಿಂದ ರಕ್ಷಣೆ ಹೇಗೆ? ಏನಂತಾರೆ ತಜ್ಞರು ಇಲ್ಲಿದೆ ಮಾಹಿತಿ.
ಕಾರವಾರ :- ಹಾವುಗಳೆಂದರೇ(snake) ಬಹುತೇಕ ಜನರು ಭಯ ಪಡುವವರೇ ಹೆಚ್ಚು. ಇನ್ನು ಕೆಲವರು ಹಾವು ಕಂಡ ಕೂಡಲೇ ಕೊಲ್ಲುತ್ತಾರೆ. ನಮ್ಮ ದೇಶದಲ್ಲಿ ಹಾವುಗಳನ್ನ ದೇವರೆಂದು ಪೂಜಿಸುವ ಸಂಪ್ರದಾಯ ಇರುವುದರಿಂದ ,ಹಾವುಗಳಿಗೂ ನಮಗೂ ಅನಾದಿಕಾಲದ ನಂಟಿದೆ.
ನಮ್ಮ ದೇಶದಲ್ಲಿ 300 ಕ್ಕೂ ಹೆಚ್ಚು ಹಾವಿನ ತಳಿಗಳಿದ್ದು ,ಅವುಗಳಲ್ಲಿ ಇನ್ನು ಹಲವು ತಳಿಗಳ ಪತ್ತೆಯಾಗಬೇಕಿದೆ.
ಇನ್ನು ವಿಷಯಕ್ಕೆ ಬರುವುದಾದರೇ ಮಳೆಗಾಲದಲ್ಲಿ ಹಾವುಗಳು ಮನೆಬಳಿ ಬರುತ್ತವೆ. ನಮ್ಮ ಮನೆಯಲ್ಲಿ ಹೆಬ್ಬಾವು ಕಂಡಿತು, ಕೊಳಗನಡಕ ಕಂಡಿತು ಹೀಗೆ ಜನ ಹೇಳುತ್ತಲೇ ಇರುತ್ತಾರೆ. ಆಗಾಗ ಹಾವುಗಳನ್ನ ಮನೆಗೆ ಬಂದಾಗ ಹಿಡಿಸಿ ಮತ್ತೆ ಕಾಡಿಗೆ ಬಿಡುತ್ತಾರೆ. ಕೆಲವು ಕಡೆ ಚಿಕ್ಕ ಪುಟ್ಟ ಹಾವುಗಳನ್ನ ಕೊಂದ ಉದಾಹರಣೆ ಕೂಡ ಇದೆ. ಪಶ್ಚಿಮ ಘಟ್ಟ ದಂತಹ ಉತ್ತರ ಕನ್ನಡ,ಶಿವಮೊಗ್ಗ, ಚಿಕ್ಕಮಗಳೂರು,ಉಡುಪಿ,ಮಂಗಳೂರು ಸೇರಿದಂತಹ ಭಾಗದಲ್ಲಿ ಹಾವುಗಳ ಸಂಖ್ಯೆ ಗಣನೀಯವಾಗಿದ್ದು , ಹಾವು ರಕ್ಷಕರು ತಿಂಗಳಿಗೆ ಈ ಜಿಲ್ಲೆಗಳಲ್ಲಿ ಕನಿಷ್ಟ ಎರಡರಿಂದ ಮೂರು ಸಾವಿರದ ವರೆಗೂ ರಕ್ಷಿಸಿ ಬಿಟ್ಟ ಉದಾಹರಣೆಗಳಿವೆ.
ಇನ್ನು ಕರ್ನಾಟಕದಲ್ಲಿ 2024-25 ನೇ ಸಾಲಿನ ಆರೋಗ್ಯ ಇಲಾಖೆ ಅಂಕಿ ಅಂಶದ ಪ್ರಕಾರ ವರ್ಷಕ್ಕೆ 13,235 ಜನರಿಗೆ ಕಡಿತ ಮಾಡಿದ್ರೆ, ಇದರಿಂದ 101 ಜನ ಸಾವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2024 ರ ಅಂಕಿ ಅಂಶದಲ್ಲಿ ಆರು ಜನರ ಸಾವಾಗಿತ್ತು. ಈ ವರ್ಷ 2026 ರಲ್ಲಿ ಎರಡು ಪ್ರಕರಣ ಮಾತ್ರ ವರದಿಯಾಗಿದೆ.

ಹಾಗಿದ್ರೆ ಹಾವು ಏಕೆ ಮನೆಯ ಬಳಿ ಬರುತ್ತದೆ? ಸುರಕ್ಷಿತ ಕ್ರಮ ಏನು?
ಹಾವುಗಳು ಮಾರ್ಚ -ಎಪ್ರಿಲ್ ನಲ್ಲಿ ಸಾಮಾನ್ಯವಾಗಿ ಸಂಯೋಗ (mating) ಮಾಡುತ್ತವೆ. ಮೊಟ್ಟೆಗಳನ್ನ ಎಪ್ರಿಲ್ ನಿಂದ ಜೂನ್ ಪ್ರಾರಂಭದ ಒಳಗೆ ಇಡುತ್ತವೆ.
ಇದನ್ನೂ ಓದಿ:-Banavasi| ವಿಶಪೂರಿತ ಹಾವು ಕಡಿದು ಪುಟ್ಟ ಬಾಲಕ ಸಾವು-ಸಹೋದರಿಗೆ ಚಿಕಿತ್ಸೆ
ಕಾರವಾರದ ಅರಣ್ಯ ವಿಭಾಗದ ಉರುಗ ಸಂಶೋಧನೆ ಹಾಗೂ ರಕ್ಷಣೆಯಲ್ಲಿ ತೊಡಗಿರುವ ಗಸ್ತುವನ ಪಾಲಕ ಗೋಪಾಲ ನಾಯ್ಕ.ಡಿ ರವರು ಹೇಳುವಂತೆ ಹಾವುಗಳಲ್ಲಿ ಬಹುತೇಕ ಹಾವುಗಳು ಮಳೆಗಾಲ ಬರುವ ಪೂರ್ವದಲ್ಲೇ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಹಾವುಗಳು ಮೊಟ್ಟೆಗೆ ಕಾವು ಕೊಡುವುದಿಲ್ಲ. ಬಹುತೇಕ ಹಾವುಗಳು ಮೊಟ್ಟೆ ಒಡೆದು ಮರಿ ಹೊರಗೆ ಬರಲು ಬೇಕಾದ ವಾತಾವರಣನ್ನ ಗ್ರಹಿಸಿ ಅಂತಹ ಬಿಲದ ಪೊಟರೆ, ಮಣ್ಣಿನ ಪೊಟರೆಯಲ್ಲಿ ನೋಡಿ ಮೊಟ್ಟೆ ಇಡುತ್ತವೆ.

ನಾಗರಹಾವು ಮೊಟ್ಟೆ ಇಟ್ಟ ನಂತರ ಮೊಟ್ಟೆಗಳ ಮೇಲೆ ಮಣ್ಣನ್ನ ಹಾಕಿ ಮೊಟ್ಟೆ ಒಡೆಯಲು ಬೇಕಾದ ವಾತಾವರಣ ಸೃಷ್ಟಿಸುತ್ತವೆ. ಇನ್ನು ಕಾಳಿಂಗ ಸರ್ಪ ಮಾತ್ರ ಎಲೆಗಳನ್ನ ಒಟ್ಟುಮಾಡಿ ಗೂಡನ್ನ ಕಟ್ಟಿ ಅಲ್ಲಿ ಮೊಟ್ಟೆಒಡೆಯಲು ಬೇಕಾದ ವಾತಾವರಣ ಸೃಷ್ಟಿ ಮಾಡುತ್ತವೆ. ಆದರೇ ಮೊಟ್ಟೆಗೆ ಕಾವು ಕೊಡುವುದಿಲ್ಲ ಬದಲಾಗಿ ಗೂಡಿನ ಮಧ್ಯಭಾಗದಲ್ಲಿ ಮೊಟ್ಟೆ ಇಟ್ಟು ಸುತ್ತಲೂ ವೃತ್ತಾಕಾರವಾಗಿ ಮುದುಡಿಕೊಂಡು ,ತಾನಿದ್ದು ರಕ್ಷಣೆ ಮಾಡುತ್ತವೆ.
ಮಳೆಗಾಲದಲ್ಲೇ ಹಾವು ಕಾಣಿಸಿಕೊಳ್ಳುವುದು ಏಕೆ ?

ಬಹುತೇಕ ಹಾವುಗಳು ಜೂನ್ ಪ್ರಾರಂಭದ ಮೊದಲೇ ಮೊಟ್ಟೆಯಿಟ್ಟು ಮರಿ ಆಗುವಂತೆ ನೋಡಿಕೊಳ್ಳುತ್ತವೆ.ಕೆಳಭಾಗದ ಮೊಟ್ಟೆಗಳು ಹೆಣ್ಣು ,ಮೇಲ್ಭಾಗದ ಮೊಟ್ಟೆಗಳು ಗಂಡಾಗಿ ಹುಟ್ಟುವುದು ಪ್ರಕೃತಿಯ ವಿಶೇಷತೆಯಲ್ಲಿ ಒಂದಾಗಿದ್ದು ,ಗೂಡಿನ ತಾಪಮಾನ,ಹವಮಾನವೇ ಮೇಲ್ ಮತ್ತು ಫೀಮೇಲ್ ಹಾವುಗಳು ಹುಟ್ಟುವಂತೆ ಆಯ್ಕೆಯನ್ನು ನೋಡಿಕೊಳ್ಳುತ್ತದೆ.
ಇನ್ನು ತನ್ನ ಮರಿಗಳು ಹಸಿವಿನಿಂದ ಸಾಯಬಾರದು, ಅವುಗಳಿಗೆ ಆಹಾರ ಸಿಗಬೇಕು ಎಂಬದನ್ನ ಅವು ಅರಿತಿರುತ್ತದೆ.ಹೀಗಾಗಿಯೇ ಮಳೆಗಾಲದಲ್ಲಿ ಮರಿಗಳು ಹೊರಬರುತ್ತವೆ. ಈ ಸಂದರ್ಭದಲ್ಲಿ ಕಪ್ಪೆಗಳು ಮರಿ ಮಾಡುತ್ತವೆ.
ಮಳೆಗಾಲದ ಪ್ರಾರಂಭದಲ್ಲಿ ಕಪ್ಪೆಗಳು ಚಿಕ್ಕದಾಗಿದ್ದು ಹಾವಿನ ಮರಿಗಳಿಗೆ ಇವೇ ಆಹಾರವಾಗಿರುತ್ತದೆ. ಯಾವ ಹಾವು ಕೂಡ ತನ್ನ ಮರಿಗಳನ್ನ ಪೋಷಣೆ ಮಾಡುವುದಿಲ್ಲ. ಮೊಟ್ಟೆಯಿಂದ ಹೊರಬಂದ ಹಾವುಗಳು ತನ್ನನ್ನು ತಾನೇ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಹಾವುಗಳು ಹೆಚ್ಚು ಮೊಟ್ಟೆಯಿಟ್ಟು ಮರಿ ಮಾಡಿದರೂ ಪೋಷಣೆ ಮಾಡದೇ ಇರುವುದರಿಂದ ಬದುಕುವುದು ಅತ್ಯಲ್ಪ. ಪಕ್ಷಿ,ಪ್ರಾಣಿಗಳ ದಾಳಿಗೆ ಒಳಗಾಗಿ ಅವುಗಳಿಗೆ ಆಹಾರವಾಗುತ್ತದೆ. ಹೀಗಾಗಿಯೇ ಹಲವು ಹಾವುಗಳ ಸಂತತಿ ಕ್ಷೀಣಿಸುವಂತಾಗಿದೆ.
ಗಡಿ ಗುರುತಿಸುವ ಹಾವುಗಳು!

ನಾಗರಹಾವು, ಹೆಬ್ಬಾವು,ಕಾಳಿಂಗ ಸರ್ಪ ಸೇರಿದಂತೆ ಹಲವು ಹಾವುಗಳು ತನ್ನ ಗಡಿಯನ್ನ ಗುರುತಿಸಿಕೊಳ್ಳುತ್ತವೆ. ಅದು ಮೂರರಿಂದ ನಾಲ್ಕು ಕಿಲೋಮೀಟರ್ ವರೆಗೂ ತನ್ನ ಗಡಿಯನ್ನ ಹೊಂದಿರುತ್ತದೆ ,ಹೆಬ್ಬಾವು ಮಾತ್ರ ಒಂದು ಕಿಲೋಮೀಟರ್ ವ್ಯಾಪ್ತಿ ಹೊಂದಿರುತ್ತದೆ ಎನ್ನುತ್ತಾರೆ ಉರುಗ ರಕ್ಷಕ ಹಾಗೂ ಅರಣ್ಯ ಇಲಾಖೆಯ ಗಸ್ತುವನ ಪಾಲಕ ಗೋಪಾಲ ನಾಯ್ಕ.ಡಿ ರವರು.ಗಡಿಯನ್ನ ಗುರುತಿಸುವಾಗ ಅವು ತಮಗೆ ಸಿಗುವ ಸೂಕ್ತ ಆಹಾರ,ಬದುಕಲು ಬೇಕಾದ ವಾತವಾರಣವನ್ನ ನೋಡಿಕೊಂಡು ಆ ಭಾಗದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುತ್ತವೆ.
ಹಾವು ಬರದಂತೆ ತಡೆಯಲು ಮನೆಯ ಸುತ್ತಮುತ್ತ ಸ್ವಚ್ಛವಾಗಿಡಿ.
ಹಾವುಗಳು ಆಹಾರ ಅರಸಿ ತಾನು ಆಯ್ಕೆಮಾಡಿಕೊಂಡ ಪರಿದಿಯಲ್ಲಿ ಓಡಾಡುತ್ತವೆ. ಹಾವುಗಳು ಕಪ್ಪೆ,ಇಲಿಗಳನ್ನ ಹುಡುಕಿ ತನ್ನ ಪರಿದಿಯಲ್ಲಿ ಸಂಚರಿಸುತ್ತವೆ. ಈ ಪರಿದಿಯಲ್ಲಿ ಮಾನವರಾದ ನಾವುಕೂಡ ಒಳಗೊಂಡಿರುವುದರಿಂದ ನಮಗೆ ಆಗಾಗ ಹಾವುಗಳು ಕಾಣುವುದು ಸಾಮಾನ್ಯ.
ಇದನ್ನೂ ಓದಿ:-Gokarna |ಗೋಕರ್ಣ ದಲ್ಲಿ ಶಿಲಾಮೂರ್ತಿ ಸವಕಳಿ ಸ್ಪರ್ಶ ದರ್ಶನ ನಿಷೇಧ
ಹಾವುಗಳು ಮನೆಗೆ ಬಾರದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಹೊಣೆ. ಹೀಗಾಗಿ ಮನೆಯ ಸುತ್ತಮುತ್ತ ಸ್ವಚ್ಛವಾಗಿಡುವುದು ಮುಖ್ಯ. ಮನೆಯ ಸುತ್ತಲೂ ಕಟ್ಟಿಗೆ ,ಹುಲ್ಲು ಅಥವಾ ತ್ಯಾಜ್ಯಗಳು ಇರದಂತೆ ನೋಡಿಕೊಳ್ಳಬೇಕು . ಇಲ್ಲವಾದರೇ ಇಲಿಗಳು ,ಕಪ್ಪೆಗಳು ಆ ಭಾಗದಲ್ಲಿ ವಾಸ ಮಾಡುವುದರಿಂದ ಹಾವುಗಳು ಇವುಗಳನ್ನ ಅರಸಿ ಬರುತ್ತವೆ. ಮನೆಯ ಸುತ್ತಲೂ ಸಗಣಿ,ಗೋಮೂತ್ರ ಹಾಕಿ ಸಾರಿಸುವುದರಿಂದ ಹಾವುಗಳು ಬರುವುದನ್ನ ತಪ್ಪಿಸಬಹುದು ಎನ್ನುತ್ತಾರೆ ಗೋಪಾಲ್ .
ಇದಲ್ಲದೇ ಮನೆಯ ಒಳಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು . ಪಿನಾಯಿಲ್ ಗಳನ್ನ ಹಾಕಿ ಸ್ವಚ್ಛಗೊಳಿಸಿ ಅವುಗಳ ಸುಗಂಧ ಇರುವಂತೆ ನೋಡಿಕೊಂಡರೇ ಅವುಗಳ ಪರಿಮಳಕ್ಕೆ ಹಾವು ಹತ್ತಿರ ಸುಳಿಯುವುದಿಲ್ಲ.ಇದಲ್ಲದೇ ಮನೆಯಲ್ಲಿ ಧೂಪ ಹಚ್ಚುವುದರಿಂದ ಕೂಡ ಹಾವು ದೂರು ಹೋಗುತ್ತವೆ. ಇನ್ನು ಕೋಳಿ ಸಾಕಾಣಿಕೆ ಭಾಗದಲ್ಲಿ ವಾಸನೆ ,ಗಲೀಜು ಇರದಂತೆ ನೋಡಿಕೊಂಡರೇ ಕೋಳಿ ಜೊತೆ ಮನುಷ್ಯನೂ ಸುರಕ್ಷಿತವಾಗಿರಬಹುದು.
ಮನೆಗೆ ಹಾವು ಬಂದಾಗ ಅವುಗಳನ್ನ ಹಿಡಿದು ಬೇರೆಡೆ ಬಿಡುವುದು ಸುಲಭ .ಆದರೇ ಅವು ಅಲ್ಲಿ ಹೊಂದಿಕೊಳ್ಳಲು ತಿಂಗಳುಗಳು ಬೇಕು.ಇದಲ್ಲದೇ ಮತ್ತೆ ತನ್ನ ಸುರಕ್ಷಿತ ಸ್ಥಳ ಆಯ್ತೆ ಮಾಡಿಕೊಳ್ಳಲು ಅವು ಸಾಕಷ್ಟು ಶ್ರಮ ಹಾಕುತ್ತವೆ. ಹಾಗಾಗಿ ಮನೆಗೆ ಹಾವು ಬರದಂತೆ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೇ ಹಾವು ಬರುವುದನ್ನ ತಪ್ಪಿಸಬಹುದು. ಹಾವು ಮನೆಯ ಸುತ್ತಮುತ್ತ ಓಡಾಡಿದೆ ಎಂದಾಕ್ಷಣ ಅವು ಅಲ್ಲಿಯೇ ಇರುವುದಿಲ್ಲ.ಆದರೇ ಇಲಿಗಳ ಮೂತ್ರ ವಾಸನೆ , ಹಿಕ್ಕೆಗಳ ವಾಸನೆ ಇದ್ದಲ್ಲಿ ಮಾತ್ರ ತನ್ನ ಬೇಟೆಗಾಗಿ ಅಲ್ಲಿಯೇ ಕಾದು ಇರುತ್ತವೆ ಅಷ್ಟೆ.ಹೀಗಾಗಿ ಮನೆ ಸುತ್ತಮುತ್ತ ಸ್ವಚ್ಛವಾಗಿದ್ದರೇ ಹಾವುಗಳು ಬರುವುದನ್ನ ನಿಯಂತ್ರಿಸಬಹುದು.
ಹಾವು ಕಚ್ಚಿದರೇ ಏನು ಮಾಡಬೇಕು?
ಎಲ್ಲಾ ಹಾವುಗಳು ವಿಷವಲ್ಲ. ನಮ್ಮ ಕರ್ನಾಟಕದಲ್ಲಿ 9 ಹಾವುಗಳು ವಿಷಕಾರಿ ಹಾವುಗಳು. ಸಮುದ್ರದಲ್ಲಿನ ಹಾವು ಸೇರಿ ಒಟ್ಟು 10 ವಿಷಕಾರಿ ಹಾವುಗಳಿವೆ.
ಮನುಷ್ಯನಿಗೆ ಹೆಚ್ಚಾಗಿ ನಾಗರಹಾವು ,ಕಟ್ಟುಹಾವು , ಕೊಳಕುಮಂಡಲ, ರಕ್ತಮಂಡಲ ಇವುಗಳೇ ಕಡಿತವಾಗಿ ಹೆಚ್ಚಾಗಿ ಸಾವು ಕಂಡಿದ್ದಾರೆ. ಇದಕ್ಕೆ ಕಾರಣ ಇವು ಮನುಷ್ಯನು ವಾಸಿಸುವ ಸ್ಥಳದಲ್ಲೇ ಹೆಚ್ಚಾಗಿ ಇರುತ್ತವೆ. ಇನ್ನು ವಿಶೇಷ ಎಂದರೇ ಇವುಗಳಿಂದಲೇ ಆ್ಯಂಟಿ ಡೋಸ್ ತಯಾರಿಸಿ ಹಾವು ಕಡಿದವರಿಗೆ ನೀಡುತ್ತಾರೆ.
ನಾಗರಹಾವು ,ಕಾಳಿಂಗ ಸರ್ಪ ,ಕಟ್ಟುಹಾವು (ಕಾಮನ್ ಕ್ರೈಟ್), ಕೊಳಕುಮಂಡಲ (ರಸೆಲ್ಸ್ ವೈಪರ್), ರಕ್ತ ಮಂಡಲ ,ಹಂಪ್-ನೋಸ್ಡ್ ಪಿಟ್ ವೈಪರ್ (Hypnale hypnale)( ಪಶ್ಚಿಮ ಘಟ್ಟದಲ್ಲಿ ಮಾತ್ರ)ಸೇರಿದಂತೆ ಸಮುದ್ರದಲ್ಲಿ ಇರುವ ಹಾವುಗಳು ಸೇರಿ 10 ಹಾವುಗಳು ವಿಷವನ್ನ ಹೊಂದಿದೆ.
ಹೀಗಾಗಿ ಹಾವು ಕಚ್ಚಿದಾಗ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.
ಇದನ್ನು ಮಾಡಬೇಡಿ.
ಹಾವು ಕಚ್ಚಿದಾಗ ಟೂರ್ನಿಕೇಟ್ ಅಥವಾ ಬಿಗಿಯಾಗಿ ಬಟ್ಟೆ ಕಟ್ಟಬೇಡಿ,ಗಾಯವನ್ನು ಕತ್ತರಿಸಬೇಡಿ,ವಿಷವನ್ನು ಬಾಯಿಯಿಂದ ಹೀರಲು ಪ್ರಯತ್ನಿಸಬೇಡಿ.
ಐಸ್, ಮಣ್ಣು, ಕಾಫಿ ಪುಡಿ, ಅರಿಶಿನ, ಔಷಧಿ ಗಿಡಮೂಲಿಕೆಗಳು ಅಥವಾ ಯಾವುದೇ ಲೇಪ ಹಚ್ಚಬೇಡಿ.ಮದ್ಯ ಅಥವಾ ಅನಗತ್ಯ ಔಷಧಿಗಳನ್ನು ಕೊಡಬೇಡಿ.
ಮಂತ್ರ, ತಾಯಿತ ಅಥವಾ ಮನೆಮದ್ದುಗಳನ್ನು ನಂಬಿ ಆಸ್ಪತ್ರೆಗೆ ಹೋಗುವುದನ್ನು ವಿಳಂಬ ಮಾಡಿದರೇ ಜೀವಕ್ಕೆ ಕುತ್ತು ಕಟ್ಟಿಟ್ಟ ಬುತ್ತಿ.
ಅಪಾಯಕಾರಿ ಲಕ್ಷಣಗಳು ಯಾವುದು?
ಕೆಲವೊಮ್ಮೆ ಯಾವು ಹಾವು ಕಚ್ಚಿದೆ ಎಂಬ ಬಗ್ಗೆ ನಮಗೆ ಅರಿವು ಇರುವುದಿಲ್ಲ. ಆದಷ್ಟು ವೈದ್ಯರಿಗೆ ಹಾವಿನ ಬಣ್ಣ ,ಲಕ್ಷಣಗಳನ್ನ ನೆನಪಿಟ್ಟು ತಿಳಿಸಿ. ಇಲ್ಲವೇ ನಿಮ್ಮಬಳಿ ಮೊಬೈಲ್ ಇದ್ದಾಗ ಫೋಟೋವನ್ನಾದರೂ ತೆಗೆದುಕೊಳ್ಳಿ. ಇದು ನಿಮ್ಮ ಜೀವ ರಕ್ಷಣೆ ಮಾಡುತ್ತದೆ.
ಹಾವು ಕಚ್ಚಿದ ಸ್ಥಳದಲ್ಲಿ ಊತ ಮತ್ತು ತೀವ್ರ ನೋವು,ಕಣ್ಣು ಮಂಕಾಗುವುದು ಅಥವಾ ರೆಪ್ಪೆ ಬೀಳುವುದು,ಉಸಿರಾಟದ ತೊಂದರೆ,ಮಾತು ನುಂಗಲು ಕಷ್ಟವಾಗುವುದು,ವಾಂತಿ, ತಲೆಸುತ್ತು,ಮೂತ್ರ ಅಥವಾ ಒಸಡುಗಳಿಂದ ರಕ್ತಸ್ರಾವ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗುವುದನ್ನ ಮರೆಯಬೇಡಿ.
ಇದನ್ನೂ ಓದಿ:-Mundgod| ಹತ್ತು ಅಡಿ ಉದ್ದದ ಹೆಬ್ಬಾವು,ನಾಗರಹಾವು ರಕ್ಷಣೆ | ವಿಡಿಯೋ ನೋಡಿ
ಹಾವುಗಳ ದ್ವೇಶ 12 ವರ್ಷ ಎನ್ನುತ್ತಾರೆ. ಇದು ತಪ್ಪು .ಹಾವುಗಳು ದ್ವೇಶ ಇಟ್ಟುಕೊಳ್ಳುವುದಿಲ್ಲ. ತಮ್ಮ ರಕ್ಷಣೆಗೆ ಮಾತ್ರ ಅವು ಕಚ್ಚುತ್ತವೆ. ಹೀಗಾಗಿ ರಾತ್ರಿ ವೇಳೆ ತೋಟ,ಮನೆಯಿಂದ ಹೊರ ಹೋಗುವವರು ಕೈನಲ್ಲಿ ಟಾರ್ಚ ಇರಲಿ. ಕಾಲಿಗೆ ಬೂಟ್ ಧರಿಸಿದರೆ ಉತ್ತಮ.
ಹಾವುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿಕರಿಗೆ ಸ್ನೇಹಿಯಾಗಿರುವ ಇವು ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಹಾವುಗಳ ವಿಷದಿಂದ ಕ್ಯಾನ್ಸರ್,ಬಿಪಿ,ಷುಗರ್ , ಬ್ರೈನ್ ಟ್ಯೂಮರ್ ,ಹೃದಯ ಸಂಬಂಧಿ ಕಾಯಿಲೆಗೆ ಔಷಧ ತಯಾರಿಸಲಾಗುತ್ತದೆ.ಹೀಗಾಗಿ ಜೈವಿಕ ವೈವಿದ್ಯತೆಯನ್ನು ಕಾಪಾಡುವ ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
